ಕರಬಸಯ್ಯನವರು ನಮಗೆಲ್ಲ ಮಾದರಿ

Oplus_131072
 ಹಾರಕೂಡದಲ್ಲಿ ಪೂಜ್ಯ ಲಿಂ.ಕರಬಸಯ್ಯಸ್ವಾಮಿ ಅವರ ಪುಣ್ಯಸ್ಮರಣೋತ್ಸವದ ನಿಮಿತ್ತ ಆಯೋಜಿಸಿದ್ದ ಕಲ್ಯಾಣ ಕರ್ನಾಟಕದ ೯ನೇ ಸಂಗೀತ ದಿನಾಚರಣೆಯಲ್ಲಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಕಲ್ಯಾಣ ಕರ್ನಾಟಕ ಸಂಗೀತ ರತ್ನ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಿದರು. ಶ್ರೀ ಡಾ.ಚನ್ನಬಸವಾನಂದ ಸ್ವಾಮೀಜಿ, ಸುಭಾಷಚಂದ್ರ ನಾಗರಾಳೆ, ಪಂಡಿತರಾವ ಚೌಧರಿ ಇತರರಿದ್ದರು.
Published on

ಬಸವಕಲ್ಯಾಣ: ಗುರು ಸೇವೆಯೊಂದಿಗೆ ಸಂಗೀತವನ್ನು ತಮ್ಮ ಬದುಕಿನ ಪ್ರಧಾನ ಅಂಗವಾಗಿಸಿಕೊಂಡು ಇಡೀ ಜೀವನವನ್ನೇ ಭಕ್ತಿಯ ಗಾಯನವನ್ನಾಗಿ ರೂಪಿಸಿಕೊಂಡ ಕರಬಸಯ್ಯನವರು ನಮಗೆಲ್ಲ ಮಾದರಿ ಎಂದು ಕುಂಬಳಗೋಡು ಚನ್ನಬಸವೇಶ್ವರ ಜ್ಞಾನ ಪೀಠದ ಪೀಠಾಧ್ಯಕ್ಷ ಶ್ರೀ ಡಾ.ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಚನ್ನರೇಣುಕಾ ಬಸವ ಮಂಟಪದಲ್ಲಿ ಪೂಜ್ಯ ಲಿಂ.ಕರಬಸಯ್ಯಸ್ವಾಮಿ ಪುಣ್ಯಸ್ಮರಣೋತ್ಸವದ ನಿಮಿತ್ತ ಶುಕ್ರವಾರ ರಾತ್ರಿ ಶ್ರೀ ಚನ್ನವೀರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕದ ೯ನೇ ಸಂಗೀತ ದಿನಾಚರಣೆ ಹಾಗೂ ಕಲ್ಯಾಣ ಕರ್ನಾಟಕ ಸಂಗೀತ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನೇತೃತ್ವ ವಹಿಸಿ ಅವರು ಮಾತನಾಡಿದರು.

