ಹಾನಗಲ್ಲು ಶೆಟ್ಟಳ್ಳಿ ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿ

5spt3
Published on

ಸೋಮವಾರಪೇಟೆ: ತಾಲೂಕಿನ ಹಾನಗಲ್ಲು ಶೆಟ್ಟಳ್ಳಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ಬಗ್ಗೆ ಪತ್ರಿಕಾ ಹೇಳಿಕೆ ಕೊಟ್ಟ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಸ್.ಎನ್.ನರಗುಂದ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ಬುಧವಾರ ಗ್ರಾಮಕ್ಕೆ ತೆರಳಿ ಗ್ರಾಮಸ್ಥರೊಂದಿಗೆ ಚರ್ಚಿಸಿತು.


ಹಾನಗಲ್ಲು ಕಂದಾಯ ಗ್ರಾಮದ ಹಾನಗಲ್ಲುಶೆಟ್ಟಳ್ಳಿ ಉಪಗ್ರಾಮವಾಗಿದೆ. ಕಂದಾಯ ಪರಿವೀಕಕ್ಷರು ಸ್ಥಳ ಪರಿಶೀಲಿಸಿದ್ದಾರೆ. ಮುಖ್ಯ ಗ್ರಾಮಕ್ಕೆ ಸ.ನಂ.31/11ಎ ಯಲ್ಲಿ 1.10 ಎಕರೆ ಜಾಗವನ್ನು 2020 ರಲ್ಲಿ ಸಾರ್ವಜನಿಕ ಸ್ಮಶಾನ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆ. ಹಾನಗಲ್ಲು ಮುಖ್ಯ ಗ್ರಾಮದಲ್ಲಿ 2011ನೇ ಸಾಲಿನ ಜನಗಣತಿಯಂತೆ 2321 ಜನಸಂಖ್ಯೆಯಿದ್ದು, ಅದಕ್ಕೆ ಅನುಗುಣವಾಗಿ ಹೆಚ್ಚಿನ ಜಾಗವನ್ನೇ ಕಾಯ್ದಿರಿಸಲಾಗಿದೆ ಎಂದು ತಹಸೀಲ್ದಾರ್ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.


ಹಾನಗಲ್ಲುಶೆಟ್ಟಳ್ಳಿ ಗ್ರಾಮಸ್ಥರು ಸ್ಮಶಾನಕ್ಕೆ ಕೋರಿರುವ ಗ್ರಾಮದ ಸರ್ವೇ ನಂ.73/63ರ ಜಾಗ ಅದೇ ಗ್ರಾಮದ ಎನ್.ಕೆ.ಪ್ರಸನ್ನ, ಎಚ್.ಎಂ.ವಿಠಲ ಅವರು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಕಾಫಿ ಬೇಸಾಯ ಮಾಡಿ, ನಮೂನೆ-57ರಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿರುವ ಜಮೀನಾಗಿರುತ್ತದೆ. ಉಪಗ್ರಾಮವಾದ ಹಾನಗಲ್ಲು ಶೆಟ್ಟಳ್ಳಿ ಗ್ರಾಮಸ್ಥರಿಗೆ ಸ್ಮಶಾನ ಜಾಗ ಅವಶ್ಯಕತೆಯಿದ್ದರೆ ಒತ್ತುವರಿ ಮುಕ್ತ ಜಾಗವನ್ನು ಗುರುತಿಸಿ ಕೊಡಲಾಗುವುದು ಎಂದು ತಹಸೀಲ್ದಾರ್ ಎಸ್.ಎಸ್.ನರಗುಂದ ಅವರು ಹಾನಗಲ್ಲುಶೆಟ್ಟಳ್ಳಿ ಗ್ರಾಮಾಭಿವೃದ್ದಿ ಸಮಿತಿ ಅಧ್ಯಕ್ಷ ಎ.ಜೆ.ಸುರೇಶ್ ಅವರಿಗೆ ತಿಳಿಸಿದರು.


ಘರ್ಷಣೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಶಾಂತಿಯುತವಾಗಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ ಮೇರೆಗೆ ಗ್ರಾಮಸ್ಥರು ಚುನಾವಣೆಗೆ ಯಾವುದೇ ಅಡ್ಡಿ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ತಹಸೀಲ್ದಾರ್ ಪತ್ರಿಕೆಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net