

ಕುಶಾಲನಗರ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಸಮೀಪದಲ್ಲಿರುವ ಹುಣಸೆಪಾರೆ ಹಾಡಿಗೆ ಮೂಲಸೌಕರ್ಯ ಒದಗಿಸಬೇಕು ಎಂದು ಮುಖಂಡರು ಪಿಡಿಒಗೆ ಮನವಿ ಸಲ್ಲಿಸಿದರು.
ಕಳೆದ 3 ವರ್ಷಗಳಿಂದ ಹಾಡಿ ಜನರಿಗೆ ಅವರ ಜಾಗದಲ್ಲಿ ಮನೆಗಳ ನಿರ್ಮಾಣಕ್ಕೆ ಇಲಾಖೆಯ ಮೂಲಕ ಅನುದಾನ ಬಿಡುಗಡೆಯಾದರೂ ಮನೆ ನಿರ್ಮಾಣವಾಗಿಲ್ಲ. ಹಾಡಿಗೆ ತೆರಳುವ ರಸ್ತೆ ತೀರಾ ಹಾಳಾಗಿದೆ. ಹಾಡಿಗೆ ವಿದ್ಯುತ್ ಸಂಪರ್ಕ ಸೂಕ್ತವಾಗಿಲ್ಲ. ಇವುಗಳ ಬಗ್ಗೆ ತುರ್ತು ಗಮನ ಹರಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಅನಂತ ಅವರ ನೇತೃತ್ವದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮೂಲ ಸೌಕರ್ಯಗಳ ಬಗ್ಗೆ ಗಮನ ಹರಿಸಿ ಎಂದು ಅನೇಕ ಬಾರಿ ಮನವಿ ನೀಡಿದ್ದರೂ ಕ್ರಮ ವಹಿಸಿಲ್ಲ. ಜೇನುಕಲ್ಲು ಮೀಸಲು ಅರಣ್ಯ ಪ್ರದೇಶದಿಂದ ಬರುವ ಕಾಡಾನೆಗಳ ಹಾವಳಿ ಬಗ್ಗೆ ಕ್ರಮ ಕೈಗೊಂಡಿಲ್ಲ. ಹಾಡಿಯಲ್ಲಿರುವ 25 ಕ್ಕೂ ಹೆಚ್ಚು ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಯನ್ನು ಈಗಲಾದರೂ ಪರಿಹರಿಸಬೇಕು ಎಂದು ಒತ್ತಾಯಿಸಲಾಯಿತು.
ಹಾಡಿಯ ಮುಖಂಡರಾದ ಜಿ.ಕೆ.ರಾಜು, ತಿಮ್ಮಪ್ಪ, ಪ್ರವೀಣ, ಸಚಿನ್, ಉಮೇಶ ಇತರರು ಇದ್ದರು.