ಹಾದಿ ತಪ್ಪುತ್ತಿದೆ ಯುವಜನಾಂಗ

08Kush01
ಕುಶಾಲನಗರ ವಾಸವಿ ಯುವಜನ ಸಂಘ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಿ.ಎಲ್.ಉದಯಕುಮಾರ್, ಚಕ್ರವರ್ತಿ ಸೂಲಿಬೆಲೆ, ಕೆ.ಪ್ರವೀಣ್, ಬಿ.ಎಲ್.ಸತ್ಯನಾರಾಯಣ, ಬಿ.ಆರ್.ನಾಗೇಂದ್ರಪ್ರಸಾದ್, ಲಕ್ಷ್ಮೀ ಶ್ರೀನಿವಾಸ್ ಇತರರು ಇದ್ದರು.
Published on

ಕುಶಾಲನಗರ: ಹಿಂದಿನ ಕಾಲದಲ್ಲಿ ಕುಟುಂಬ ಎಂದರೆ 50ರಿಂದ 60 ಜನರು ಒಟ್ಟಿಗೆ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅದರಿಂದ ಮಕ್ಕಳಲ್ಲಿ ತ್ಯಾಗ ಮನೋಭಾವ ಬೆಳೆಯುತ್ತಿತ್ತು ಎಂದು ಯುವ ಬ್ರಿಗೇಡ್ ನೇತಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪಟ್ಟಣದ ವಾಸವಿ ಯುವಜನ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಣ್ಣ ಕುಟುಂಬ ವ್ಯವಸ್ಥೆ ಇರುವ ಇಂದಿನ ಪೀಳಿಗೆಗೆ ಸಂಬಂಧಗಳು ಗೊತ್ತಿರುವುದಿಲ್ಲ. ಒಬ್ಬರಿಗೆ ಒಬ್ಬರು ಅನುಸರಿಸಿಕೊಂಡು ಬಾಳುವ ಚಿಂತನೆ ಇಲ್ಲ. ಮಾನಸಿಕವಾಗಿಯೂ ಬಹಳ ದುರ್ಬಲರಾಗಿರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವಿದೇಶಿಯರ ಅನುಕರಣೆ ಮಾಡುವ ಭರದಲ್ಲಿ ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ತಿಳಿವಳಿಕೆ ಕೊಡಬೇಕಿರುವವರಿಗೂ ಜ್ಞಾನದ ಕೊರತೆ ಮತ್ತು ಸಮಯದ ಅಭಾವದಿಂದ ಯುವ ಜನಾಂಗ ದಾರಿ ತಪ್ಪುತ್ತಿದೆ. ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂಸ್ಕೃತಿ ಇರುವ ಭಾರತದಲ್ಲಿ ಮಾರ್ಗದರ್ಶನ ಕೊರತೆಯಿಂದ ಯುವಜನಾಂಗ ಹಾದಿ ತಪ್ಪುತ್ತಿದ್ದು, ಸಣ್ಣಪುಟ್ಟ ವಿಚಾರಗಳಿಗೆ ಆತ್ಮಹತ್ಯೆ ಅಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ.ಪ್ರವೀಣ್ ಮಾತನಾಡಿ, ಮಹಿಳೆಯರು ಟಿವಿ ಬಿಟ್ಟು ಮಕ್ಕಳೊಂದಿಗೆ ಬೆರೆಯಬೇಕು. ಅವರ ಆಗುಹೋಗುಗಳ ಕಡೆ ಗಮನಿಸಬೇಕು ಎಂದು ಕರೆ ನೀಡಿದರು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಉದಯಕುಮಾರ್, ಆರ್ಯವೈಶ್ಯ ಮಹಾಸಭಾ ನಿರ್ದೇಶಕ ಬಿ.ಆರ್.ನಾಗೇಂದ್ರ ಪ್ರಸಾದ್, ಜಿಲ್ಲಾಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಪ್ರತಿಮಾ ರಾಘವೇಂದ್ರ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net