ಹಾನಿ ಪೀಡಿತ ಪ್ರದೇಶಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಭೇಟಿ ಪರಿಶೀಲನೆ

ಹಾನಿ ಪೀಡಿತ ಪ್ರದೇಶಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಭೇಟಿ ಪರಿಶೀಲನೆ
Published on

ಹಾಸನ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ನಗರದ ಹಲವು ಬಡಾವಣೆಗಳಿಗೆ ನೀರು ನುಗ್ಗಿ ಜಲದಿಗ್ಬಂಧನಗೊಂಡ ವಿವಿಧ ಬಡಾವಣೆಗಳಿಗೆ ಮಂಗಳವಾರ ಬೆಳಗ್ಗೆ ಶಾಸಕ ಸ್ವರೂಪ್ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಹಾಲಕ್ಷ್ಮೀ ಲೇಔಟ್, ಹಾಸನಂಬ ಬಡಾವಣೆ, ಉದ್ದೂರು ಹೀಗೆ ಹಲವು ಬಡಾವಣೆಗಳಲ್ಲಿ ನೀರು ತುಂಬಿ ಜಲಾವೃತಗೊಂಡಿದ್ದು ಇದರಿಂದ ಬಡಾವಣೆ ನಿವಾಸಿಗಳು ಹೊರಬರಲಾರದೆ ಪರದಾಡುವಂತಾಯಿತು. ಅಲ್ಲದೆ ರಸ್ತೆಗಳು ಕೂಡ ಸಂಪೂರ್ಣವಾಗಿ ಜಲಾವೃತವಾಗಿ ವಿವಿಧೆಡೆ ಸಂಪರ್ಕ ಕಡಿತಗೊಂಡಿದೆ.

ಕೆಲವೆಡೆ ಅಪಾಯದ ಮಟ್ಟ ಮೀರಿ ಹರಿಯುತ್ತಿವ ಕೆರೆಗಳಿಂದ ಕೊಡಿ ಬಿದ್ದು ರಸ್ತೆಯ ಮೇಲೆ ನೀರು ಹರಿಯುತ್ತಿರುವ ಕಾರಣ ರಸ್ತೆ ಸಂಪರ್ಕ ಕಡಿತಗೊಂಡತು. ಯಾವುದೇ ಅನಾಹುತ ಸಂಭವಿಸದಂತೆ ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಪೊಲೀಸರು ಕಾದು ಕುಳಿತರು. ವಾಹನಗಳಿಗೆ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ರಾಜಕಾಲುವೆ ಒತ್ತುವರಿ ಹಾಗೂ ಅವೈಜ್ಞಾನಿಕ ಬಡಾವಣೆಗಳ ನಿರ್ಮಾಣವೇ ಇದಕ್ಕೆಲ್ಲ ಕಾರಣ ಎಂಬುದು ಸ್ಥಳೀಯರ ಆರೋಪವಾಗಿದ್ದು, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ ಶಾಸಕ ಸ್ವರೂಪ ಪ್ರಕಾಶ್ ಈ ಬಗ್ಗೆ ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಶೀಘ್ರವಾಗಿ ರಾಜಕಾಲುವೆ ಒತ್ತುವರಿ ತೆರವು ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು.

ಖಾಸಗಿ ಲೇಔಟ್‌ಗಳು ತರಾತುರಿಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಿರುವ ಕಾರಣ ಈ ರೀತಿಯ ಅತಿವೃಷ್ಟಿ ಸಂಭವಿಸಿದೆ. ಮುಂದಿನ ದಿನಗಳಲ್ಲಿ ಹೂಡಾ ಅಧಿಕಾರಿಗಳ ಗಮನಕ್ಕೆ ತಂದು ಇಂತಹ ವೈಜ್ಞಾನಿಕ ಕಾಮಗಾರಿಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ನಗರಸಭೆ ಆಯುಕ್ತ ನರಸಿಂಹಮೂರ್ತಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಜಿಲ್ಲಾದ್ಯಂತ ಮುಂದುವರಿದ ಮಳೆ

ಮಂಗಳವಾರ ಮಧ್ಯಾಹ್ನದ ನಂತರ ನಗರದಲ್ಲಿ ಮಳೆ ಸುರಿಯಿತು. ಮಧ್ಯಾಹ್ನದವರೆಗೂ ಬಿಸಿಲಿನಿಂದ ಕೂಡಿದ್ದ ವಾತಾವರಣ ಮಧ್ಯಾಹ್ನದ ನಂತರ ಮೋಡ ಕವಿದು ಗುಡುಗುಸಹಿತ ಮಳೆಯಾಯಿತು. ಹಿರೀಸಾವೆ ಹೋಬಳಿಯ ಕೆಲವೆಡೆ ಮಧ್ಯಾಹ್ನ 2.30 ರಿಂದ 3.15 ರವರಿಗೆ ಹದವಾಗಿ ಮಳೆ ಸುರಿಯಿತು. ಅರಸೀಕೆರೆ ಪಟ್ಟಣದಲ್ಲಿ ಗಾಳಿಯ ಆರ್ಭಟದೊಂದಿಗೆ ಮಳೆ ಸುರಿದಿದೆ. ತಾಲೂಕಿನ ಬೆಂಡೆಕೆರೆ, ಕುರುವಂಕ, ಕೊಂಡುಬಾಗಿಲು, ಕೆಂಪುಸಾಗರದಲ್ಲಿ ಸಾಧಾರಣ ಮಳೆಯಾಗಿದೆ. ಬೇಲೂರು ಹಾಗೂ ಹಳೇಬೀಡಿನಲ್ಲಿ ಮಧ್ಯಾಹ್ನ 2.30ಕ್ಕೆ ಆರಂಭವಾದ ಮಳೆ ಸುಮಾರು ಒಂದು ಗಂಟೆಯಾಗಿ ಭರ್ಜರಿಯಾಗಿ ಸುರಿದಿದೆ. ಇನ್ನು ಚನ್ನರಾಯಪಟ್ಟಣ ಹಾಗೂ ಹಿರೀಸಾವೆಯಲ್ಲೂ ಉತ್ತಮ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net