ಹಾಡಗೇರಿ ಊರಿನಲ್ಲಿ ಗಾಢ ಮೌನ

22hnr1 b
Published on

ಹೊನ್ನಾವರ: ಉಡುಪಿ ಜಿಲ್ಲೆಯ ಶಿರೂರು ಟೋಲ್ ಸಂಗ್ರಹಣಾ ಕೌಂಟರ್ ಬಳಿ ಬುಧವಾರ ಸಂಭವಿಸಿದ ಆಂಬುಲೆನ್ಸ್ ಅಪಘಾತದಲ್ಲಿ ಮೃತಪಟ್ಟವರ ಮೂರು ಕುಟುಂಬಗಳು ದುಃಖದ ಮಡುವಿನಲ್ಲಿವೆ. ಕರುಳು ಕಿವುಚುವ ಘಟನೆಯಿಂದ ತಾಲೂಕಿನ ಹಡಿನಬಾಳ ಗ್ರಾ.ಪಂ. ವ್ಯಾಪ್ತಿಯ ಹಾಡಗೇರಿ ಊರು ದುಃಖತಪ್ತಗೊಂಡು ಗಾಢ ಮೌನದಲ್ಲಿ ಮುಳುಗಿದೆ.

ದುರಂತದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಆಧಾರಸ್ತಂಭ ಇಲ್ಲವಾಗಿ ದಿಕ್ಕುಗಾಣದಾಗಿದ್ದಾರೆ.

ಹಾಡಗೇರಿಯ ಮಂಜುನಾಥ ಸತ್ಯ ನಾಯ್ಕ ಅವರು ಕವಲಕ್ಕಿಯಲ್ಲಿ ಹಲವು ವರ್ಷಗಳಿಂದ ಗೋಬಿ ಮಂಚೂರಿಯನ್ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದರು. ಕಷ್ಟಪಟ್ಟು ದುಡಿದು ಏಳಿಗೆ ಕಾಣುತ್ತಿದ್ದ ಸಮಯದಲ್ಲಿ ವಿಧಿಯ ಆಟಕ್ಕೆ ಬಲಿಯಾಗಿರುವುದು ಇವರನ್ನು ಆಶ್ರಯಿಸಿದ ಪತ್ನಿ, ಪುತ್ರಿ, ಪುತ್ರ ಹಾಗೂ ಸಂಬಂಧಿಕರಿಗೆ ದಿಗಿಲು ಉಂಟುಮಾಡಿದೆ.

ಬಳಕೂರಿನ ಗಜಾನನ ನಾಯ್ಕ ತಿಂಡಿ ತಯಾರಿಕೆಯಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದರು. ಮಂಜುನಾಥ ನಾಯ್ಕ ಅವರ ಅಂಗಡಿಯಲ್ಲಿ ಕೆಲವು ವರ್ಷಗಳಿಂದ ಕೆಲಸಕ್ಕಿದ್ದರು. ಬುಧವಾರ ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ಸಂಬಂಧಿಕರು ಮತ್ತು ಹಿತೈಷಿಗಳು ಸೇರಿ ಉಡುಪಿಯ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದೆ. ಅದೇ ಆಂಬುಲೆನ್ಸ್​ನಲ್ಲಿ ಹೋಗುತ್ತಿದ್ದ ಪತ್ನಿ ಗೀತಾ ಅವರ ಕೈ ಮುರಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳು ಚಿಕ್ಕವರಿದ್ದಾರೆ. ತಂದೆ ಇಲ್ಲ; ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುದ್ದಾರೆ.

