

ಬಾಗಲಕೋಟೆ: ಹಸ್ತಪ್ರತಿಗಳಲ್ಲಿ ತಾಡೋಲೆ ಪ್ರತಿಗಳಿಗಿಂತಲೂ ಕಾಗದದ ದಾಖಲೆಗಳ ಸಂಖ್ಯೆ ಹೆಚ್ಚಾಗಿದ್ದು, ಅವುಗಳನ್ನು ಸಂಗ್ರಹಿಸಿ ಪ್ರಕಟಿಸುವ ಕೆಲಸವಾಗಬೇಕಿದೆ. ಹಸ್ತಪ್ರತಿಗಳು ರಾಷ್ಟ್ರೀಯ ಸಂಪತ್ತು ಎಂದು ಪರಿಗಣಿಸಿ ರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದು ಧಾರವಾಡದ ಹಿರಿಯ ವಿದ್ವಾಂಸ ಪ್ರೊ.ಲಕ್ಷ್ಮಣ ತೆಲಗಾವಿ ಹೇಳಿದರು.
ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಮಂಗಳವಾರ ಹಂಪಿ ವಿವಿಯ ಹಸ್ತಪ್ರತಿ ಶಾಸ್ತ್ರ ವಿಭಾಗ ಹಾಗೂ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕರ್ನಾಟಕ ಸಾಹಿತ್ಯ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಖಿಲ ಕರ್ನಾಟಕ ೧೯ ನೇ ಹಸ್ತಪ್ರತಿ ಸಮ್ಮೇಳನಾಧ್ಯಕ್ಷರಾಗಿ ಅವರು ಮಾತನಾಡಿದರು.
ತಾಡೋಲೆಯಷ್ಟೆ ಕಾಗದದ ಹಸ್ತಪ್ರತಿಗಳು ಕೂಡ ಪ್ರಮುಖವಾಗಿದ್ದು ಇವುಗಳ ಸಂಖ್ಯೆ ವಿರಳವಾಗಿದೆ. ಶಾಲಾ ಕಾಲೇಜುಗಳಲ್ಲಿ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರ ಹಮ್ಮಿಕೊಳ್ಳುವ ಮೂಲಕ ಅದರ ಮಹತ್ವವನ್ನು ಜನರಿಗೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ. ಕಾಗದ ಹಸ್ತಪ್ರತಿಗೆ ಸಂಬಂಧಿಸಿದಂತೆ ಭಾರತದಲ್ಲಿ ೧೩ನೇ ಶತಮಾನದಲ್ಲೇ ಕಾಗದದ ಬಳಕೆ ಪ್ರಾರಂಭವಾಯಿತು. ಏಕೋತ್ತರಶತಸ್ಥಲಟೀಕು ಕೃತಿಯು ಅತ್ಯಂತ ಹಳೆಯ ಕೃತಿಯಾಗಿದೆ. ಕಾಗದ ದಾಖಲೆಗಳಲ್ಲಿ ಕೈಫಿಯತ್ತುಗಳೇ ಅಧಿಕವಾಗಿದ್ದು, ವಿಜಯನಗರದ ಅಳಿಯ ರಾಮರಾಯನ ಕುರಿತಾದ ರಾಮರಾಜನ ಬಖೈರು, ಚಿತ್ರದುರ್ಗದ ಕೊನೆಯ ದೊರೆ ರಾಜಾವೀರ ಮದಕರಿ ನಾಯಕನ ಕುರಿತಾದ ಚಿತ್ರದುರ್ಗದ ಬಖೈರು ಮತ್ತು ಹೈದರಲಿ ಕುರಿತಾದ ಹೈದರ್ ನಾಮೆ ಬಖೈರು ಎಂಬ ಮೂರು ಬಖೈರುಗಳು ಸಿಗುತ್ತವೆ. ಆದರೆ ಮರಾಠಿಯಲ್ಲಿ ನೂರಕ್ಕೂ ಅಧಿಕ ಬಖೈರಗಳನ್ನು ಕಾಣುತ್ತೇವೆ ಎಂದರು.
