

ಸಂಡೂರು: ತೋರಣಗಲ್ ಹೋಬಳಿಯಲ್ಲಿರುವ ದರೋಜಿ ಕೆರೆ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದ್ದು, ಮೀನು ಗುತ್ತಿಗೆದಾರರು, ನೀರು ಬಳಕೆ ಮಾಡುವ ರೈತರು ಆತಂಕ್ಕೀಡಾಗಿದ್ದಾರೆ.
ಕೆರೆಯ ಸಮೀಪವಿರುವ ಬೃಹತ್ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಂದ ಕಲುಷಿತ ನೀರು ಹಾಗೂ ತ್ಯಾಜ್ಯ ಹಳ್ಳಗಳ ಮೂಲಕ ದರೋಜಿ ಕೆರೆ ಸೇರುತ್ತಿದೆ. ಕೆರೆ ನೀರಿನಲ್ಲಿರುವ ಜಲಚರ ಜೀವಿಗಳು ಸಾಯುವಂತಾಗಿದ್ದು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೈಗಾರಿಕೆಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ವಹಿಸಬೇಕೆಂದು ಸ್ಥಳೀಯರು ಒತ್ತಾಯಿದ್ದಾರೆ.
ದರೋಜಿ ಕೆರೆ ನೀರನ್ನು 10 ಗ್ರಾಮಗಳ ರೈತರು ಮೂರು ಸಾವಿರಕ್ಕೂ ಅಧಿಕ ಎಕರೆ ಕೃಷಿ ಜಮೀನಿಗೆ ಬಳಕೆ ಮಾಡಿಕೊಂಡು ಮೆಣಸಿನಕಾಯಿ, ಭತ್ತ, ಮೆಕ್ಕಜೋಳ, ಜೋಳ, ಸೂರ್ಯಕಾಂತಿ, ಕಡಲೆ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಳುವರಿ ಕಡಿಮೆಯಾಗಿ ಆರ್ಥಿಕ ಸಂಕಷ್ಟ ಎದುರಾಗುವ ಭೀತಿ ರೈತರನ್ನು ಕಾಡುತ್ತಿದೆ. ಈ ನೀರು ಕುಡಿಯುವುದರಂದ ರೋಗ, ರುಜಿನ ಬರಬಹುದು ಎಂಬ ಆತಂಕ ಜನರನ್ನು ಕಾಡುತ್ತಿದೆ.
ಈ ಕೆರೆಯ ನೀರು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸಾವಿರಾರು ಕರಡಿ, ಚಿರತೆ, ನೀರುನಾಯಿಗಳಿಗೆ ದಾಹ ತಣಿಸುತ್ತದೆ. ವನ್ಯ ಜೀವಿಗಳು ಇಂತಹ ನೀರು ಕುಡಿಯುವುದರಿಂದ ಏನಾದರೂ ಅನಾಹುತ ಸಂಭವಿಸಬಹುದೆಂಬ ಆತಂಕ ಕಾಡುತ್ತಿದೆ.