

ಕಲಬುರಗಿ: ಜಿಲ್ಲೆಯಲ್ಲಿ ಹಾನಿಗೀಡಾದ ತೊಗರಿಗೆ ವಿಶೇಷ ಪ್ಯಾಕೇಜ್ ನೀಡಬೇಕು, ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ರಸ್ತೆಗೆ ತೊಗರಿ ಚೆಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಂಯುಕ್ತ ಹೋರಾಟ ಕರ್ನಾಟಕ, ದಲಿತ,ರೈತ, ಕಾರ್ಮಿಕ, ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಸೇರಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಜಿಲ್ಲೆಯ ಆರ್ಥಿಕ ಶಕ್ತಿ ತುಂಬುವ ಬೆಳೆಯೂ ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ೧೦೦ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಬೇಕು. ಬಿತ್ತಿದ ಬೀಜ, ರಸಗೊಬ್ಬರದ ಹಣವೂ ವಾಪಸ್ ಬರುತ್ತಿಲ್ಲ. ರೈತರು ಸಾಲದ ಶೂಲಕ್ಕೆ ಸಿಲುಕಿದ್ದಾರೆ ಎಂದರು.
ಉತ್ತಮವಾಗಿ ಬೆಳೆದಿದ್ದ ತೊಗರಿಯೂ ಕಾಯಿ ಕಟ್ಟುವ ವೇಳೆ ತೇವಾಂಶದ ಕೊರತೆಯಿಂದ ನಾಶವಾಗಿ, ರೈತರು ಬೀದಿಗೆ ಬರುವ್ತಾಗಿದೆ. ಬಿತ್ತಿದ್ದ ಎರಡು ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ಬೆಳೆ ಒಣಗಿ ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ರೈತರತ್ತ ಗಮನ ಹರಿಸುತ್ತಿಲ್ಲ ಎಂದು ಕಿಡಿ ಕಾರಿದರು.
ಕೂಡಲೇ ಕೇಂದ್ರ ಸರ್ಕಾರ ೧೨,೫೦೦ ಬೆಂಬಲ ಬೆಲೆ ನಿಗದಿಪಡಿಸಬೇಕು, ರೈತರ ಸಾಲ ಮನ್ನಾ ಮಾಡಬೇಕು, ಕ್ವಿಂಟಾಲ್ ತೊಗರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿ ರಾಷ್ಟçಪತಿ, ಪ್ರಧಾನಿ, ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಬಸವರಾಜ ಇಂಗಿನ್, ಮೌಲಾ ಮುಲ್ಲಾ, ಭೀಮಾಶಂಕರ ಮಾಡಿಯಾಳ, ಎಸ್.ಆರ್.ಕೆಲ್ಲೂರ, ಉಮಾಪತಿ ಪಾಟೀಲï, ಮಹಾಂತೇಶ ಜಮಾದಾರ, ನಾಗೇಂದ್ರಪ್ಪ ಥಂಬೆ, ಎಂಬ.ಬಿ.ಸಜ್ಜನ್, ಎಸ್.ಬಿ.ಮಹೇಶ, ಶರಣು ಪಪ್ಪಾ, ರಮೇಶ ರಾಗಿ, ಸಿದ್ದು ಎಸ್.ಎಲï.ಕರಿಯಪ್ಪ, ಗಿರೀಶಗೌಡ ಇನಾಂದಾರ ಇತರರಿದ್ದರು.