ಚಾಮರಾಜನಗರ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಮೂಲಸೌಕರ್ಯದ ಜತೆಗೆ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ನೀಡುವ ಆಹಾರ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕೆಂದು ಸಂಸದ ಸುನೀಲ್ ಬೋಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸಾಕಷ್ಟು ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಬಾಡಿಗೆ ಕಟ್ಟಡಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಇದಕ್ಕಾಗಿ ಎಲ್ಲ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆಯಾ ತಾಲೂಕು ತಹಸೀಲ್ದಾರರೊಂದಿಗೆ ಸಮನ್ವಯ ಸಾಧಿಸಿ ಅಂಗನವಾಡಿ ಕಟ್ಟಡಗಳಿಗೆ ಜಾಗ ಗುರುತಿಸಿ ಮಂಜೂರು ಮಾಡಿಸಿಕೊಳ್ಳಬೇಕು. ಅಂಗನವಾಡಿಗಳಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡುವ ಕಾರ್ಯ ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಪರಿಶಿಷ್ಟ ವರ್ಗಗಳ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಹಾಡಿಗಳಲ್ಲಿ ವಿತರಿಸುವ ಪೌಷ್ಟಿಕ ಆಹಾರ ಕಳಪೆಯಾಗಿರುವ ಬಗ್ಗೆ ದೂರುಗಳಿವೆ. ಮುಂದಿನ ದಿನಗಳಲ್ಲಿ ಹಾಡಿ ಜನರಿಗೆ ಸರಬರಾಜಾಗುವ ಆಹಾರ ಗುಣಮಟ್ಟದಿಂದ ಕೂಡಿರುವ ಬಗ್ಗೆ ಅಧಿಕಾರಿಗಳಿಗೆ ಪರಿಶೀಲಿಸಿ ಕ್ರಮ ವಹಿಸಬೇಕು. ಕೇಂದ್ರ ಪುರಸ್ಕೃತ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸಂಸದರು ನಿರ್ದೇಶನ ನೀಡಿದರು.
ಇ-ಸ್ವತ್ತು ನೀಡುವ ಸಂಬಂಧ ಜನಸಾಮಾನ್ಯರನ್ನು ಕಚೇರಿಗೆ ಅಲೆದಾಡಿಸಬಾರದು. ನಿಗದಿತ ಕಾಲಮಿತಿಯಲ್ಲಿ ಇ-ಸ್ವತ್ತು ನೀಡಲು ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುಂದಾಗಬೇಕು. ಯಾವುದೇ ದೂರುಗಳು ಬರದಂತೆ ಎಚ್ಚರಿಕೆ ವಹಿಸಿ ಶೀಘ್ರವಾಗಿ ಖಾತೆ ಮಾಡಿಕೊಡಬೇಕು. ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ತಡೆಗಟ್ಟಬೇಕು. ಆಸ್ತಿ ಹಾಗೂ ಜಮೀನಿನ ಸರ್ವೇ ಕಾರ್ಯ ಹಾಗೂ ಒತ್ತುವರಿ ತೆರವುಗೊಳಿಸುವಿಕೆ ಚುರುಕುಗೊಳಿಸಬೇಕು ಎಂದು ಲೋಕಸಭಾ ಸದಸ್ಯರು ತಿಳಿಸಿದರು.
ಇತ್ತೀಚೆಗೆ ಚಾಮರಾಜನಗರ ತಾಲೂಕಿನ ಹೊಮ್ಮ ಸರ್ಕಾರಿ ಶಾಲೆಯಲ್ಲಿ ಮಕ್ಕಳು ವರ್ಗಾವಣೆ ಪತ್ರ ಪಡೆದಿರುವ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಂಸದರು ಮಕ್ಕಳು ಮತ್ತೆ ಶಾಲೆಗೆ ಹಾಜರಾಗಿರುವ ಬಗ್ಗೆ ಹಾಗೂ ಅಡುಗೆ ಕೆಲಸದ ಮಹಿಳೆಯನ್ನು ಅಲ್ಲಿಯೇ ಮುಂದುವರಿಸಿರುವ ಹಾಗೂ ಹೊಸ ಶಿಕ್ಷಕರನ್ನು ನೇಮಕ ಮಾಡಿರುವ ಕುರಿತು ಪರಿಶೀಲನೆ ನಡೆಸಿದರು. ಯಾವುದೇ ಗೊಂದಲಗಳನ್ನು ಪರಿಹರಿಸಿ ಹೊಂದಾಣಿಕೆಯಿಂದ ಕೆಲಸ ಮಾಡುವಂತೆ ಅಧಿಕಾರಿಗಳು ಶಿಕ್ಷಕರಿಗೆ ತಿಳಿಹೇಳಬೇಕು ಎಂದು ಸಂಸದರು ಹೇಳಿದರು.
ಜಿಲ್ಲೆಯ ಮಹದೇಶ್ವರ ಬೆಟ್ಟದ ಹೂಗ್ಯಂ ವಲಯ ಅರಣ್ಯದಲ್ಲಿ ಹುಲಿಗಳು ಸಾವಿಗೀಡಾದ ಕುರಿತು ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಸಂಸದರು, ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಇಂತಹ ಅವಘಡ ನಡೆಯದಂತೆ ಕಟ್ಟೆಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು.
ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ, ಚಾಮರಾಜನಗರ ಪಟ್ಟಣದಲ್ಲಿ ಹೊಸ ಬಡಾವಣೆಗಳು ರಚನೆಯಾಗಿವೆ. ಆದರೆ ಮೂಲಸೌಕರ್ಯಗಳಿಲ್ಲದೆ ಜನರು ತೊಂದರೆಗೊಳಗಾಗಿದ್ದಾರೆ. ಹೊಸ ಬಡಾವಣೆಗಳಿಗೆ ಸಮರ್ಪಕ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿವೆ. ಇದನ್ನು ಕೂಡಲೇ ಅಧಿಕಾರಿಗಳು ಪರಿಹರಿಸಬೇಕು ಎಂದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಕುಡಿಯುವ ನೀರು, ರಸ್ತೆ ನಿರ್ಮಾಣ, ಬೀದಿದೀಪ ಅಳವಡಿಕೆ ಸೇರಿದಂತೆ ನಗರೋತ್ಥಾನ ಕಾಮಗಾರಿ ಅನುಷ್ಠಾನದಲ್ಲಿ ಸಮಸ್ಯೆಗಳಿದ್ದರೆ ತಕ್ಷಣವೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು. ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ವಹಿಸಬೇಕು. ಮುಂದಿನ ಸಭೆಯೊಳಗೆ ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.