

ಅರಸೀಕೆರೆ: ತಾಲೂಕಿನ ಹಾರನಹಳ್ಳಿ ಕೋಡಿಮಠಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಕುಟುಂಬ ಸದಸ್ಯರೊಂದಿಗೆ ಅಮವಾಸ್ಯೆ ದಿನ ಬುಧವಾರ ಆಗಮಿಸಿ ಶ್ರೀ ಶಿವಲಿಂಗಜ್ಜಯ್ಯ ಗದ್ದುಗೆಗೆ ಪೂಜೆ ಸಲ್ಲಿಸಿ, ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳ ಆಶೀರ್ವಾದ ಪಡೆದರು.
ಶ್ರೀಮಠಕ್ಕೂ ನಮಗೂ ಅವಿನಾಭಾವ ಸಂಬಂಧವಿದೆ. ಚುನಾವಣೆಗೂ ಮೊದಲು ಶ್ರೀಗಳು ನಿಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದ್ದು ಮಂತ್ರಿಯಾಗುತ್ತೀರಿ ಎಂದು ನುಡಿದಿದ್ದರು. ಇದೀಗ ಸ್ವಾಮೀಜಿ ಹೇಳಿದಂತೆಯೇ ಸಚಿವನಾಗಿರುವುದು ಸಂತಸವಾಗಿದೆ. ಆದ್ದರಿಂದಲೇ ಕ್ಷೇತ್ರಕ್ಕೆ ಆಗಮಿಸಿ ದೇವರು ಹಾಗೂ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕ್ಷೇತ್ರ ಒಳಗೊಂಡಂತೆ ಎಲ್ಲ ರೀತಿಯ ಕಾರ್ಯಗಳನ್ನು ಶತಮಾನಗಳಿಂದ ಪೀಠಾಧ್ಯಕ್ಷರು ನಡೆಸಿಕೊಂಡು ಬರುತ್ತಿರುವುದು ಇತರರಿಗೆ ಪ್ರೇರಣೆಯಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ಬಣ್ಣಿಸಿದರು.
ಶ್ರೀಮಠದ ಉತ್ತರಾಧಿಕಾರಿ ಚೇತನ್ ಮರಿದೇವರು, ಸಚಿವರ ಪತ್ನಿ ಧನಲಕ್ಷ್ಮೀ, ಶಾಸಕ ಕೆ.ಎಂ.ಶಿವಲಿಂಗೇಗೌಡ ಇತರರು ಇದ್ದರು.