ಹಸು ಕೆಚ್ಚಲು ಕೂಯ್ದಿರುವುದಕ್ಕೆ ಆಕ್ರೋಶ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮನೆ ಮುಂದೆ ಬಿಜೆಪಿ ಪ್ರತಿಭಟನೆ

48
Published on

ಮೈಸೂರು: ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಸದೆ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ನಿರ್ಲಕ್ಷೃವಹಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಶಾರದಾದೇವಿನಗರದಲ್ಲಿರುವ ಸಚಿವರ ನಿವಾಸದ ಮುಂಭಾಗ ಜಮಾವಣೆಗೊಂಡ ಕಾರ್ಯಕರ್ತರು ಸಗಣಿ ಎರಚಿ ಪ್ರತಿಭಟನೆ ನಡೆಸಿದ್ದಲ್ಲದೇ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸಚಿವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಮುಖಂಡರು, ಕಾರ್ಯಕರ್ತರನ್ನು ಬಂಧಿಸಿ ಕೆಲ ಕಾಲದ ಬಳಿಕ ಬಿಡುಗಡೆಗೊಳಿಸಿದರು.

ನಿವೇದಿತಾ ನಗರ ಉದ್ಯಾನದ ಬಳಿ ಬಿಜೆಪಿ ರೈತ ಮೋರ್ಚಾದಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರೈತ ಮೋರ್ಚಾ ಅಧ್ಯಕ್ಷ ದೇವರಾಜೇಗೌಡ, ಹಿಂದೂಗಳ ಪೂಜ್ಯ ಭಾವನೆಯ ಪ್ರತೀಕ. ಗೋಮಾತೆಯ ಕೆಚ್ಚಲುಗಳನ್ನು ಕೂಯ್ದು ವಿಕೃತಿ ಮೆರೆದಿದ್ದಾರೆ. ಇಂತಹ ಹೇಯಕೃತ್ಯ ನಡೆದು ಎರಡು ದಿನ ಕಳೆದರೂ ಕೃತ್ಯದ ಬಗ್ಗೆ ಹೇಳಿಕೆ ನೀಡದೆ, ನೊಂದವರಿಗೆ ಸಾಂತ್ವನವನ್ನೂ ಹೇಳದೆ ಪಶುಸಂಗೋಪನ ಸಚಿವ ಕೆ. ವೆಂಕಟೇಶ್ ನಿರ್ಲಕ್ಷೃ ವಹಿಸಿದ್ದಾರೆ ಎಂದು ದೂರಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಈ ಸರ್ಕಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತಿಲ್ಲ. ಇದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಸಂಕ್ರಾಂತಿ ಹಬ್ಬದಂದು ನಾವೆಲ್ಲರೂ ಹಸುವನ್ನು ತಾಯಿ ಎಂದು ಪೂಜೆ ಮಾಡುತ್ತೇವೆ. ಆದರೆ, ಪೂಜೆ ಮಾಡಬಾರದು ಎಂದು ಪಾಪಿಗಳು ಹಸುವಿನ ಕೆಚ್ಚಲು ಕೂಯ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ಮೇಲೆ ಕ್ರಮವಾಗಿಲ್ಲ. ಅಧಿವೇಶನದೊಳಗೆ ಸಿ.ಟಿ. ರವಿ ಮೇಲೆ ಹಲ್ಲೆ ಮಾಡಿ ದುಂಡಾವರ್ತನೆ ತೋರಿದವರ ಮೇಲೆ ಕ್ರಮ ಆಗಲಿಲ್ಲ. ನೂರಾರು ಜನರು ಓಡಾಡುವ ಜಾಗದಲ್ಲಿ ಹಸುವಿನ ಕೆಚ್ಚಲು ಕೂಯ್ದಿದ್ದಾರೆ ಎಂದರೆ ಅವರಿಗೆ ಕಾನೂನಿನ ಮೇಲೆ ಭಯವಿಲ್ಲ ಎಂದು ಕಿಡಿಕಾರಿದರು.

