ಹಸಿರು ವೃದ್ಧಿಗಾಗಿ ಭರವಸೆ ಹೆಜ್ಜೆಗಳು

----SRAMADANA----
Published on

ಗುಂಡ್ಲುಪೇಟೆ: ಗಿಡಗಂಟಿ ಬೆಳೆದು ಹಾಳಾಗಿದ್ದ ಕಲ್ಯಾಣಿ ಕೊಳವನ್ನು ಶ್ರಮದಾನದ ಮೂಲಕ ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು. ಹಸಿರು ವೃದ್ಧಿಗಾಗಿ ಸಸಿ ನೆಟ್ಟು ಗಣ್ಯರು ನೀರೆರೆದರು. ರೈತರಿಗೆ ಗಿಡ ವಿತರಣೆ ಮಾಡಲಾಯಿತು. ‘ಚಾಮರಾಜನಗರ ರಜತ ಸಂಭ್ರಮ’ದ ಜಾಥಾದಲ್ಲಿ ಭರವಸೆಯ ಹೆಜ್ಜೆಗಳು ಮೂಡಿದವು.


ಈ ಸಮಾಜಮುಖಿ ಕಾರ್ಯಗಳಿಗೆ ಶನಿವಾರ ಗುಂಡ್ಲುಪೇಟೆ ಸಾಕ್ಷಿಯಾಯಿತು. ಜಿಲ್ಲೆ ರೂಪುಗೊಂಡು 25 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಪಟ್ಟಣದ ದೊಡ್ಡ ಕಲ್ಯಾಣಿ ಬಳಿ ಆಯೋಜಿಸಿದ್ದ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

ಕಲ್ಯಾಣಿ ಸ್ವಚ್ಛತೆ
ಕಲ್ಯಾಣಿ ಸ್ವಚ್ಛತೆ


ಪಟ್ಟಣದ ವೀರಯೋಧ ಶಿವಾನಂದ ವೃತ್ತದಿಂದ ದೊಡ್ಡ ಕಲ್ಯಾಣಿ ಕೊಳದವರೆಗೆ ವಿದ್ಯಾರ್ಥಿಗಳ ಜಾಥಾ ನಡೆಯಿತು. ತಹಸೀಲ್ದಾರ್ ರವಿಶಂಕರ್ ಜಾಥಾಗೆ ಚಾಲನೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಹೇಮಂತ್‌ಕುಮಾರ್ ಮಾತನಾಡಿ, ವಿಜಯವಾಣಿ ಹಮ್ಮಿಕೊಂಡಿರುವ ಸಮಾಜಮುಖಿ ಕಾರ್ಯಗಳಿಗೆ ಪುರಸಭೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು. ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ಮುದ್ದುರಾಜು, ಕಿರಣ್‌ಕುಮಾರ್, ಕಾಲೇಜು ಎನ್.ಎಸ್.ಎಸ್ ಘಟಕಾಧಿಕಾರಿ ಶಿವಸ್ವಾಮಿ, ಪ್ರಾಧ್ಯಾಪಕ ಕೃಪಾ ಗಣೇಶ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಚಂದ್ರಶೇಖರ್, ರೈತ ಗಿರೀಶ್ ಇತರರು ಇದ್ದರು.

