ಹಾಡಹಗಲೇ ಮಹಿಳೆ ಕೊಲೆ

Published on

ಹಾಸನ: ನಗರದ ಲಕ್ಷ್ಮೀಪುರ ಬಡಾವಣೆಯಲ್ಲಿ ಶುಕ್ರವಾರ ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಲಾಗಿದೆ.
ನಗರದಲ್ಲಿ ಚಿನ್ನಾಭರಣಗಳ ಅಂಗಡಿ ಇಟ್ಟುಕೊಂಡಿರುವ ಕುಮಾರ್ ಎಂಬುವರ ಪತ್ನಿ ಮಂಜುಳ (42) ಕೊಲೆಯಾಗಿದ್ದಾರೆ. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಂಜುಳ ಅವರ ಮನೆಗೆ ನುಗ್ಗಿ ಬೆದರಿಸಿ ಲಾಕರ್ ಕೀ ಪಡೆದಿದ್ದಾರೆ. ಲಾಕರ್‌ನಲ್ಲಿದ್ದ ಚಿನ್ನ ಮತ್ತು ಹಣವನ್ನು ದೋಚಿದ ಮಂಜುಳ ಅವರ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪತಿ ಕುಮಾರ್ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಮನೆಗೆ ಊಟಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಲಾಕರ್ ಕೀಯನ್ನು ಯಾರಿಗೂ ಕಾಣದಂತೆ ಮುಚ್ಚಿಡುವುದರಿಂದ, ದುಷ್ಕರ್ಮಿಗಳು ತನ್ನ ಪತ್ನಿಯನ್ನು ಬೆದರಿಸಿ ಕೀ ಪಡೆದು ಕೊಲೆ ಮಾಡಿರಬಹುದು ಎಂದು ಪತಿ ಕುಮಾರ್ ಶಂಕಿಸಿದ್ದಾರೆ.
ಪೆನ್‌ಶನ್ ಮೊಹಲ್ಲಾ ಠಾಣೆ ಪೊಲೀಸರು ಮತ್ತು ಬೆರಳಚ್ಚು ತಜ್ಞರು ಶ್ವಾನ ದಳದೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಹಾಡಹಗಲೇ ಈ ಘಟನೆ ನಡೆದಿರುವುದು ನಗರವನ್ನು ಬೆಚ್ಚಿ ಬೀಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net