

ಬಸವಕಲ್ಯಾಣ: ಹಾರಕೂಡ ಮಠದಲ್ಲಿ ಗುರು-ವಿರಕ್ತ ಪರಂಪರೆಯ ಸಮನ್ವಯತೆ ಇದೆ. ಎಲ್ಲರೂ ನಮ್ಮವವರು, ಎಲ್ಲರೂ ಒಂದು ಎನ್ನುವ ಭಾವವಿದೆ. ಈ ಸಂಸ್ಕೃತಿ ಎಲ್ಲೆಡೆ ಬಿತ್ತಬೇಕಿದೆ. ಈ ಮಠದ ತತ್ವ ಸಿದ್ದಾಂತ ದೇಶಕ್ಕೆ ಆದರ್ಶವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ, ಪ್ರಶಸ್ತಿ ಪುರಸ್ಕೃತ ನಾಡೋಜ ಡಾ.ಮನು ಬಳಿಗಾರ ಹೇಳಿದರು.
ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಗುರುಲಿಂಗ ಶಿವಾಚಾರ್ಯರ ೫೪ನೇ ಪುಣ್ಯ ಸ್ಮರಣೋತ್ಸವ ಹಾಗೂ ೩೭ನೇ ಅನುಭಾವ ಪ್ರಚಾರ ಉಪನ್ಯಾಸ ಮಾಲೆ, ಗ್ರಂಥ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಇಲ್ಲಿಯ ಮಣ್ಣು ಮಣ್ಣಲ್ಲ. ವಿಭೂತಿ ಎನಿಸುತ್ತಿದೆ ಎಂದರು.
ವಿಶ್ವವೇ ಒಂದು ಕುಟುಂಬ ಎಂದು ಹೇಳಿದ ದೇಶ ನಮ್ಮದು. ಬಸವಣ್ಣವರು, ದಾಸರು, ಶರಣು, ಆಚಾರ್ಯರು ಎಲ್ಲರೂ ಇದನ್ನೆ ಮುಂದುವರಿಸಿದ್ದಾರೆ. ಆದ್ದರಿಂದ ದೇಶದಲ್ಲಿ ಶಾಂತಿ ಸುಭದ್ರತೆ ನೆಲೆಸಿದೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಮರೆಯಬೇಕು. ಮೂಲ ತತ್ವ ನಾವು ಆಚರಿಸಬೇಕು. ಇಲ್ಲಿ ಚೆನ್ನ, ರೇಣುಕ, ಬಸವರಿದ್ದಾರೆ. ಸಮ್ಮಿಲಿತವಿದ್ದಾಗಲೇ ಚಂದ. ಒಂದು ಎನ್ನುವ ತತ್ವಾದರ್ಶ ಪಾಲಿಸಿದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಆಶೀರ್ವಚನ ನೀಡಿ, ಭಕ್ತರನ್ನು ತಮ್ಮ ಬಂಧುಗಳೆಂದು ಭಾವಿಸಿ ತನು, ಮನ, ಧನದಿಂದ ಆಶೀರ್ವದಿಸಿದವರು ಪೂಜ್ಯ ಗುರುಲಿಂಗ ಶಿವಾಚಾರ್ಯರು. ಭಕ್ತರ ಭವ ದೂರ ಮಾಡಿದ್ದರು ಎಂದರು.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿ, ಹಾರಕೂಡ ಮಠ ಒಂದು ಧರ್ಮ, ಸಮಾಜಕ್ಕೆ ಸೀಮಿತವಲ್ಲ. ಮನುಕುಲ ಒಂದು ಎನ್ನುವ ಭಾವದಿಂದ ಇಲ್ಲಿ ಎಲ್ಲರನ್ನು ಸಮಾನವಾಗಿ ಕಾಣಲಾಗುತ್ತದೆ ಎಂದರು. ಶಾಸಕ ಶರಣು ಸಲಗರ ಮಾತನಾಡಿ, ನಾನು ಹಾರಕೂಡ ಮಠದ ಅಪ್ಪಟ ಭಕ್ತ. ನನಗೆ ಶಾಸಕ ಸ್ಥಾನಕ್ಕಿಂತ ಯಾವುದಾದರೂ ದೊಡ್ಡದು ಅಂದರೆ ಅದು ಹಾರಕೂಡ ಚನ್ನವೀರ ಶಿವಾಚಾರ್ಯರ ಭಕ್ತ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು.
