ಹಾಂದಿ-ಬಸ್ಕಲ್ ರಸ್ತೆ ಮೇಲ್ದರ್ಜೆಗೇರಿಸಿ

MDG mp kota
ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮನವಿ ಸಲ್ಲಿಸಿದರು. ದೀಪಕ್ ದೊಡ್ಡಯ್ಯ, ಟಿ.ಎಂ.ಗಜೇಂದ್ರ, ಪ್ರಸನ್ನ ಗೌಡ ಇತರರಿದ್ದರು.
Published on

ಮೂಡಿಗೆರೆ: ಬೇಲೂರಿನಿಂದ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ಹಾಂದಿ-ಬಸ್ಕಲ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ನೇತೃತ್ವದಲ್ಲಿ ಗುರುವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಶೃಂಗೇರಿಯಿಂದ ಹಾಂದಿ ಗ್ರಾಮದವರೆಗೆ ರಾಜ್ಯ ಹೆದ್ದಾರಿಯಾಗಿದೆ. ಹಾಂದಿ ಗ್ರಾಮದಿಂದ ಬೇಲೂರಿನವರಿಗೆ ಜಿಲ್ಲಾ ಮುಖ್ಯರಸ್ತೆಯಾಗಿದೆ. ಈ ರಸ್ತೆಯನ್ನು ಈಗ ಹಾಂದಿ ಗ್ರಾಮದಿಂದ ನಂದಿಪುರದ ಕೆಳಹಾಂದಿವರೆಗೆ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಸಿದ್ಧತೆ ನಡೆದಿದೆ. ಅಲ್ಪಸ್ವಲ್ಪ ಮೇಲ್ದರ್ಜೆಗೇರಿಸುವುದರಿಂದ ಪ್ರಯೋಜನವಿಲ್ಲ. ಬೇಲೂರಿನಿಂದ ಶೃಂಗೇರಿವರೆಗೆ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿದರೆ ತುಮಕೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಬೇಲೂರಿನಲ್ಲಿ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಹಾಗೂ ಶೃಂಗೇರಿಯಿಂದ ಮಂಗಳೂರು, ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಮಲೆನಾಡು ಭಾಗ ಪ್ರವಾಸಿ ತಾಣವಾಗಿರುವುದರಿಂದ ಬೆಂಗಳೂರು ಮತ್ತಿತರ ಮಹಾನಗರಗಳಿಂದ ಬೇಲೂರು, ಶೃಂಗೇರಿ, ಉಡುಪಿ, ಮಂಗಳೂರು ಮತ್ತಿತರ ಕಡೆ ತೆರಳುವ ಪ್ರವಾಸಿಗರಿಗೆ ಹೆದ್ದಾರಿ ಅನುಕೂಲವಾಗಲಿದೆ. ಈಗ ಜಿಲ್ಲಾ ಮುಖ್ಯರಸ್ತೆಯಾಗಿ ತೀರ ಕಿರಿದಾಗಿದೆ. ಗುಂಡಿಯಿಂದಾಗಿ ಸಂಚರಿಸುವಂತಿಲ್ಲ. ರಸ್ತೆ ಅಭಿವೃದ್ಧಿಗೆ ಶಾಸಕಿ ನಯನಾ ಮೋಟಮ್ಮ ಅನುದಾನ ಬಿಡುಗಡೆ ಮಾಡಿದ್ದಾರೆ. ಕೂಡಲೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಬೇಲೂರಿನಿಂದ ಬಸ್ಕಲ್-ಹಾಂದಿ ಮೂಲಕ ಶೃಂಗೇರಿಗೆ ಸಾಗುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂಬ ಮನವಿ ಬಂದಿದೆ. ಪ್ರವಾಸಿಗರು ಹೆಚ್ಚಾಗಿ ಸಂಚರಿಸುವ ರಸ್ತೆಯಾಗಿರುವ ಕಾರಣ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಬೇಕೆಂಬ ಸ್ಥಳೀಯರ ಒತ್ತಾಯ ಸಮರ್ಪಕವಾಗಿದೆ. ರಸ್ತೆಯ ಸರ್ವೇ ನಡೆಸಿ ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ವರದಿ ಬಂದ ಬಳಿಕ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. ಇಂದ್ರವಳ್ಳಿ ಗ್ರಾಮಕ್ಕೆ ಬಿಎಸ್‌ಎನ್‌ಎಲ್ ಟವರ್ ನಿರ್ಮಿಸಲು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಇಂದ್ರವಳ್ಳಿ ಅವರು ಈ ಹಿಂದೆಯೂ ಮನವಿ ನೀಡಿದ್ದರು. ನಂದಿಪುರ ಗ್ರಾಮಕ್ಕೆ ಟವರ್ ನಿರ್ಮಿಸಲು ನಂದಿಪುರ ಗ್ರಾಪಂ ಮಾಜಿ ಅಧ್ಯಕ್ಷ ಪ್ರಸನ್ನ ಗೌಡ ಮನವಿ ನೀಡಿದ್ದಾರೆ. ಎರಡೂ ಗ್ರಾಮಗಳಲ್ಲಿ ಬಿಎಸ್‌ಎನ್‌ಎಲ್ ಟವರ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಮನವಿ ನೀಡುವ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ನಂದಿಪುರ ಗ್ರಾಪಂ ಮಾಜಿ ಅಧ್ಯಕ್ಷ ಪ್ರಸನ್ನ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net