

ಬೆಳಗಾವಿ: ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಂದೇಶಗಳನ್ನು ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಹಾನಗಲ್ ಕುಮಾರ ಶಿವಯೋಗಿಗಳು ಮಠಾಧೀಶರನ್ನು ತಯಾರು ಮಾಡುವ ಮಾರ್ಗ ಹಾಕಿಕೊಟ್ಟ ಮಹಾ ಪುರುಷರು ಎಂದು ಗದಗ-ಡಂಬಳ ತೋಂಟದ ಜಗದ್ಗುರು ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಕಾರಂಜಿ ಮಠದಲ್ಲಿ ಗುರುವಾರ ಆಯೋಜಿಸಿದ್ದ ಮಠದ 22ನೇ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಹಾನಗಲ್ ಕುಮಾರ ಶಿವಯೋಗಿಗಳ 155ನೇ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸನ್ಯಾಸ ಪರಂಪರೆಯು ಸಾಮಾಜಿಕ ಹಿತ ಕಾಯುವ, ಸಮುದಾಯದಲ್ಲಿ ಸಂಸ್ಕಾರ ನೀಡಿ, ಧರ್ಮ ಜಾಗೃತಿ ಮೂಡಿಸುವುದಕ್ಕಾಗಿ ಮೀಸಲಿದೆ. ಇಂದು ನಮ್ಮಂಥ ಮಠಾಧೀಶರು ಅಂತಹ ಮಾರ್ಗದಲ್ಲಿ ಸಾಗುವಂತಾಗಬೇಕು ಎಂದರು.
ಲಿಂಗಾಯತ ಮಠಗಳು ಧರ್ಮ ಪ್ರಸಾರದೊಂದಿಗೆ ಶಿಕ್ಷಣ ಕ್ಷೇತ್ರಗಳಲ್ಲೂ ಅಗಾಧ ಸೇವೆ ಮಾಡುತ್ತಿವೆ. ಅದರೊಂದಿಗೆ ಕನ್ನಡ ನಾಡು, ನುಡಿ, ಗಡಿ, ಜಲ ವಿಷಯವಾಗಿ ಲಿಂಗಾಯತ ಮಠಗಳು ಹೋರಾಟ ಮಾಡುವಲ್ಲಿ ಮುಂಚೂಣಿಯಲ್ಲಿವೆ. ಹಾನಗಲ್ ಶಿವಯೋಗಿಗಳ ಪ್ರೇರಣೆ ಕೆ.ಎಲ್.ಇ. ಸಂಸ್ಥೆಗೆ ಹೆಚ್ಚಿನ ಬಲ ನೀಡಿದೆ. ಲಿಂಗಾಯತ ಸಮುದಾಯದ ಏಳಿಗೆಯಲ್ಲಿ ಮಠಾಧೀಶರ ಜವಾಬ್ದಾರಿ ಹೆಚ್ಚಿದೆ ಎಂದರು.
ನೇತೃತ್ವ ವಹಿಸಿದ್ದ ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಬೆಳಗಾವಿಯ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಬಸವಾದಿ ಶಿವ-ಶರಣರ ತತ್ತ್ವಾದರ್ಶಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಪ್ರತಿ ತಿಂಗಳು ಮಾಸಿಕ ಶಿವಾನುಭವಗೋಷ್ಠಿ ಹಮ್ಮಿಕೊಳ್ಳುವ ಮೂಲಕ ಸಮುದಾಯದ ವಿವಿಧ ಮಹನಿಯರನ್ನು ಪರಿಚಯಿಸುತ್ತಿರುವುದು ಮಾದರಿಯಾಗಿದೆ ಎಂದರು.
75ನೇ ಜನ್ಮದಿನ ವರ್ಷಾಚರಣೆ ನಿಮಿತ್ತ ಕೆ.ಎಲ್.ಇ. ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರನ್ನು ಶ್ರೀಮಠದಿಂದ ಸತ್ಕಾರಿಸಲಾಯಿತು. ಸತ್ಕಾರ ಸ್ವೀಕರಿಸಿ ಮಾತನಾಡಿದ ಡಾ. ಪ್ರಭಾಕರ ಕೋರೆ ಅವರು, 75 ವಷರ್ ವಯಸ್ಸಾಗಿರುವುದು ನನ್ನ ದೇಹಕ್ಕೆ ಮಾತ್ರ. ನಮ್ಮ ನಾಡಿನ ಪೂಜ್ಯರ, ಹಿರಿಯರ ಆಶೀರ್ವಾದದಿಂದ ನನ್ನ ಮನಸ್ಸಿಗೆ ಈಗಲೂ 25ರ ಹರೆಯವೇ ಇದೆ. ಕೆಎಲ್‌ಇ ಸಂಸ್ಥೆ ಮುಖೇನ ನಮ್ಮ ಸಮುದಾಯದ ಸೇವೆಯನ್ನು ಮತ್ತಷ್ಟು ಮಾಡುತ್ತೇನೆ ಎಂದರು.
ಗುರುಸಿದ್ದ ಸ್ವಾಮೀಜಿ ಮಾತನಾಡಿ, ಹಾನಗಲ್ಲ ಶ್ರೀಗಳ ಕುರಿತು ಐದು ದಿನಗಳವರೆಗೆ ನಿರಂತರ ಪ್ರವಚನ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಶೇಗುಣಸಿ ವಿರಕ್ತಮಠದ ಮಹಾಂತ ಸ್ವಾಮೀಜಿ ಅವರು ಹಾನಗಲ್ ಕುಮಾರ ಸ್ವಾಮೀಜಿ ಜೀವನ ದರ್ಶನ ಕುರಿತು ಪ್ರವಚನ ನೀಡಿದರು. ಡಾ. ಅಲ್ಲಮಪ್ರಭು ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಡಾ. ಶಿವಯೋಗಿ ದೇವರು ಸಮ್ಮುಖ ವಹಿಸಿದ್ದರು. ಪ್ರೊ. ಶ್ರೀಕಾಂತ ಶಾನವಾಡ ಸ್ವಾಗತಿಸಿದರು. ಎ.ಕೆ. ಪಾಟೀಲ ನಿರೂಪಿಸಿದರು. ವಿ.ಕೆ. ಪಾಟೀಲ ವಂದಿಸಿದರು.