

ಗದಗ: ಬುಧವಾರ ಮುಂಬೈ-ಗದಗ ಎಕ್ಸ್ಪ್ರೆಸ್ ರೈಲಿನ ಮೂಲಕ ಬಂದಿಳಿದ ಪ್ರಯಾಣಿಕರು ಕೆಲ ಹೊತ್ತು ನರಕಯಾತನೆ ಅನುಭವಿಸಿದ ಪ್ರಸಂಗ ನಡೆಯಿತು. ಜಿಲ್ಲಾಡಳಿತದ ಅಸಡ್ಡೆ ಹಾಗೂ ದರ್ಪದ ವರ್ತನೆಯಿಂದಾಗಿ ಪ್ರಯಾಣಿಕರು ಪರದಾಡಿದರು. ಮಕ್ಕಳಂತೂ ಹಸಿವೆಯಿಂದ ಕಂಗಾಲಾಗಿ ಬಿಕ್ಕಿ ಬಿಕ್ಕಿ ಅತ್ತರು.
ಬೆಳಗ್ಗೆ 11 ಗಂಟೆಗೆ ಬಂದ ರೈಲಿನಲ್ಲಿ 96 ಪ್ರಯಾಣಿಕರಿದ್ದರು. ಎಲ್ಲರ ಆರೋಗ್ಯ ತಪಾಸಣೆ ಮಾಡಲಾಯಿತು. ನಂತರ ಪ್ರಯಾಣಿಕರನ್ನು ಅಲ್ಲಿಂದ ಕ್ವಾರಂಟೈನ್ ಕೇಂದ್ರಕ್ಕೆ ಮತ್ತು ಬೇರೆ ಜಿಲ್ಲೆಯವರನ್ನು ಆಯಾ ಜಿಲ್ಲಾಡಳಿತದೊಂದಿಗೆ ಸಂರ್ಪಸಿ ಕಳಿಸಿಕೊಡಬೇಕಿತ್ತು. ಬಸ್ ಮೂಲಕ ಆಯಾ ಜಿಲ್ಲೆಗೆ ಕಳಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದರಾದರೂ ಮಧ್ಯಾಹ್ನ 1.30 ಆದರೂ ಬಸ್ ಬರಲೇ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯಂದ 50ಕ್ಕೂ ಹೆಚ್ಚು ಜನರು ನಿಲ್ದಾಣದ ಹೊರಭಾಗದಲ್ಲಿ ಬಸ್ಗಾಗಿ ಕಾಯತೊಡಗಿದರು. ಮಕ್ಕಳು, ವೃದ್ಧರು ಬಸ್ಗಾಗಿ ಕಾದೂ ಕಾದು ಚಡಪಡಿಸಿದರು. ರಾತ್ರಿ ಪ್ರಯಾಣದಿಂದ ಬಳಲಿ ಬಂದವರಿಗೆ ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ.
ಅಧಿಕಾರಿಗಳು ಹಾಗೂ ಸಿಬ್ಬಂದಿಯು ಪ್ರಯಾಣಿಕರಿಗೆ ದಬಾಯಿಸುವುದು, ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ ಎಂದು ಉದ್ಧಟತನದಿಂದ ಮಾತನಾಡುವುದು ಕಂಡುಬಂದಿತು. ‘ನಾವು ನಿಮ್ಮಂತೆ ಮನುಷ್ಯರು, ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಿ. ಬೇಗನೆ ಇಲ್ಲಿಂದ ಕಳಿಸಿಕೊಡಿ’ ಎಂದು ಪ್ರಯಾಣಿಕರು ಬೇಡಿಕೊಂಡರೂ ಯಾರೂ ಕೇಳುವವರಿರಲಿಲ್ಲ.
ಮಂಗಳವಾರ ಮತ್ತು ಬುಧವಾರ ತಲಾ ಒಂದು ರೈಲು ಗದಗಕ್ಕೆ ಬಂದಿದ್ದು, ಒಟ್ಟು 212 ಪ್ರಯಾಣಿಕರು ಆಗಮಿಸಿದ್ದಾರೆ. ಇದರಲ್ಲಿ ಗದಗ ಜಿಲ್ಲೆಗೆ ಸಂಬಂಧಿಸಿದ 132 ಜನರನ್ನು ಸ್ಥಾನಿಕ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. 80 ಜನರು ಬೇರೆ ಜಿಲ್ಲೆಯವರಾಗಿದ್ದು ಎಲ್ಲರನ್ನೂ ಆಯಾ ಜಿಲ್ಲಾಡಳಿತವನ್ನು ಸಂರ್ಪಸಿ ಕಳಿಸಿಕೊಡಲಾಗಿದೆ.