ಹಾಡಗೇರಿಯ ಲೋಕೇಶ ನಾಯ್ಕ ಮತ್ತು ಪತ್ನಿ ಜ್ಯೋತಿ ನಾಯ್ಕ ಇಬ್ಬರೂ ತಮ್ಮ ಸಂಬಂಧಿ ಗಜಾನನ ನಾಯ್ಕ ಅವರಿಗೆ ಚಿಕಿತ್ಸೆ ಕೊಡಿಸುವ ಸದುದ್ದೇಶದಿಂದ ಆಂಬುಲೆನ್ಸ್ ಏರಿದ್ದರು. ಆದರೆ, ವಿಧಿಯಾಟಕ್ಕೆ ಬಾರದೂರಿಗೆ ತೆರಳಿದ್ದಾರೆ. ಬಾಳಿ ಬದುಕಬೇಕಿದ್ದ ಜೋಡಿ ಸಾವಿನಲ್ಲಿಯೂ ಜತೆಯಾಗಿದ್ದಾರೆ. ಗಾರೆ ಕೆಲಸ ಮಾಡುತ್ತಿದ್ದ ಇವರಿಗೆ ಪುತ್ರ ಮತ್ತು ಪುತ್ರಿ ಇದ್ದಾರೆ. ಮಗ ಮತ್ತು ಸೊಸೆಯ ಸಾವಿನ ಕಹಿ ಘಟನೆಯಿಂದ ಲೋಕೇಶ ಅವರ ತಂದೆ-ತಾಯಿ ಇನ್ನೂ ಚೇತರಿಸಿಕೊಂಡಿಲ್ಲ.

ಹಾಡಗೇರಿಯಲ್ಲಿ ಗುರುವಾರ ಮೂರು ಜನರ ಅಂತ್ಯಕ್ರಿಯೆ ವೇಳೆ ಚಿಕ್ಕ ಮಕ್ಕಳು ಹೆತ್ತವರ ಚಿತೆಗೆ ಕೊಳ್ಳಿ ಇಡುವುದನ್ನು ನೋಡಿ ಊರಿನ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಅಕ್ಷರಶಃ ಕಣ್ಣೀರು ಸುರಿಸಿದರು. ಇನ್ನೊಂದು ಇಂಥ ಘಟನೆ ಯಾವ ಊರಲ್ಲಿಯೂ ಸಂಭವಿಸುವುದು ಬೇಡ ಎಂದು ಸಾರ್ವಜನಿಕರು ಪ್ರಾರ್ಥಿಸುತ್ತಿರುವುದು, ಘಟನೆ ಉಂಟುಮಾಡಿದ ಸಾಮೂಹಿಕ ಸಂತಾಪಕ್ಕೆ ಕನ್ನಡಿಯಾಗಿದೆ.

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೆಚ್ಚಿದ ಒತ್ತಡ

ಬೇರೆ ಜಿಲ್ಲೆಗೆ ಚಿಕಿತ್ಸೆಗೆ ಹೋಗಿ ಶಿರೂರು ಟೋಲ್ ಸಂಗ್ರಹಣಾ ಕೌಂಟರ್ ಬಳಿ ಆಂಬುಲೆನ್ಸ್ ಅಪಘಾತದಲ್ಲಿ ನಾಲ್ಕು ಜನರು ಮೃತಪಟ್ಟಿರುವ ಘಟನೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹೋರಾಟ ಕಾವು ಪಡೆದುಕೊಂಡಿದೆ. ಪ್ರತಿ ಊರಿನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಸಜ್ಜಿತ ಆಸ್ಪತ್ರೆಯ ಕೂಗು ಕೇಳಿ ಬರುತ್ತಿದೆ. ಪಕ್ಕದ ಜಿಲ್ಲೆಗಳಲ್ಲಿ ಹಲವು ಆಸ್ಪತ್ರೆಗಳಿರುವಾಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದು ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಸಂಘಟನೆಗಳು ಬಲಗೊಂಡು ಹೋರಾಟಕ್ಕೆ ಅಣಿಯಾಗುತ್ತಿವೆ. ‘ಉತ್ತರ ಕನ್ನಡಕ್ಕೆ ಸ್ವಾಗತ, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಜೀವದ ಆಸೆ ಇದ್ದರೆ ನಿಧಾನವಾಗಿ ಚಲಿಸಿ’ ಎಂದು ಹೆದ್ದಾರಿಗಳಲ್ಲಿ ಫಲಕ ಹಾಕಿದ್ದಾರೆ. ಮೈಲಿಗಲ್ಲಿನ ಮೇಲೆ ‘ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: 200 ಕಿ.ಮೀ., ಸ್ಮಶಾನ 0 ಕಿ.ಮೀ.’ ಎಂದು ಬರೆದಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಒಟ್ಟಾರೆ ಆಂಬುಲೆನ್ಸ್ ಅವಘಡದ ಪರಿಣಾಮಗಳು ಹೋರಾಟದ ಕಿಚ್ಚನ್ನು ಹೊತ್ತಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net