ಶಿವಪಥವನರಿಯಲು ಗುರುಪಥವೇ ಮೊದಲು ಎನ್ನುವ ಬಸವವಾಣಿಯಂತೆ ಗುರು ದೀಕ್ಷೆಯಿಂದ ಗುರುತೋರಿದ ಮಾರ್ಗದಲ್ಲಿ ಸಾಗಿದರೆ ಶಿವಪಥವ ಅನುಭವಿಸಲು ಸಾಧ್ಯ. ಚನ್ನವೀರ ಶಿವಾಚಾರ್ಯರ ದೂರದೃಷ್ಟಿ ನಿಲುವಿನಿಂದಾಗಿ ಹಾರಕೂಡದ ಮಠ ಜನಕಲ್ಯಾಣದ ಕೇಂದ್ರವಾಗಿ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಸಮಾರಂಭ ಉದ್ಘಾಟಿಸಿದ ನ್ಯಾಯವಾದಿ ಪಂಡಿತರಾವ ಚೌಧರಿ ಮಾತನಾಡಿ. ಪ್ರಪಂಚದಲ್ಲಿ ಸಂಗೀತಕ್ಕೆ ದೊಡ್ಡ ಶಕ್ತಿ ಇದ್ದು. ಅನೇಕ ವಿಸ್ಮಯಗಳಿಗೆ ಸಾಕ್ಷಿಯಾಗಿದೆ. ಕರಬಸಯ್ಯಸ್ವಾಮಿ ಪುಣ್ಯಸ್ಮರಣೋತ್ಸವವೆಂದರೆ ಅದು ಸಂಭ್ರಮದ ಸಂಗೀತೋತ್ಸವ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ ಮಾತನಾಡಿ, ಹಾರಕೂಡ ಮಠವೆಂದರೆ ದಾಸೋಹದ ಮಠ, ಇದಕ್ಕೆ ಮೂಲ ಪ್ರೇರಣೆ ಲಿಂ.ಕರಬಸಯ್ಯಸ್ವಾಮಿಯವರು. ಮಠದಲ್ಲಿ ನಿರಂತರವಾಗಿ ಜ್ಞಾನ ದಾಸೋಹ-ಅನ್ನ ದಾಸೋಹ ನಡೆಯುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಮುಖರಾದ ಬಾಬು ಹೊನ್ನಾ ನಾಯಕ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ಮಲ್ಲಿನಾಥ ಹಿರೇಮಠ, ಗುಂಡಯ್ಯ ಸ್ವಾಮಿ ಪೊಲೀಸ ಪಾಟೀಲ ಆಲೂರ, ಗುರುಸಿದ್ದಯ್ಯ ಮಠಪತಿ, ಜಗದೇವಿ ಶರಣಯ್ಯ ಮಠಪತಿ, ರೇವಣಸಿದ್ದಯ್ಯ ಮಠಪತಿ, ರೇವಣಸಿದ್ದಯ್ಯ ಮಠಪತಿ ಕಲಬುರಗಿ, ದಯಾನಂದ ಹಿರೇಮಠ, ಸಿದ್ದಯ್ಯ ಆರ್.ಮಠ, ನಾಗಯ್ಯ ಮಠಪತಿ, ದಿಲೀಪಕುಮಾರ ಸ್ವಾಮಿ, ಶಿವಕುಮಾರ ಸ್ವಾಮಿ, ಶಂಕ್ರಯ್ಯ ಸ್ವಾಮಿ, ಬಸವರಾಜ ಕರಬಸಯ್ಯಸ್ವಾಮಿ, ರಾಜಕುಮಾರ ಸ್ವಾಮಿ, ಡಾ.ಶಿವಶರಣಯ್ಯ ಮಠಪತಿ ಇದ್ದರು.

ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ ಸ್ವಾಗತಿಸಿ ನಿರೂಪಣೆ ಮಾಡಿದರು. ವಿಠಲ ಹೂಗಾರ ವಂದಿಸಿದರು. ಶ್ರಿ ಚನ್ನಬಸವೇಶ್ವರ ಭಜನಾ ಸಂಘ ಹಾರಕೂಡ ಸೇರಿ ೫೦ಕ್ಕೂ ಹೆಚ್ಚು ಜನ ಕಲಾವಿದರಿಂದ ರಾತ್ರಿವಿಡೀ ಸಂಗೀತ ಕಾರ್ಯಕ್ರಮ ಜರುಗಿತು. ಶಾಲಾ ಮಕ್ಕಳು ಸಾಂಸ್ಕೃತಿಕ ನೃತ್ಯ ನಡೆಸಿಕೊಟ್ಟರು.

ಹಲವರಿಗೆ ಪ್ರಶಸ್ತಿ ಪ್ರದಾನ: ಬೆಂಗಳೂರಿನ ಚಲನಚಿತ್ರ ಹಿನ್ನೆಲೆ ಗಾಯಕ ರವೀಂದ್ರ ಸೋರಗಾಂವಿ, ಭಾಲ್ಕಿಯ ತಬಲಾವಾದಕ ಡಾ.ಕೇಶವರಾವ ಸೂರ್ಯವಂಶಿ, ಸದಾಶಿವ ಪಾಟೀಲ ಬೇನೂರ, ಕಲಾವಿದ ಪಂಡಿತ ವೆಂಕಟೇಶ ಆಲಕೋಡ ಗದಗ ಹಾಗೂ ಶರಣಕುಮಾರ ಜಾಲಹಳ್ಳಿ ನಾಲವಾರ ಅವರಿಗೆ ತಲಾ ೧೦ ಸಾವಿರ ರೂ. ನಗದು, ಪ್ರಶಸ್ತಿ ಪತ್ರದೊಂದಿಗೆ ಕಲ್ಯಾಣ ಕರ್ನಾಟಕ ಸಂಗೀತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net