ಯಳಂದೂರು: ಜಿಲ್ಲೆಯಲ್ಲಿ ಸ್ವಾತಂತ್ರೃ ಬಂದಾಗಿನಿಂದಲೂ ವಿದ್ಯುತ್ ಕಾಣದ ಗಿರಿಜನರು ವಾಸ ಮಾಡುವ ಹಾಡಿಗಳು, ಪೋಡುಗಳಿಗೆ ವಿದ್ಯುತ್ ಸಂಪರ್ಕ ನೀಡಿರುವುದು ನಮ್ಮ ಸರ್ಕಾರದ ಸಾರ್ಥಕ ಕ್ಷಣವಾಗಿದ್ದು, ಇದು ಸಮಾಧಾನ ತಂದಿದೆ ಎಂದು ಪಶು ಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಅವರು ಶನಿವಾರ ತಾಲೂಕಿನ ಬಿಳಿಗಿರಿರಂಗನಬೆಟ್ಟದ ಪುರಾಣಿ ಪೋಡಿನ ವಿದ್ಯುತ್ ಸಂಪರ್ಕ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಜಿಲ್ಲೆಯ ಕಾಡಿನಲ್ಲಿ ವಾಸ ಮಾಡುವ ಗಿರಿಜನರ 31 ಹಾಡಿ ಹಾಗೂ ಪೋಡುಗಳಿಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಒಟ್ಟು 41. 5 ಕೋಟಿ ರೂ.ವೆಚ್ಚದಲ್ಲಿ ಇಲ್ಲಿಗೆ ವಿದ್ಯುತ್ ಸಂಪರ್ಕ ನೀಡುವ ಕೆಲಸವಾಗುತ್ತಿದ್ದು, 2486 ಮನೆಗಳಿಗೆ ಇಲ್ಲಿ ವಾಸಿಸುವ ಕುಟುಂಬಗಳಿಗೆ ಇದರಿಂದ ಲಾಭವಾಗಲಿದೆ ಎಂದರು. ಅಲ್ಲದೆ ಇಲ್ಲಿಗೆ ರಸ್ತೆಗಳ ಅವಶ್ಯಕತೆ ಇದ್ದು 128 ಕಿ.ಮೀ.ರಸ್ತೆ ನಿರ್ಮಾಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ ಎಂದರು.
5 ಲಕ್ಷ ರೂ.ವೆಚ್ಚದಲ್ಲಿ ಸಿದ್ದು ನಿವಾಸ್ ವಸತಿ ಯೋಜನೆ ಜಾರಿ: ಜಿಲ್ಲೆಯಲ್ಲಿ ಸೋಲಿಗ ಸಮುದಾಯದ ವಾಸಿಗಳಿಗೆ 3 ಸಾವಿರ ಮನೆಗಳಿಗೆ ಬೇಡಿಕೆ ಇದ್ದು ಸಿದ್ದು ನಿವಾಸ್ ಯೋಜನೆಯಡಿಯಲ್ಲಿ ಒಂದು ಮನೆಗೆ ತಲಾ 5 ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಮುಂದಿನ ದಿನಗಳಲ್ಲಿ ಮನೆ ನಿರ್ಮಾಣ ಮಾಡಲೂ ಕ್ರಮ ವಹಿಸಿ ಬುಡಕಟ್ಟು ಜನಾಂಗದ ಸಮಗ್ರ ಅಭಿವೃದ್ಧಿಯನ್ನು ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಅರಣ್ಯ ಇಲಾಖೆಯಿಂದ ಗಿರಿಜನರನ್ನು ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದೆ. ಅರಣ್ಯ ಕಾನೂನು ಈಗ ಜಾರಿಗೆ ಬಂದಿದೆ. ಆದರೆ ಅನಾದಿ ಕಾಲದಿಂದಲೂ ಗಿರಿಜನರು ಕಾಡಿನಲ್ಲೇ ವಾಸವಾಗಿದ್ದಾರೆ. ನಮ್ಮ ತಂದೆ ಬಿ.ರಾಚಯ್ಯ ಅವರ ಕಾಲದಲ್ಲಿ ರಾಜ್ಯದ ಪಶ್ಚಿಮಘಟ್ಟದ ವ್ಯಾಪ್ತಿಯ ಅರಣ್ಯದಂಚಿನ ಗ್ರಾಮಗಳಲ್ಲಿ ವಾಸಿಸುವ ಗಿರಿಜನರಿಗೆ ಕಂದಾಯ ಭೂಮಿ ನೀಡಲಾಗಿತ್ತು. ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸುವ ಕೆಲಸವಾಗಬಾರದು. ನಮ್ಮ ಸರ್ಕಾರ ಗಿರಿಜನರ ಬಹುದಿನದ ಬೇಡಿಕೆಯಾದ ವಿದ್ಯುತ್ ನೀಡಿದೆ. ನಾನು ಅವರಿಗೆ ವಸತಿ ನೀಡಬೇಕೆಂದು ಸದನದಲ್ಲಿ ಬೇಡಿಕೆ ಇಟ್ಟಿದ್ದು, ವಸತಿ ಸಚಿವ ಜಮೀರ್ ಅಹಮ್ಮದ್ ಇದನ್ನು ನೀಡುವ ಭರವಸೆಯನ್ನು ನೀಡಿದ್ದಾರೆ. ಆದಷ್ಟು ಬೇಗ ಅವರಿಗೆ ಮನೆಗಳನ್ನು ನೀಡಲು ಕ್ರಮ ವಹಿಸಲಾಗುವುದು ಎಂದರು.