ಗಿಡ ನೆಟ್ಟರು, ಗಿಡ ವಿತರಣೆ ಮಾಡಿದರು: ಪ್ರಸಿದ್ಧ ಹುಲಿ ಮೀಸಲು ಅರಣ್ಯ ಪ್ರದೇಶ ಬಂಡೀಪುರವಿರುವ ಗುಂಡ್ಲುಪೇಟೆಯಲ್ಲಿ ಪರಿಸರ ಕಾಳಜಿಯಿಂದ ಗಿಡ ನೆಡುವ ಮತ್ತು ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪರವಾಸು ದೇವಾಲಯದ ಸಮೀಪದ ಆವರಣದಲ್ಲಿ ಹಿರಿಯ ಸಿವಿಲ್ ಹಾಗೂ ಜೆಎಂಎ್ಸಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ತಳವಾರ್, ಪ್ರಧಾನ ಸಿವಿಲ್ ಹಾಗೂ ಜೆಎಂಎ್ಸಿ ನ್ಯಾಯಾಲಯದ ನ್ಯಾಯಾಧೀಶ ಶಿವಕುಮಾರ್, ತಹಸೀಲ್ದಾರ್ ರವಿಶಂಕರ್, ಪುರಸಭೆ ಮುಖ್ಯಾಧಿಕಾರಿ ಹೇಮಂತ್‌ಕುಮಾರ್, ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಪುರಸ್ಕೃತ ಆರ್.ಕೆ.ಮಧು, ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಮಲ್ಲೇಶ್, ಕ್ಲೀನ್ ಮೈಸೂರು ೌಂಡೇಷನ್ ಪರಿಸರ ಬಳಗದ ಸದಸ್ಯೆ ಲೀಲಾವತಿ ವೆಂಕಟೇಶ್ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಲ್ಯಾಣಿಗೆ ಹೊಸ ರೂಪ:
ಕಲ್ಲು ಚಪ್ಪಡಿಗಳ ಸಂದಿಗಳಲ್ಲಿ ಬೆಳೆದು ನಿಂತಿದ್ದ ಗಿಡಗಂಟಿ, ಕುಡುಕರು ಎಸೆದು ಹೋಗಿದ್ದ ಮದ್ಯದ ಬಾಟಲಿಗಳನ್ನು ತೆಗೆದು ಸ್ವಚ್ಛಗೊಳಿಸಿ, ಪಾಳು ಬಿದ್ದ ಪ್ರದೇಶದಂತಾಗಿದ್ದ ಕಲ್ಯಾಣಿಗೆ ಹೊಸ ರೂಪ ನೀಡಲಾಯಿತು. ದೊಡ್ಡ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ಕೆ ಗುಂಡ್ಲುಪೇಟೆ ಉಪವಿಭಾಗದ ಎಸಿಎ್ ರವೀಂದ್ರ ಚಾಲನೆ ನೀಡಿದರು. ಗುದ್ದಲಿ ಹಿಡಿದು ಕಲ್ಯಾಣಿ ಮೆಟ್ಟಿಲ ಮೇಲೆ ಬೆಳೆದಿದ್ದ ಗಿಡಗಳನ್ನು ತೆಗೆದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಕಲ್ಯಾಣಿ ಸ್ವಚ್ಛಗೊಳಿಸಿದರು.
ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ತಂಡ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಶ್ರಮಿಸಿತು. ಗುದ್ದಲಿ, ಪಿಕಾಸಿ, ಕುಡುಗೋಲು, ಹಿಡಿದು ಕಲ್ಯಾಣಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಿತ್ತು ಹಾಕಿದರು. ಅಂಗಳದಲ್ಲಿ ಬೆಳೆದಿದ್ದ ಗಿಡಗಳನ್ನು ಕಿತ್ತೆಸೆದರು. ಮೆಟ್ಟಿಲುಗಳ ಮೇಲೆ ರಾಶಿಯಾಗಿ ಬಿದ್ದಿದ್ದ ಮಣ್ಣು, ಕಸ, ಕಡ್ಡಿ, ಪ್ಲಾಸ್ಟಿಕ್ ಅನ್ನು ಸಂಗ್ರಹಿಸಿ ಹೊರಹಾಕಿದರು. ಒಬ್ಬರಿಗೊಬ್ಬರು ಸೇವಾ ಕಾರ್ಯದಲ್ಲಿ ತೊಡಗಿದ್ದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಎದ್ದು ಕಾಣುತ್ತಿತ್ತು. ಶ್ರಮದಾನವನ್ನು ಸಂತಸದಿಂದ ಮಾಡಿದರು. ಈ ಮೂಲಕ ಯುವಜನರ ಪಾತ್ರವನ್ನು ಕೆಲಸ ಮಾಡಿ ತೋರಿಸಿದರು. ಕಲ್ಯಾಣಿ ಆವರಣವನ್ನು ಕುಡುಕರು ಅಡ್ಡೆ ಮಾಡಿಕೊಂಡಿದ್ದಾರೆ. ಅವರು ಬಿಸಾಡಿದ್ದ ಬಾಟಲಿಗಳನ್ನು ವಿದ್ಯಾರ್ಥಿಗಳು ಹೊರತೆಗೆದರು. ಇದನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಮೇಲಿದೆ.

