

ಸಾಗರ: ಮಲೆನಾಡಿನ ರೈತರ ಬದುಕನ್ನು ಅನಾವರಣಗೊಳಿಸುವ ಹಸೆಚಿತ್ತಾರಗಳು ಅಕ್ಷರಸ್ಥರಿಗೂ ಸವಾಲೆಸೆಯುತ್ತವೆ. ಇಂತಹ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲೇಬೇಕಾದ ಅವಶ್ಯಕತೆ ಇದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ನಗರದ ಎಲ್.ಬಿ.ಕಾಲೇಜಿನ ಡಾ. ಜಿ.ಎ.ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಚಿತ್ತಾರ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಆಯೋಜಿಸಿದ್ದ ಎರಡು ದಿನಗಳ ಅಂತರ ಕಾಲೇಜು ಹಸೆಚಿತ್ತಾರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅವಿದ್ಯಾವಂತರ ಕಲಿತಿದ್ದು ಇದೀಗ ವಿದ್ಯಾವಂತರು ಕಲಿಯುತ್ತಿದ್ದಾರೆ. ವಿದ್ಯಾವಂತರ ಕೈಯಲ್ಲಿ ಇಂತಹ ಕಲೆ ಸಿಕ್ಕರೆ ಅದು ಇನ್ನಷ್ಟು ಅಭಿವೃದ್ಧಿಯಾಗಿ ಹೊಸ ವಿನ್ಯಾಸದೊಂದಿಗೆ ವಿಸ್ತಾರಗೊಳ್ಳಲು ಸಾಧ್ಯವಿದೆ. ಮಲೆನಾಡಿನ ಗ್ರಾಮೀಣ ಬದುಕನ್ನು ಅತ್ಯಂತ ವ್ಯವಸ್ಥಿತವಾಗಿ ಕಟ್ಟಿಕೊಟ್ಟ ಮಹಿಳೆಯರು ಯಾವುದೇ ಮನ್ನಣೆ, ಪ್ರಶಸ್ತಿ, ಪುರಸ್ಕಾರಗಳತ್ತ ಮುಖಮಾಡಿದವರಲ್ಲ, ತಮ್ಮ ಬೆರಳುಗಳ ತುದಿಯಿಂದಲೇ ಕೋನ, ವೃತ್ತಗಳನ್ನು ಬಿಡಿಸಿ ಚಿತ್ತಾರಗಳನ್ನು ಮೂಡಿಸುತ್ತ ಬಂದಿದ್ದಾರೆ, ಹಸೆ ಗೋಡೆಯ ಚಿತ್ತಾರವೇ ಒಂದು ಅದ್ಭುತ ಪರಿಕಲ್ಪನೆ, ಇದನ್ನು ಉಳಿಸಿಕೊಳ್ಳುವ ಪ್ರಯತ್ನ ಇಂತಹ ಶಿಬಿರಗಳ ಮೂಲಕ ಆಗಬೇಕು ಎಂದು ಹೇಳಿದರು.
ಎಂಡಿಎಫ್ ಅಧ್ಯಕ್ಷ ಎಂ.ಹರನಾಥ ರಾವ್ ಮಾತನಾಡಿ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಕಾಲೇಜಿನ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು, ಅದರಲ್ಲಿಯೂ ದೇಸಿ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ. ಬರುವ ದಿನಗಳಲ್ಲಿ ಈ ರೀತಿಯ ಶಿಬಿರಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಬಹುಮುಖಿ ಪ್ರತಿಭೆಗೆ ವೇದಿಕೆ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ಜನಪದೀಯರ ಕಲೆಯ ಸಾಂಗತ್ಯ ಅಪೂರ್ವವಾದದ್ದು. ಹಸೆ ಚಿತ್ತಾರ ಮನುಷ್ಯ ಬದುಕಿನ ವಿವಿಧ ಮಜಲಗಳನ್ನು ತಿಳಿಸಿಕೊಡುವ ಶ್ರೇಷ್ಠ ಕಲೆಯಾಗಿದೆ. ಇಂತಹ ಕಲೆ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಇಂದು ವಿಶ್ವದಾದ್ಯಂತ ವ್ಯಾಪಿಸಿದೆ. ಹಸೆ ಕಲಿತವರು ಇನ್ನೊಬ್ಬರಿಗೆ ಕಲಿಸಿ ಕೊಡುವ ಮೂಲಕ ಕಲೆಯನ್ನು ಬೆಳೆಸುವತ್ತ ಹೆಜ್ಜೆ ಹಾಕಿರುವುದು ಅನುಕರಣೀಯ ಸಂಗತಿಯಾಗಿದೆ, ಪಂಚತಾರ ಸಂಸ್ಕೃತಿಯಲ್ಲಿ ಹಸೆಚಿತ್ತಾರ ಕಲೆ ಇಂದು ಬಹುಬೇಡಿಕೆ ನಿರ್ಮಾಣ ಮಾಡಿದೆ ಅದಕ್ಕೆ ಮಾರುಕಟ್ಟೆ ನಿರ್ಮಿಸುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.