ಡಾ.ಎಸ್.ಎಂ.ಹಿರೇಮಠ ಬರೆದ `ವಚನ ವಾಙ್ಮಯದ ವೈಶಿಷ್ಠö್ಯಗಳು' ಗ್ರಂಥವನ್ನು ಗ್ರಾಪಂ ಅಧ್ಯಕ್ಷೆ ಶೋಭಾವತಿ ವೈ. ಬಿಡುಗಡೆ ಮಾಡಿದರು. ಡಾ.ಎಸ್.ಎಂ.ಹಿರೇಮಠ ಉಪನ್ಯಾಸ ನೀಡಿದರು. ಡಾ.ನಾಗರಾಜ ಕರ್ಪೂರ ಮಾತನಾಡಿದರು. ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷೆ ಸಾವಿತ್ರಿ ಯಾಚೆ, ಬಾಬು ಹೊನ್ನಾನಾಯಕ, ಮಲ್ಲಿನಾಥ ಹಿರೇಮಠ, ಸಂಗಣ್ಣ ಪಾಟೀಲ್, ವಿರುಪಾಕ್ಷಪ್ಪ ಸೊಪ್ಪಣ್ಣ, ಬಾಬುರಾವ ಹತ್ತೆ ಹಾರಕೂಡ, ರಾಮಲಾಲ ಶರ್ಮಾ, ಮಲ್ಲಿಕಾರ್ಜುನ ಜಿ. ಹೊಳಕುಂದೆ, ವೀರಣ್ಣ ಶೀಲವಂತ, ಉದಯಕುಮಾರ ಶೆಟಗಾರ, ಬಸವರಾಜ ಕುಂಬಾರ, ನಾಗೇಂದ್ರಪ್ಪಾ ಸಿ. ಪಾಟೀಲ್ ಇತರರಿದ್ದರು.
ಡಾ.ಸಿದ್ರಾಮಯ್ಯಾ ಸ್ವಾಮಿ, ಜನಾರ್ಧನ ವಾಘಮೋರೆ ಹಾಗೂ ನವಲಿಂಗ ಪಾಟೀಲ್ ಅವರಿಂದ ಪ್ರಾರ್ಥನೆ ಗೀತೆ ಜರುಗಿತು. ಸುಭಾಷ ಮುರಡ ಸ್ವಾಗತಿಸಿದರು. ಶಿಕ್ಷಕ ಅಂಬಾರಾಯ ಉಗಗಾಜಿ ನಿರೂಪಣೆ ಮಾಡಿ, ವಂದಿಸಿದರು. ಪ್ರಶಸ್ತಿ ಪ್ರದಾನ: ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ನಾಡೋಜ ಮನು ಬಳಿಗಾರ ಅವರಿಗೆ ಪ್ರಸಕ್ತ ಸಾಲಿನ ಹಾರಕೂಡ ಸಂಸ್ಥಾನ ಹಿರೇಮಠದ ಅತ್ಯುನ್ನತ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಒಂದು ಲಕ್ಷ ರೂ. ನಗದು ಹಾಗೂ ಎರಡು ತೊಲ ಚಿನ್ನದ ಪದಕ ಹಾಗೂ ಪ್ರಶಸ್ತಿ ಫಲಕದೊಂದಿಗೆ ಡಾ.ಚನ್ನವೀರ ಶಿವಾಚಾರ್ಯರು ಪ್ರಶಸ್ತಿ ನೀಡಿ ಗೌರವಿಸಿದರು.