ಮೊಬೈಲ್ಫೋನ್ನಲ್ಲಿ ಬಿಜಿ
ಗದಗ ರೈಲು ನಿಲ್ದಾಣದ ಬಳಿ ಬುಧವಾರ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳ ಪೈಕಿ ಕೆಲವರು ಮೊಬೈಲ್ಫೋನ್ನಲ್ಲಿ ಬಿಜಿಯಾಗಿದ್ದರು. ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಅವರು ರೈಲು ನಿಲ್ದಾಣದ ಮುಂದೆ ನಿಂತಿದ್ದರಾದರೂ ಪ್ರಯಾಣಿಕರ ಪಾಡಿನ ಬಗ್ಗೆ ಗಮನ ಹರಿಸಲಿಲ್ಲ. ಅನೇಕ ಪ್ರಯಾಣಿಕರು ಅಲ್ಲಿಗೆ ಕಳಿಸಿ, ಇಲ್ಲಿಗೆ ಕಳಿಸಿ ಎಂದು ಸಿಬ್ಬಂದಿ ಜತೆಗೆ ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಈ ಕುರಿತು ಪ್ರಶ್ನಿಸಿದರೆ, ‘ನಮಗೆ ಗೊತ್ತಿಲ್ಲ. ಬೇಕಿದ್ದರೆ ನೀವೇ ಕೇಳಿಕೊಳ್ಳಿ’ ಎಂದು ಶ್ರೀನಿವಾಸಮೂರ್ತಿ ಪ್ರತಿಕ್ರಿಯಿಸಿದರು.
ಪರಸ್ಪರ ಅಂತರ ಮಾಯ
ಪ್ರಯಾಣಿಕರನ್ನು ಕ್ವಾರಂಟೈನ್ಗೆ ಕಳಿಸಲು ವಿಳಂಬವಾಗಿದ್ದರಿಂದ ಗದಗನಿಂದ ಮುಂಬೈಗೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸಿದರು. ಒಂದೆಡೆ ಮುಂಬೈನಿಂದ ಆಗಮಿಸಿದ ಪ್ರಯಾಣಿಕರು, ಇನ್ನೊಂದೆಡೆ ಮುಂಬೈಗೆ ತೆರಳುವ ಪ್ರಯಾಣಿಕರಿಂದಾಗಿ ನಿಲ್ದಾಣದಲ್ಲಿ ಗೊಂದಲವಾಯಿತು. ಅಲ್ಲದೆ, ಜನರು ಪರಸ್ಪರ ಅಂತರ ಕಾಯ್ದುಕೊಳ್ಳದೇ ಗುಂಪುಗುಂಪಾಗಿ ನಿಂತಿದ್ದರು.
ತಂದೆಯ ಹರ್ಷ
ಎರಡು ತಿಂಗಳ ನಂತರ ಕುಟುಂಬದ ಸದಸ್ಯರನ್ನು ಕಂಡ ತಂದೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಇಬ್ಬರು ಮಕ್ಕಳೊಂದಿಗೆ ತವರು ಮನೆ ಮುಂಬೈಗೆ ತೆರಳಿದ್ದ ಪತ್ನಿ ಲಾಕ್ಡೌನ್ನಿಂದಾಗಿ ಅಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಮುಂಬೈ-ಗದಗ ರೈಲು ಮೂಲಕ ನಗರಕ್ಕೆ ಬಂದ ಪತ್ನಿ, ಮಕ್ಕಳನ್ನು ಕರೆದುಕೊಂಡು ಹೋಗಲು ಪತಿ ಹುಬ್ಬಳ್ಳಿಯಿಂದ ಆಗಮಿಸಿದ್ದರು. ಮಕ್ಕಳನ್ನು ಕಂಡ ಕೂಡಲೆ ಕಣ್ಣಾಲಿಗಳು ತುಂಬಿ ಬಂದಿದ್ದವು.
ಮಂಗಳವಾರ ರಾತ್ರಿ ಮುಂಬೈ ನಿಲ್ದಾಣದಲ್ಲಿ ಊಟ ಮಾಡಿ ರೈಲು ಹತ್ತಿದ್ದೇವೆ. ಬುಧವಾರ ಬೆಳಗ್ಗೆ 11 ಗಂಟೆಗೆ ಗದಗ ನಿಲ್ದಾಣಕ್ಕೆ ಬಂದಿದ್ದೇವೆ. ಮಧ್ಯಾಹ್ನ 1.30 ಗಂಟೆಯಾದರೂ ಇಲ್ಲಿಂದ ನಮ್ಮನ್ನು ಕಳಿಸಿಕೊಡುತ್ತಿಲ್ಲ. ನಾವು ಧಾರವಾಡಕ್ಕೆ ಹೋಗಬೇಕಾಗಿದ್ದು, ಬೇಗನೆ ಕಳಿಸಿಕೊಡಿ ಎಂದು ಬೇಡಿಕೊಂಡರೂ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. | ಮುಂಬೈನಿಂದ ಆಗಮಿಸಿದ ಪ್ರಯಾಣಿಕ
ಬುಧವಾರ ಮುಂಬೈನಿಂದ ರೈಲು ಮೂಲಕ 96 ಜನ ಗದಗಕ್ಕೆ ಬಂದಿದ್ದಾರೆ. ಇದರಲ್ಲಿ 20 ಜನ ಜಿಲ್ಲೆಯವರಾಗಿದ್ದು, ಈಗಾಗಲೇ ಸ್ಥಾನಿಕ ಕ್ವಾರಂಟೈನ್ಗೆ ಕಳಿಸಲಾಗಿದೆ. ಉಳಿದವರು ಬೇರೆ ಜಿಲ್ಲೆಯವರಾಗಿದ್ದು, ಕೆಎಸ್ಆರ್ಟಿಸಿ ಬಸ್ ಮೂಲಕ ಅವರವರ ಜಿಲ್ಲೆಗೆ ಕಳಿಸಲಾಗುವುದು. ರಾಯಪ್ಪ ಹುಣಸಗಿ, ಎಸಿ ಗದಗ