ಹಸೆ ಚಿತ್ತಾರ ಜನಪ್ರಿಯ: ಬರುಬರುತ್ತಾ ಮಲೆನಾಡಿನ ಸಾಂಪ್ರದಾಯಿಕ ಹಸೆಚಿತ್ತಾರದ ಕಲೆ ಹೆಚ್ಚು ಜನಪ್ರಿಯಗೊಳ್ಳುತ್ತಿದೆ, ವಿದ್ಯಾವಂತರು ಕೂಡ ಇದನ್ನು ಬಹಳ ಗೌರವದಿಂದ ಸ್ವೀಕರಿಸುತ್ತಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೆ ಚಿತ್ತಾರ ಕಲಾವಿದೆ ಲಕ್ಷ್ಮೀ ರಾಮಪ್ಪ ಗಡೇಮನೆ ಹೇಳಿದರು. ಮಲೆನಾಡಿನ ದೀವರ ಪ್ರಾತಿನಿಧಿಕ ಕಲೆಯಾದ ಇದು ಮನೆಯಂಗಳದಲ್ಲೇ ಉಳಿದಿತ್ತು. ಈ ಕಲೆಯ ಅದ್ಭುತ ವಿನ್ಯಾಸ ಜನರನ್ನು ಹೆಚ್ಚು ಆಕರ್ಷಿಸುತ್ತಿದೆ. ಒಂದು ಕಾಲದಲ್ಲಿ ಬಳಕೆಯಲ್ಲಿ ಲಭ್ಯವಾದ ಬಣ್ಣಗಳಿಂದ ಗೋಡೆಗಳ ಮೇಲೆ ಹಸೆಚಿತ್ತಾರಗಳನ್ನು ಬರೆಯಲಾಗುತ್ತಿತ್ತು. ಈಗ ಹೊಸ ಆವಿಸ್ಕಾರಗಳು ಹಸೆಚಿತ್ತಾರದ ಕಲೆಗೆ ಇನ್ನು ಹೆಚ್ಚು ಜೀವತುಂಬುತ್ತಿವೆ. ಇಲ್ಲಿ ಬರೆಯುವ ತೇರು, ಹಸೆಬುಟ್ಟಿ, ಇವುಗಳೆಲ್ಲದರ ಮಹತ್ವವನ್ನು ಯುವಜನರಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದೇನೆ. ದೇಶದ ವಿವಿಧ ರಾಜ್ಯಗಳನ್ನು ಒಳಗೊಂಡಂತೆ 471 ಶಿಬಿರಗಳನ್ನು ಇಲ್ಲಿಯವರೆಗೆ ಆಯೋಜಿಸಿದ್ದು, ಸಾಗರದ ಲಾಲ್ ಬಹದ್ದೂರ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಅತ್ಯಂತ ಆಸಕ್ತಿಯಿಂದ ಭಾಗವಹಿಸಿರುವುದಲ್ಲದೆ, ಈ ಕಲೆಯ ಮಹತ್ವವನ್ನು ಅರಿತುಕೊಳ್ಳುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.