ಪುರಾತನ ಕಲ್ಯಾಣಿ: ಪರವಾಸು ದೇವಾಲಯದ ಬಳಿ ಇರುವ ದೊಡ್ಡ ಕಲ್ಯಾಣಿಗೆ ಇತಿಹಾಸವಿದೆ. ಹಲವು ವರ್ಷಗಳ ಹಿಂದೆ ತುಂಬಿ ತುಳುಕುತ್ತಿದ್ದ ಕಲ್ಯಾಣಿ ನೀರಿನಿಂದ ರಾಮೇಶ್ವರನಿಗೆ ಅಭಿಷೇಕ ಮಾಡಲಾಗುತ್ತಿತ್ತು. ಹಬ್ಬದ ದಿನಗಳಲ್ಲಿ ಭಕ್ತರು ಮಾಘ ಸ್ನಾನ ಮಾಡುತ್ತಿದ್ದರು. ಕಲ್ಯಾಣಿ ಸಂರಕ್ಷಣೆ ಮಾಡದೆ ಹಾಳಾಗಿದೆ. ಈ ಕಲ್ಯಾಣಿ ಬಗ್ಗೆ ರಾಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ, ಗುಂಡ್ಲು ನದಿ ಹೋರಾಟ ಸಮಿತಿ ಪ್ರಮುಖರಾದ ಶಂಕರನಾರಾಯಣ ಜೋಯಿಸ ಅವರು ನ್ಯಾಯಾಧೀಶರಾದ ಬಸವರಾಜ ತಳವಾರ್, ಶಿವಕುಮಾರ್‌ಗೆ ಮಾಹಿತಿ ನೀಡಿದರು. ಸ್ಥಳದಲ್ಲಿದ್ದ ತಹಸೀಲ್ದಾರ್ ರವಿಶಂಕರ್ ಅವರಿಗೆ ನ್ಯಾಯಾಧೀಶ ಬಸವರಾಜ ತಳವಾರ್ ಅವರು ತಾಲೂಕಿನಲ್ಲಿರುವ ಕಲ್ಯಾಣಿಗಳ ಸಂರಕ್ಷಣೆ ಮಾಡಿ ಎಂದು ಸೂಚನೆ ನೀಡಿದರು.

ಅಪಾರ ಮೆಚ್ಚುಗೆ: ಜಿಲ್ಲೆ ರಜತೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ವಿಜಯವಾಣಿ ಪತ್ರಿಕೆಯಿಂದ ವಿವಿಧ ಕಡೆಗಳಲ್ಲಿ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಸೆ. 1ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ನೇತ್ರದಾನದ ಅರಿವು: ಶ್ರಮದಾನದ ಬಳಿಕ ವಿದ್ಯಾರ್ಥಿಗಳಲ್ಲಿ ನೇತ್ರದಾನದ ಅರಿವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ನೇತ್ರತಜ್ಞೆ ದಾಕ್ಷಾಯಿಣಿ ಮೂಡಿಸಿದರು. ಮೊದಲು ನೇತ್ರದಾನ ಮಾಡಲು ಅರ್ಜಿ ಹಾಕಬೇಕಿತ್ತು. ಆದರೆ ಈಗ ‘ಜೀವನ ಸಾರ್ಥಕತೆ’ ಎಂಬ ಹೆಸರಿನ ವೆಬ್‌ಸೈಟ್‌ನಲ್ಲಿ ಸುಲಭವಾಗಿ ನೇತ್ರದಾನಕ್ಕೆ ನೋಂದಣಿ ಮಾಡಬಹುದು. ಸತ್ತಾಗ ಕಣ್ಣುಗಳು ಮಣ್ಣಾಗುವ ಬದಲು ಇಬ್ಬರ ಬಾಳಿಗೆ ಬೆಳಕಾಗಲಿ. ಈ ಆಶಯದೊಂದಿಗೆ ವಿದ್ಯಾರ್ಥಿಗಳು ನೇತ್ರದಾನ ಮಾಡಿ, ನಿಮ್ಮ ಮನೆಯವರಿಂದಲೂ ನೇತ್ರದಾನಕ್ಕೆ ನೋಂದಣಿ ಮಾಡಿಸಿ ಎಂದು ಹೇಳಿದರು. ಜಿಲ್ಲೆಯಲ್ಲಿ ನೇತ್ರ ಬ್ಯಾಂಕ್ ಇಲ್ಲ. ಹೀಗಾಗಿ ಮೈಸೂರನ್ನು ಅವಲಂಬಿಸಬೇಕಾಗಿದೆ. ಅತಿ ಹೆಚ್ಚು ನೇತ್ರದಾನ ನೋಂದಣಿಯಾದರೆ ಜಿಲ್ಲೆಯಲ್ಲೇ ಐ ಬ್ಯಾಂಕ್ ಸ್ಥಾಪನೆಯಾಗಲಿದೆ ಎಂದರು.

250 ಬಿದಿರು ಸಸಿ ವಿತರಣೆ: ಗುಂಡ್ಲು ನದಿ ಪಾತ್ರದ ಜಮೀನುಗಳ ತಗ್ಗು ಪ್ರದೇಶದಲ್ಲಿ ಬೆಳಸಲು 250 ಬಿದಿರು ಸಸಿಗಳನ್ನು ವಿತರಣೆ ಮಾಡಲಾಯಿತು. ತಗ್ಗು ಪ್ರದೇಶದ ರೈತರ ಬೇಡಿಕೆ ಮೇರೆಗೆ ಈ ಮೊದಲೇ ನೋಂದಣಿ ಆರಂಭಿಸಿದ್ದು, ಅಗತ್ಯವಿದ್ದವರಿಗೆ ಸಸಿಗಳನ್ನು ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net