ಹಸಿರು ವಲಯದತ್ತ ಚಿಕ್ಕಬಳ್ಳಾಪುರ

15CBP4
Published on

ಚಿಕ್ಕಬಳ್ಳಾಪುರ : ಕರೊನಾ ಸೋಂಕಿತ ಬಹುತೇಕರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಜಿಲ್ಲೆಯು ಸದ್ಯಕ್ಕೆ ಸೋಂಕು ಮುಕ್ತಗೊಂಡು, ಹಸಿರು ವಲಯವಾಗಿ ಪರಿವರ್ತನೆಯಾಗುವುದರತ್ತ ಸಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಸೋಂಕಿನ ಕೇವಲ 2 ಸಕ್ರಿಯ ಪ್ರಕರಣಗಳಿವೆ. ಈ ಇಬ್ಬರು ಗುಣವಾಗಿ, ಯಾವುದೇ ಹೊಸ ಪ್ರಕರಣಗಳು ವರದಿಯಾಗದಿದ್ದಲ್ಲಿ ಜಿಲ್ಲೆಯಲ್ಲಿ ಕರೊನಾ ಸೋಂಕು ಶೂನ್ಯಕ್ಕೆ ಬರಲಿದೆ. ಜಿಲ್ಲೆಯಲ್ಲಿ ಇದುವರೆಗೂ 152 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಈಗಾಗಲೇ 147 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಮೂವರು ಮೃತಪಟ್ಟಿದ್ದಾರೆ.

ಗೌರಿಬಿದನೂರಿನಲ್ಲಿ ಮೊದಲ ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಕರೊನಾ ಹಾವಳಿ ಪ್ರಾರಂಭವಾಯಿತು. ಬಳಿಕ ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಬಾಗೇಪಲ್ಲಿ ಸೇರಿ ಸ್ಥಳೀಯವಾಗಿ 33 ಜನರಿಗೆ ಸೋಂಕು ದೃಢಪಟ್ಟಿತ್ತು. ಇದರ ನಡುವೆ ಮಹಾರಾಷ್ಟ್ರದಿಂದ 375 ಮಂದಿ ವಲಸಿಗರು ಸ್ವಗ್ರಾಮಗಳಿಗೆ ವಾಪಸಾಗಿದ್ದು ಇದರಲ್ಲಿ 362 ಮಂದಿಗೆ ಪರೀಕ್ಷೆ ನಡೆಸಿದಾಗ 119 ಮಂದಿ ಸೋಂಕಿತರು ಕಂಡು ಬಂದಿದ್ದರು.

ಗುಣವಾಗುವ ನಿರೀಕ್ಷೆ : ವಲಸಿಗರ ಪೈಕಿ 1 ಮತ್ತು ಸ್ಥಳೀಯವಾಗಿ 1 ಸಕ್ರಿಯ ಪ್ರಕರಣ ಇದ್ದು ಕರೊನಾ ಪೀಡಿತರಿಬ್ಬರು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಆದಷ್ಟು ಬೇಗ ಗುಣವಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಜಿಲ್ಲೆಯಲ್ಲಿ ವಿದೇಶದಿಂದ ಬಂದ 200 ಜನ ಮತ್ತು ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 1,799 ಮಂದಿ ಸೇರಿ 1,999 ಮಂದಿಯ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಈಗಾಗಲೇ 1,661 ಮಂದಿ 28 ಮತ್ತು 311 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಇವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಇನ್ನು 27 ಮಂದಿ 14 ದಿನಗಳೊಳಗಿನ ಕ್ವಾರಂಟೈನಲ್ಲಿದ್ದು, ಅವರಲ್ಲಿ ಬಹುತೇಕರು ಬಂಧಮುಕ್ತವಾಗಿದ್ದಾರೆ.

ಸೋಂಕು ಮುಕ್ತ ಪೇದೆಗೆ ಪುಷ್ಪವೃಷ್ಟಿ  :ಸೋಂಕು ಗುಣವಾಗಿ ಕರ್ತವ್ಯಕ್ಕೆ ವಾಪಸಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಕಂಟ್ರೋಲ್ ರೂಮ್ ಕೊಠಡಿಯ ಮುಖ್ಯಪೇದೆಗೆ ಪುಷ್ಪವೃಷ್ಟಿಯಿಂದ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.ಐಜಿಪಿ ಶರತ್‌ಚಂದ್ರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಪೇದೆಗೆ ಹೂ ಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಪುಷ್ಪವೃಷ್ಟಿ ಮೂಲಕ ಬರ ಮಾಡಿಕೊಂಡರು.ಪೇದೆಗೆ ಸೋಂಕು ದೃಢಪಡುತ್ತಿದ್ದಂತೆ ಪೊಲೀಸ್ ಇಲಾಖೆಯಲ್ಲಿ ಆತಂಕ ಮೂಡಿಸಿತ್ತು. ಇದರಿಂದ ರ‌್ಯಾಂಡಮ್ ಚೆಕ್‌ಅಪ್ ಮಾಡಿದಾಗ ಇತರರಿಗೆ ಸೋಂಕು ತಗುಲದಿರುವುದು ದೃಢಪಟ್ಟಿತ್ತು. ಇದರ ನಡುವೆ ಸೋಂಕಿದ್ದರೂ ಪೇದೆಯ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ. ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಇದರಿಂದ ತ್ವರಿತವಾಗಿ ಸೋಂಕು ಗುಣವಾಗಿ, ಪೇದೆ ಕರ್ತವ್ಯಕ್ಕೆ ವಾಪಸಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net