

ಚನ್ನರಾಯಪಟ್ಟಣ : ಹಾಡುಹಗಲೇ ಮನೆಗೆ ನುಗ್ಗಿರುವ ಕಳ್ಳರು 118 ಗ್ರಾಂ ತೂಕದ ಚಿನ್ನಾಭರಣ ಹಾಗು 2.80 ಲಕ್ಷ ರೂ. ಅಪಹರಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣ ಸಮೀಪದ ಚಿಕ್ಕಗೊಂಡನಹಳ್ಳಿ ನಿವಾಸಿ ಆದಿನಾರಾಯಣ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಪತ್ನಿ ಜೊತೆಗೆ ಜಮೀನು ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ
12.20ರ ಸಮಯದಲ್ಲಿ ಮನೆಗೆ ಬಂದ ಅವರು ಮೀಟರ್ ಬೋರ್ಡ್‌ನಲ್ಲಿಟ್ಟಿದ್ದ ಬೀಗದ ಕೀ ಸಹಾಯದಿಂದ ಬೀಗ ತೆಗೆದು ಪ್ರವೇಶಿಸಿದಾಗ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡಿದೆ. ಬೀರುವಿನ ಲಾಕರ್ ಮುರಿದಿರುವ ಕಳ್ಳರು 45 ಗ್ರಾಂ ತೂಕದ ಚಿನ್ನದ ಲಾಂಗ್ ಸರ, 25 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 8 ಗ್ರಾಂ ತೂಕದ ಚಿನ್ನದ ಓಲೆ, 8 ಗ್ರಾಂ ತೂಕದ ಚಿನ್ನದ ಉಂಗುರ, 10 ಗ್ರಾಂ ತೂಕದ ಚಿನ್ನದ 2 ಉಂಗುರ, 12 ಗ್ರಾಂ ತೂಕದ ಚಿನ್ನದ ಸರ ಹಾಗು 2.80 ಲಕ್ಷ ರೂ. ದೋಚಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.