

ತೂಬಗೆರೆ: ಹಾಡೋನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮೋಹನಕುಮಾರಿ, ಅಪರ ಜಿಲ್ಲಾಧಿಕಾರಿ ವಿಜಯಾ ಇ. ರವಿಕುಮಾರ್, ಇಒ ಶ್ರೀನಾಥ್‌ಗೌಡ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಕಷ್ಟ ಆಲಿಸಿದರು.
ಹಾಡೋನಹಳ್ಳಿ ಗ್ರಾಮದ ರಂಗ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮೊದಲು ಅಧಿಕಾರಿಗಳಿಗೆ ಮಹಿಳೆಯರು ಸ್ವಾಗತ ಕೋರಿದರು. ಸಿಂಗರಿಸಿದ ಎತ್ತಿನಗಾಡಿಯಲ್ಲಿ ಅಧಿಕಾರಿಗಳನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಸಿ ನೆಟ್ಟ ಅಧಿಕಾರಿಗಳು ಚನ್ನರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ಜನರ ಮನೆ ಬಾಗಿಲಿಗೆ ಆಡಳಿತ ತರುವ ಕಾರ್ಯಕ್ರಮ ಇದಾಗಿದೆ, ತಾಲೂಕು ಆಡಳಿತ ಎಲ್ಲ ಇಲಾಖೆಗಳು ಒಂದೇ ಸೂರಿನಡಿ ಅಹವಾಲು ಸ್ವೀಕರಿಸಿ, ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸುವ ವಿನೂತನ ಯೋಜನೆ ಇದಾಗಿದೆ ಎಂದು ವಿಜಯಾ ಇ. ರವಿಕುಮಾರ್ ಹೇಳಿದರು.
ಸರ್ಕಾರ ಮಹಾತ್ವಾಕಾಂಕ್ಷಿ ಗ್ರಾಮ ಒನ್ ಯೋಜನೆಯನ್ನು ಜಾರಿಗೆ ತಂದಿದೆ, ಈ ಯೋಜನೆಯಲ್ಲಿ ವೃದ್ಧಾಪ್ಯ ವೇತನ, ಹಿರಿಯ ನಾಗರಿಕ ಗುರುತಿನ ಚೀಟಿ, ಆಯುಷ್ಮಾನ್ ಭಾರತ್ ಕಾರ್ಡ್, ಅಂಗವಿಕಲರಿಗೆ ಮಾಸಿಕ ವೇತನ ಮತ್ತಿತರ ಯೋಜನೆಗಳನ್ನು ಪಡೆಯಬಹುದು ಎಂದರು.