

ಮೈಸೂರು: ಗ್ರಾೃಚುಟಿ ಪಾವತಿ ಮಾಡಬೇಕು ಎಂದು ಆಗ್ರಹಿಸಿ ಮೈಸೂರು ಜಿಲ್ಲಾ ಹಾಪ್‌ಕಾಮ್ಸ್ ಸಂಸ್ಥೆಯ ನಿವೃತ್ತ ನೌಕರರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಅರಮನೆ ಬಳಿಯ ಕರ್ಜನ್ ಉದ್ಯಾನದ ಸಂಸ್ಥೆಯ ಕಚೇರಿಯ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 2003ರ ಒಪ್ಪಂದದಂತೆ ನಿವೃತ್ತ ನೌಕರರಿಗೆ ಗ್ರಾೃಚುಟಿ ನೀಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು ಹಾಪ್‌ಕಾಮ್ಸ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಅನ್ವಯವಾಗುವ ಸೇವಾ ನಿಯಮವನ್ನೇ ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗಿದೆ. ಆ ಪ್ರಕಾರ ಮೇ 2022ರವರೆಗೆ ನಿವೃತ್ತರಾದವರಿಗೆ 16.5 ತಿಂಗಳಿಗೆ ಗ್ರಾೃಚುಟಿ ಪಾವತಿಸಲಾಗಿದ್ದು, ನಂತರ ನಿವೃತ್ತರಾದ ನೌಕರರಿಗೆ 15 ತಿಂಗಳ ಗ್ರಾೃಚುಟಿ ನೀಡಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರಲ್ಲದೆ, ತಕ್ಷಣ ತಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಹಾಪ್‌ಕಾಮ್ಸ್‌ನಲ್ಲಿ 10 ವರ್ಷದಿಂದ ಹೊರಗುತ್ತಿಗೆ ನೌಕರರು ದುಡಿಯುತ್ತಿದ್ದಾರೆ. ಇವರ ಸೇವೆಯನ್ನು ಕಾಯಂ ಮಾಡಿಲ್ಲ. ಆರ್ಥಿಕ ಶಿಸ್ತು ಪಾಲನೆಯಾಗುತ್ತಿಲ್ಲ. ಇದರಿಂದ ಹಾಪ್‌ಕಾಮ್ಸ್ 1.5 ಕೋಟಿ ರೂ. ನಷ್ಟದಲ್ಲಿದೆ. ಸೌಲಭ್ಯ ನೀಡದಿರುವುದಕ್ಕೆ ನಷ್ಟದ ಕಾರಣ ಹೇಳುವುದು ಸರಿಯಲ್ಲ ಎಂದು ಕಿಡಿಕಾರಿದರು.
ನಂತರ ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಚೇತನ್ ಅವರಿಗೆ ಮನವಿಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಾಯಣ್ಣಗೌಡ, ಶಿವಣ್ಣ, ಶ್ರೀನಿವಾಸ, ನಂಜುಂಡೇಗೌಡ, ಮಹದೇವಗೌಡ, ಮಹೇಶ್, ಕಿಶೋರ್, ವಿಶ್ವನಾಥ್, ದೀಕ್ಷಿತ್, ಯೋಗೇಶ ಇನ್ನಿತರರು ಇದ್ದರು.