

ಬೀದರ್: ತಾಲೂಕಿನ ಜನವಾಡಾ ಗ್ರಾಮದ ವಿದ್ಯಾನಂದ ಜೋಶಿ ಅವರ ಮನೆಯಲ್ಲಿ ಮಂಗಳವಾರ ಮಧ್ಯಾಹ್ನದಲ್ಲಿಯೇ ಕಳ್ಳತನ ನಡೆದಿದೆ.
ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿಯ ಜನವಾಡ ಹೊರವಲಯದ ಕೆಇಬಿ ಸಬ್ ಸ್ಟೇಷನ್ ಎದುರಿನ ಮನೆಯಲ್ಲಿ ಮಧ್ಯಾಹ್ನ 1ರಿಂದ 2ರೊಳಗಿನ ಅವಧಿಯಲ್ಲಿ ಕಳ್ಳತನ ಆಗಿದೆ. ಮುಖ್ಯ ದ್ವಾರದ ಬೀಗ ಒಡೆದು ಒಳಗೆ ನುಗ್ಗಿದ ಕಳ್ಳರು ಅಲಮಾರಾ ಒಡೆದಿದ್ದಾರೆ. ಸುಮಾರು 1.54 ಲಕ್ಷ ರೂ. ನಗದು ಮತ್ತು 15 ತೊಲಾ ಬೆಳ್ಳಿ ದೋಚಿ ಪರಾರಿಯಾಗಿದ್ದಾರೆ. ಕಳ್ಳರು ರಾಡ್ ಬಳಸಿ ಬೀಗ ಒಡೆದಿರುವುದು ಕಂಡುಬಂದಿದೆ.
ಬೀದರ್ ನಲ್ಲಿ ಕಾರ್ಯಕ್ರಮವಿರುವ ಕಾರಣ ಜೋಶಿ ಅವರು ಹೋಗಿದ್ದರು. ಮನೆಯಲ್ಲಿ ಯಾರೂ ಇರದದ್ದು ಗಮನಿಸಿದ ಕಳ್ಳರು ಸ್ವಲ್ಪ ಸಮಯದಲ್ಲಿಯೇ ಕೈಚಳಕ ತೋರಿಸಿದ್ದಾರೆ. ಡೋರ್ ಲಾಕ್ ಮಾಡಿದ ಮನೆ ಕೊಳ್ಳೆ ಹೊಡೆಯುವ ಹೊಂಚು ಹಾಕಿಯೇ ವ್ಯವಸ್ಥಿತವಾಗಿ ಈ ಕೃತ್ಯ ಎಸಗಿದಂತೆ ಕಂಡುಬರುತ್ತಿದೆ. ಸ್ಥಳಕ್ಕೆ ಜನವಾಡಾ ಪೊಲೀಸರು ಭೇಟಿ ನೀಡಿದರು. ಬೆರಳಚ್ಚು ತಜ್ಞರ ತಂಡ, ಶ್ವಾನ ದಳ ಭೇಟಿ ನೀಡಿ ಪರಿಶೀಲಿಸಿದೆ.