ಬಿಳಿಗಿರಿರಂಗನಬೆಟ್ಟದ ತೇರು ಬೀದಿಗೆ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿ ವಾಪಸಾಗಿದ್ದ ಅನುದಾನವನ್ನು ವಾಪಸ್ ತಂದು ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಇದರೊಂದಿಗೆ ರಾಜಗೋಪುರಕ್ಕೆ ತೆರಳಲು ಮೆಟ್ಟಿಲು ನಿರ್ಮಾಣ ಕಾಮಗಾರಿಗೂ ಚಾಲನೆ ಸಿಕ್ಕಿದೆ. ಗಿರಿಜನರಿಗೆ ಇಂತಹ ಸೌಲಭ್ಯ ಸಿಗಲು ಅಗತ್ಯ ಕ್ರಮ ವಹಿಸಿದ ಜಿಲ್ಲಾಧಿಕಾರಿಗಳ ಕೆಲಸ ಹಾಗೂ ಕಾಳಜಿಗೆ ನಾನು ಅಭಿನಂದಿಸುತ್ತೇನೆ ಎಂದರು.
ಜಿಲ್ಲಾಧಿಕಾರಿ ಶಿಲ್ಪನಾಗ್ ಮಾತನಾಡಿ, ಪುರಾಣಿ ಪೋಡಿಗೆ ಅಂಡರ್‌ಗ್ರೌಂಡ್ ಕೇಬಲ್ ಮೂಲಕ ವಿದ್ಯುತ್ ನೀಡುವ ಯೋಜನೆ ಇದಾಗಿದೆ. ನಾವು ಅರಣ್ಯ ಇಲಾಖೆಯಿಂದ ತಾಂತ್ರಿಕವಾಗಿ ಎಲ್ಲ ಮಂಜೂರಾತಿ ನೀಡುವುದು ಕಷ್ಟವಾಗಿದ್ದು, ಸರ್ಕಾರದ ಇಲಾಖೆಗಳು ಸಂಬಂಧಪಟ್ಟ ಸಚಿವರು ಹಾಗೂ ಶಾಸಕರ ಕಾಳಜಿಯಿಂದ ಈ ಕೆಲಸ ಬೇಗ ಆಗಿದೆ. ಆದಷ್ಟು ಬೇಗ ಸಂಬಂಧಪಟ್ಟ ಗುತ್ತಿಗೆದಾರರು ಈ ಕಾಮಗಾರಿಯನ್ನು ಬೇಗ ಮುಗಿಸಬೇಕು. ಪೋಡುಗಳಿಗೆ ರಸ್ತೆ ನಿರ್ಮಾಣಕ್ಕೂ ಆರ್‌ಡಿಪಿಆರ್‌ಗೆ ಪ್ರಸ್ತಾವನೆ ಸಲಿಸಲಾಗಿದೆ. ರಸ್ತೆ ಕಾಮಗಾರಿಗಳು ಆರಂಭಗೊಳ್ಳಲಿದೆ. ಅಲ್ಲದೆ ಈ ಭಾಗದಲ್ಲಿ ವಾಸಿಸುವ ಜನರಿಗೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇದ್ದು ಬಿಎಸ್‌ಎನ್‌ಎಲ್‌ನ ಟವರ್ ಹಾಕಲು ನಾವೂ ಮನವಿ ಮಾಡಿದ್ದೇವೆ ಎಂದರು.
ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ಹನೂರು ಶಾಸಕ ಮಂಜುನಾಥ್, ಗ್ರಾಪಂ ಅಧ್ಯಕ್ಷ ಸಿ.ಡಿ. ಮಹದೇವ, ಉಪಾಧ್ಯಕ್ಷೆ ಕಮಲಮ್ಮ, ಸದಸ್ಯರಾದ ಪ್ರದೀಪ್‌ಕುಮಾರ್, ಬಸವಣ್ಣ, ಸಾಕಮ್ಮ ಕಾಡಾ ಅಧ್ಯಕ್ಷ ಮರಿಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷೆ ಕೇತಮ್ಮ, ಸಿಇಒ ಮೋನಾ ರೋತ್, ಎಸ್‌ಪಿ ಕವಿತಾ, ಉಪ ವಿಭಾಗಾಧಿಕಾರಿ ಮಹೇಶ್, ಸೆಸ್ಕ್‌ನ ಇಇ ಸೋಮಶೇಖರ್, ತಬಸ್ಸುಮ್, ಲಿಂಗರಾಜು, ಶಂಕರ್, ಡಿವೈಎಸ್‌ಪಿ ಧರ್ಮೇಂದ್ರ ಆರ್‌ಎಫ್‌ಒ ನಾಗೇಂದ್ರ ನಾಯಕ, ತಹಸೀಲ್ದಾರ್ ಜಯಪ್ರಕಾಶ್, ತಾಪಂ ಇಒ ಉಮೇಶ್, ಪಿಡಿಒ ಕಾವ್ಯಾ, ಅರ್ಚಕ ಶೇಷಾದ್ರಿ, ಮುಖಂಡರಾದ ಸಿ.ಮಾದೇಗೌಡ, ದಾಸೇಗೌಡ, ವೆಂಕಟೇಶ್ ಮತ್ತಿತರರು ಹಾಜರಿದ್ದರು.