ಯಾರು ಏನೇ ಮಾಡಿದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಈ ಸರ್ಕಾರದಲ್ಲಿ ಯಾವುದೇ ತಪ್ಪು ಮಾಡಿದರೂ ಬಚಾವಾಗಬಹುದು ಎಂಬ ಭಾವನೆ ಕಿಡಿಗೇಡಿಗಳು, ಮತಾಂದರಿಗೆ ಬಂದಂತಿದೆ. ಆದರೆ ಬಿಜೆಪಿ ಪಕ್ಷದಿಂದ ನಿರಂತರ ಹೋರಾಟ ನಡೆಸಿ ಚಾಟಿ ಬೀಸುವ ಕೆಲಸ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ನಗರಾಧ್ಯಕ್ಷರಾದ ಎಲ್.ನಾಗೇಂದ್ರ ಮಾತನಾಡಿ, ಹಸುವಿನ ಕೆಚ್ಚಲು ಕೂಯ್ದಿರುವುದಕ್ಕೆ ಜಮೀರ್ ಅಹಮದ್ ಖಾನ್ ಮೂರು ಹಸುವಿಗೆ ಆಗುವಷ್ಟು ಹಣವನ್ನು ಕೊಡುತ್ತೇನೆ ಎಂದು ಹೇಳುತ್ತಾರೆ. ಇದು ಉದ್ಧಟತನ, ದುರಹಂಕಾರ, ಹಣದ ಮದದ ಮಾತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದಲ್ಲಿ ನಡೆದಿರುವ ಹಗರಣಗಳನ್ನು ಮುಚ್ಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ, ಮುಖ್ಯಮಂತ್ರಿ ಬದಲಾವಣೆಗೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸಿ.ಟಿ. ರವಿ ಮೇಲೆ ಹಲ್ಲೆ ಪ್ರಕರಣದಲ್ಲಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ನವೀನ್ ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗೋಶಾಲೆಗಳಿಗೆ ಅನುದಾನವನ್ನು ಕಡಿತ ಮಾಡಿದೆ. ಹೀಗಾಗಿ ಸಚಿವ ವೆಂಕಟೇಶ್ ಅವರ ಮನೆಗೆ ಸಗಣಿ ಎರಚಿ ಎಚ್ಚರಿಕೆ ನೀಡಲು ಮುತ್ತಿಗೆ ಹಾಕುತ್ತೇವೆ ಎಂದರು.

ಸರ್ಕಾರ ಸೂಕ್ತ ಕ್ರಮಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಚಿವರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಘೇರಾವ್ ಹಾಕುವ ಕೆಲಸವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.

ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷ ಡಾ.ಅನಿಲ್ ಥಾಮಸ್, ಮಾಜಿ ಮೇಯರ್ ಎಂ.ಶಿವಕುಮಾರ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮಾಜಿ ಉಪ ಮೇಯರ್ ಶೈಲೇಂದ್ರ, ಮುಖಂಡರಾದ ಎಚ್.ಜಿ.ಗಿರಿಧರ್, ಜೋಗಿ ಮಂಜು, ಜೆ.ಎಸ್.ಜಗದೀಶ್, ರಘು, ಮಹೇಶ್, ಸುಬ್ಬಯ್ಯ ಇತರರು ಇದ್ದರು.

ಎಳ್ಳು ಬೆಲ್ಲ ತಿನ್ನಿಸಿ ಪೂಜೆ ಸಲ್ಲಿಕೆ

ಪ್ರತಿಭಟನೆಯಲ್ಲಿ ಹಸುವನ್ನು ಕರೆದುಕೊಂಡು ಬಂದಿದ್ದು, ಹಸುವಿಗೆ ಸ್ಥಳದಲ್ಲಿ ಎಳ್ಳು ಬೆಲ್ಲ ತಿನ್ನಿಸಿ ಪೂಜೆ ಸಲ್ಲಿಸಲಾಯಿತು.

ಪೂಜೆ ಬಳಿಕ ಮನೆಯ ಮುಂದೆ ಸಗಣಿ ಎರಚಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ಕಾರ್ಯಕರ್ತರನ್ನು ಬಂಧಿಸಿದರು. ಬಳಿಕ ನಗರ ಸಶಸ್ತ್ರ ಪಡೆ ಮೈದಾನಕ್ಕೆ ಕರೆದೋಯ್ದು ಬಿಡುಗಡೆಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net