ಕರ್ನಾಟಕ ಇತಿಹಾಸ ರಚನೆಯಲ್ಲಿ ಮರಾಠಿ ದಾಖಲೆಗಳು ಹಾಗೂ ಬಖೈರ್ ಗಳು ಪ್ರಮುಖವಾಗಿದ್ದು ಪೇಶ್ಚೆದಪ್ತರು ಕರ್ನಾಟಕ ಜಮಾವತ್ ಬಗ್ಗೆ ಹೇಳುತ್ತದೆ. ಧಾರವಾಡ, ಹುಬ್ಬಳ್ಳಿ, ಕಿತ್ತೂರು, ಬೆಳಗಾವಿ ಪ್ರದೇಶದ ಸ್ಥಾನಿಕ ಸಂಸ್ಥಾನಗಳ ದಾಖಲೆಯನ್ನು ಇದು ಒದಗಿಸುತ್ತದೆ. ಬೆಳವಡಿ ಮಲ್ಲಮ್ಮನ ಶೌರ್ಯಗಾಥೆಯನ್ನು ಮರಾಠಿ ಬಖೈರಗಳು ಹೇಳುತ್ತವೆ. ಈ ನಿಟ್ಟಿನಲ್ಲಿ ಡಾ.ಎಂ.ವೈ.ಸಾವಂತರ ಪರಿಶ್ರಮವು ಪ್ರಮುಖವಾದದ್ದು ಎಂದು ತಿಳಿಸಿದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷರು, ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಹಸ್ತಪ್ರತಿಗಳು ದೇಶದುದ್ದಕ್ಕೂ ಸಿಗುತ್ತವೆ, ದೇಶ ವಿಭಜನೆಯ ಸಂದರ್ಭದಲ್ಲಿ ಅನೇಕ ಹಸ್ತಪ್ರತಿಗಳನ್ನು ಸುಟ್ಟುಹಾಕಲಾಗಿತ್ತು ಆದರೂ ಹಲವಾರು ಹಸ್ತಪ್ರತಿಗಳು ಲಭ್ಯವಿದ್ದು ಧರ್ಮಸ್ಥಳ ಸೇರಿದಂತೆ ವಿವಿಧೆಡೆ ಲಭ್ಯವಿವೆ. ಹಳಗನ್ನಡ ಮತ್ತು ಹಸ್ತಪ್ರತಿಗಳು ದೇಶದ ಸಂಪತ್ತು ಇದ್ದಂತೆ. ಪ್ರಾಧ್ಯಾಪಕರುಗಳು ಕೇವಲ ಬೋಧನೆಗೆ ಮಾತ್ರ ಸಿಮೀತವಾಗದೆ ಸಂಶೋಧನೆ ಕಡೆಗೆ ಗಮನ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹಂಪಿ ವಿವಿ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎಫ್.ಟಿ ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಂಪಿ ವಿವಿ ಕುಲಪತಿ ಡಾ. ಸ.ಚಿ ರಮೇಶ, ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಎಸ್. ಸೂಳಿಭಾವಿ, ಆಡಳಿತ ಅಧಿಕಾರಿ ವಿ.ಆರ್ ಶಿರೋಳ, ಬಿ.ಎಚ್.ಆರ್.ಡಿ ನಿರ್ದೆಶಕ ಎಸ್ ಆರ್ ಮನಹಳ್ಳಿ, ಪ್ರಾಚಾರ್ಯ ಡಾ.ವಿ.ಎಸ್.ಕಟಗಿಹಳ್ಳಿಮಠ, ಜಿ.ಎನ್ ಪಾಟೀಲ್ ಸೇರಿದಂತೆ ವಿವಿದ ಮಹಾವಿದ್ಯಾಲಯಗಳ ಪ್ರಾಚಾರ್ಯರು, ಪ್ರಾದ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಎಸ್.ಡಿ ಕೆಂಗಲಗುತ್ತಿ ನಿರೂಪಿಸಿದರು, ಡಾ. ಬಿ.ವಿ.ಖೋತ ವಂದಿಸಿದರು.