ಹಾರಂಗಿಯಲ್ಲಿ ಸಾಕಾನೆಗಳ ಶಿಬಿರ ಉದ್ಘಾಟನೆ

08Kush01
Published on

ಕುಶಾಲನಗರ: ಹಾರಂಗಿ ಜಲಾಶಯದ ಸಮೀಪ 40 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕೊಡಗಿನ 3ನೇ ಸಾಕಾನೆಗಳ ಶಿಬಿರವನ್ನು ಮಡಿಕೇರಿ ಶಾಸಕರು ಮತ್ತು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಶನಿವಾರ ಉದ್ಘಾಟಿಸಿದರು. ಸಾಕಾನೆಗಳಿಗೆ ಆಹಾರ ನೀಡುವ ಮೂಲಕ ಅಧಿಕೃತವಾಗಿ ಶಿಬಿರಕ್ಕೆ ಚಾಲನೆ ನೀಡಿದರು.


ಆರ್‌ಎಫ್‌ಒ ಶಿವರಾಮ ಮಾತನಾಡಿ, ಈಗಾಗಲೇ ಕೊಡಗಿನ ಮತ್ತಿಗೋಡು ಮತ್ತು ದುಬಾರೆಯಲ್ಲಿ ಸಾಕಾನೆಗಳ ಶಿಬಿರವಿದ್ದು, ಸುಪ್ರೀಂಕೋರ್ಟ್ ತೀರ್ಪಿನಂತೆ ದುಬಾರೆ ಆನೆ ಶಿಬಿರದಲ್ಲಿ 16 ಆನೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಉಳಿದ ಆನೆಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಹಾರಂಗಿ ಸಮೀಪದಲ್ಲಿ ನೂತನ ಶಿಬಿರ ಆರಂಭಿಸಲಾಗಿದೆ. ಪ್ರವಾಸಿಗರಿಗೆ ಪೆಡಲ್ ಬೋಟಿಂಗ್, ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯ ವೀಕ್ಷಣೆ, ಕಾಡಿನ ಸಂಚಾರ, ಸಾಕಾನೆಗಳ ಭೋಜನ ಮತ್ತು ಅವುಗಳ ಜಲಕ್ರೀಡೆಗಳನ್ನು ನೋಡಲು ಅವಕಾಶ ಕಲ್ಪಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.


ಕೊಡಗಿನ ಪ್ರವಾಸಿ ತಾಣಗಳ ಪಟ್ಟಿಗೆ ಈಗ ಮತ್ತೊಂದು ತಾಣ ಹಾರಂಗಿ ಸಾಕಾನೆಗಳ ಶಿಬಿರ ಸೇರ್ಪಡೆಯಾಗಿದೆ. ಈಗಾಗಲೇ 80 ಲಕ್ಷ ರೂ. ವೆಚ್ಚದಲ್ಲಿ ಆನೆ ಶಿಬಿರವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. ಸಿಸಿಎಫ್ ಮೂರ್ತಿ, ಡಿಎಫ್‌ಒ ಪೂವಯ್ಯ, ಅರಣ್ಯ ಅಧಿಕಾರಿಗಳು, ಗ್ರಾಮಸ್ಥರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net