

ಹಾಸನ : ಹಾಸನ ಹಾಲು ಒಕ್ಕೂಟವು 2022-23ನೇ ಸಾಲಿನಲ್ಲಿ 1962 ರೂ. ಕೋಟಿಗಳಷ್ಟು ವಹಿವಾಟು ನಡೆಸುವ ಮೂಲಕ 20.20 ಕೋಟಿರೂ. ಲಾಭಗಳಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು.
ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಹಾಸನ ಮೆಗಾ ಡೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ಶೇ.20 ರಷ್ಟು ವಹಿವಾಟು ಹೆಚ್ಚಳವಾಗಿದೆ. ಆದಾಯ ತೆರಿಗೆ ಮತ್ತು ಮೂಲಸೌಕರ್ಯ ನಿಧಿ, ವ್ಯಾಪಾರ ಏರಿಳಿತ ನಿಧಿ ಕಳೆದು ಉಳಿದ 4.4 ಕೋಟಿರೂ. ಲಾಭದಲ್ಲಿ ಸಂಘಗಳ ಸದಸ್ಯರಿಗೆ ಬೋನಸ್ ಮತ್ತು ಡಿವಿಂಡೆಂಡ್ ರೂಪದಲ್ಲಿ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ನಮ್ಮ ಒಕ್ಕೂಟದಿಂದ ಜನವರಿಯಿಂದ ಪ್ರತಿ ಲೀಟರ್‌ಗೆ 2.50 ರೂ. ಹೆಚ್ಚಳ ಮಾಡಿ 34.49ರೂ. ಸಂಘಗಳಿಗೆ ನೀಡಲಾಗುತ್ತಿದೆ. ಇದಲ್ಲಿ ಉತ್ಪಾದಕರಿಗೆ 32.60ರೂ. ಪಾವತಿಸುವ ಮೂಲಕ ರಾಜ್ಯದಲ್ಲೇ ಹೆಚ್ಚಿನ ದರವನ್ನು ನೀಡಲಾಗುತ್ತಿದೆ. ಹಾಲಿನ ಉತ್ಪಾದನೆಯಲ್ಲಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದ್ದರೆ, ಹಾಸನ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ನಗರದ ಕೈಗಾರಿಕಾ ಪ್ರದೇಶದ 66 ಎಕರೆ ಜಾಗದಲ್ಲಿ 549 ಕೋಟಿರೂ. ವೆಚ್ಚದಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ ನಿರ್ಮಾಣ ಮಾಡಲಾಗುತ್ತಿದ್ದು, 2024 ಮಾರ್ಚ್‌ಗೆ ಕಾರ್ಯಾರಂಭ ಮಾಡಲಿದೆ.60 ಮೆಟ್ರಿಕ್‌ಟನ್ ಹಾಲಿನ ಪುಡಿ ಘಟಕ ನಿರ್ಮಾಣ ಕಾರ್ಯದ ಸಿವಿಲ್ ಕಾಮಗಾರಿಗಳು, ಯಂತ್ರೋಪಕರಣಗಳ ಪೂರೈಕೆ ಮತ್ತು ಅಳವಡಿಕೆ ಕಾರ್ಯಗಳು ಕೆಎಂಎಫ್ ವತಿಯಿಂದ ನಡೆದಿದ್ದು, ಅದು 2024 ಜುಲೈಗೆ ಕಾರ್ಯಾರಂಭ ಮಾಡಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಹೈದರಾಬಾದ್ ನಗರದ ಸಮೀಪದಲ್ಲಿ ಒಕ್ಕೂಟದಿಂದ ಡೇರಿ ನಿರ್ಮಾಣ ಮಾಡಲು 30 ಎಕರೆ ಜಾಗವನ್ನು ರಿಯಾಯಿತಿ ದರದಲ್ಲಿ ನೀಡುವಂತೆ ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದ್ದು, ತೆಲಂಗಾಣ ಸರ್ಕಾರವು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಕೈಗಾರಿಕಾ ಅಭಿವೃದ್ಧಿ ನಿಗಮದ ಮುಖಾಂತರ ಜಾಗಗಳನ್ನು ಗುರುತಿಸಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ತೆಲಂಗಾಣ ಸರ್ಕಾರದಿಂದ ಜಮೀನನ್ನು ಪಡೆದುಕೊಳ್ಳಲು ಕ್ರಮಕೈಗೊಳ್ಳಲಾಗುವುದು ತಿಳಿಸಿದರು.
ಸಭೆಯಲ್ಲಿ ಒಕ್ಕೂಟದ ನಿರ್ದೇಶಕರಾದ ನಾರಾಯಣಗೌಡ, ಹೊನ್ನವಳ್ಳಿ ಸತೀಶ್, ಹೇಮಂತ್ ಕುಮಾರ್, ಸೋನಲ್ ಧರ್ಮೇಗೌಡ, ನಿಂಗರಾಜು, ಬಸವರಾಜ್, ವಿಮಲಾ, ಚೈತ್ರ, ಚನ್ನೇಗೌಡ, ರಾಮಚಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು