

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ನದಿಮೂಲವಿಲ್ಲದ, ಮಳೆಯನ್ನೇ ನಂಬಿಕೊಂಡಿರುವ ಬರಪೀಡಿತ ಜಿಲ್ಲೆಯೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿ ತುಸು ಹಸಿರು ವಲಯವಾಗಿಯೇ ಗುರುತಿಸಿಕೊಂಡಿದೆ. ಮಳೆಗಾಲದಲ್ಲಿ ಮಲೆನಾಡಿನಂತೆ ಕಾಣುವ ಈ ಪ್ರದೇಶ ಎಂಎಸ್‌ಜಿಪಿ ಕಸ ಘಟಕ ಕಾಲಿಟ್ಟ ಬಳಿಕ ಬೆಂಗಾಡಿನಂತಾಗುತ್ತಿದೆ.
ಸುತ್ತಲು ಬೆಟ್ಟ-ಗುಡ್ಡ ಪ್ರದೇಶವಿರುವ ಚಿಗರೇನಹಳ್ಳಿ ಸುತ್ತಮುತ್ತಲ ಗ್ರಾಮಗಳು ಹಸಿರು ಹೊದ್ದು ಮಲಗಿವೆ. ಈಗ ಕಸ ಸಂಸ್ಕರಣಾ ಘಟಕದ ಲಿಚೆಟ್ (ಕೊಳಚೆ) ನೀರು ಗ್ರಾಮಗಳಲ್ಲಿನ ಹಳ್ಳ-ಕೊಳ್ಳಗಳಲ್ಲಿ ಶೇಖರಣೆಯಾಗುತ್ತಿದ್ದು, ಸಸ್ಯ ಸಂಪತ್ತಿಗೂ ಕುತ್ತು ತಂದಿದೆ. ಮರಗಿಡಗಳು ಬೆಂಕಿ ರೋಗಕ್ಕೆ ತುತ್ತಾದಂತೆ ಸುಟ್ಟ ರೀತಿಯಲ್ಲಿ ಕಂಡುಬರುತ್ತಿವೆ. ಮರಗಳಲ್ಲಿ ಎಲೆಗಳು ಉದುರಿ ಬೋಳಾಗಿವೆ. ಮಲೆನಾಡಿನಂತಿದ್ದ ಈ ಪ್ರದೇಶ ಕಾಲಾನಂತರದಲ್ಲಿ ಬೆಂಗಾಡಾಗಿ ಬದಲಾಗುತ್ತಿದೆ. ನಮ್ಮ ತಂದೆ, ತಾತನ ಕಾಲದಲ್ಲಿದ್ದ ಹಸಿರು ಮಾಯವಾಗುತ್ತಿದೆ. ಮುಂದಿನ ಪೀಳಿಗೆ ಇಲ್ಲಿ ಜೀವನ ನಡೆಸಲೂ ಸಾಧ್ಯವಾಗದೆ ಗುಳೆ ಹೋಗುವ ದಿನ ದೂರವಿಲ್ಲ ಎಂಬುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ರಾಗಿ ಸಲಿಗೂ ಕಂಟಕ: ಈ ಭಾಗದಲ್ಲಿ ರಾಗಿ ಪ್ರಧಾನ ಬೆಳೆಯಾಗಿದ್ದು, ಜೋಳವನ್ನೂ ಬೆಳೆಯಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಲಿಚೆೆಟ್ ನೀರು ಅಂತರ್ಜಲ ಸೇರಿರುವುದರಿಂದ ಬೊರ್‌ವೆಲ್‌ಗಳಲ್ಲಿ ವಿಷಯುಕ್ತ ನೀರು ಬರುತ್ತಿದೆ. ಲಿಚೆೆಟ್ ಹರಿಯುತ್ತಿರುವ ಹಳ್ಳಕೊಳ್ಳಗಳ ಸಮೀಪದ ಜಮೀನಿನಲ್ಲಿನ ರಾಗಿ ಬೆಳೆ ಹಾಳಾಗುತ್ತಿದೆ. ಮೂರ‌್ನಾಲ್ಕು ವರ್ಷದಿಂದ ಇದರ ಪರಿಣಾಮ ಹೆಚ್ಚಾಗುತ್ತಿದ್ದು, ರಾಗಿ ಬೆಳೆಯಲು ಹಾಕಿದ ಅಸಲೂ ಬರುತ್ತಿಲ್ಲ ಎಂಬುದು ರೈತರ ಅಳಲಾಗಿದೆ. ಇದರೊಂದಿಗೆ ಜೋಳದ ಬೆಳೆಗೂ ಹೊಡೆತ ಬಿದ್ದಿದ್ದು, ದಿನೇದಿನೆ ಇಲ್ಲಿನ ರೈತರು ಕೃಷಿ ಚಟುವಟಿಕೆಯಿಂದ ದೂರ ಉಳಿಯಲು ಆರಂಭಿಸಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಈ ಘಟಕದ ಸುತ್ತಮುತ್ತಲ ಐದಾರು ಕಿ.ಮೀ ದೂರದ ಜಮೀನುಗಳು ಬಂಜರಾಗಲಿವೆ ಎಂದು ರೈತರು ಭವಿಷ್ಯ ನುಡಿಯುತ್ತಿದ್ದಾರೆ.
ಹುಲ್ಲು ಮೇಯಲ್ಲ, ನೀರು ಕುಡಿಯಲ್ಲ: ಹೊಲಗದ್ದೆಗಳ ಸಮೀಪ ಜಾನುವಾರುಗಳನ್ನು ಮೇಯಿಸಲು ಹೋದರೆ ಮೇವನ್ನು ಮೇಯುತ್ತಿಲ್ಲ. ಅಲ್ಲಲ್ಲಿ ಹುಲ್ಲು ತಿಂದರೂ ನಾನಾ ರೋಗಗಳಿಗೆ ಜಾನುವಾರುಗಳು ತುತ್ತಾಗುತ್ತಿವೆ. ಜಾನುವಾರುಗಳೇ ಮೇಯಲು ಹಿಂದೇಟು ಹಾಕುತ್ತಿವೆ ಎಂದರೆ ಈ ಪ್ರದೇಶದಲ್ಲಿನ ಭೂಮಿ, ಇಲ್ಲಿ ಬೆಳೆಯುತ್ತಿರುವ ಸಲು ಯಾವ ಪರಿಸ್ಥಿತಿಗೆ ತಿರುಗಿದೆ ಎಂಬುದು ತಿಳಿಯುತ್ತದೆ ಎಂದು ಜನರು ಅಲವತ್ತುಕೊಂಡಿದ್ದಾರೆ. ಇಲ್ಲಿನ ಬಹಳಷ್ಟು ಕೆರೆ-ಕುಂಟೆಗಳಿಗೆ ಕಸದ ಲಿಚೆಟ್ ನೀರು ಬೆರೆಯುತ್ತಿರುವುದರಿಂದ ಜಾನುವಾರುಗಳೂ ನೀರು ಕುಡಿಯಲ್ಲ. ದುರ್ವಾಸನೆ ಬೀರುವ ನೀರನ್ನು ಕಂಡರೆ ಜಾನುವಾರುಗಳೇ ಮುಖ ತಿರುಗಿಸುತ್ತವೆ. ಇಂಥ ಪರಿಸ್ಥಿತಿಯಲ್ಲಿ ಇಲ್ಲಿನ ಕೊಳವೆಬಾವಿಗಳ ನೀರನ್ನು ಜನ ಸೇವಿಸುವುದಾದರೂ ಹೇಗೆ ಎಂಬುದು ರೈತರ ಪ್ರಶ್ನೆಯಾಗಿದೆ.
ತೋಟಗಾರಿಕೆ ಬೆಳೆಯೂ ನಾಸ್ತಿ: ಈ ಭಾಗದಲ್ಲಿ ಪ್ರಮುಖವಾಗಿ ತೋಟಗಾರಿಕೆ ಬೆಳೆಯಾಗಿ ದ್ರಾಕ್ಷಿ, ಅಡಕೆ ಹಾಗೂ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಸಲು ನಿರೀಕ್ಷಿತ ಮಟ್ಟಕ್ಕೆ ಕೈಗೆ ಸಿಗುತ್ತಿಲ್ಲ. ದ್ರಾಕ್ಷಿ ಬೆಳೆಯಲ್ಲಿ ಕಾಯಿ ಕಚ್ಚುತ್ತಿಲ್ಲ, ಅಡಕೆ ಮರಗಳಲ್ಲಿ ಸಲು ಮಾಯವಾಗುತ್ತಿದೆ. ತರಕಾರಿ ಬೆಳೆಗಳ ಬಗ್ಗೆ ಹೇಳುವಂತೆಯೇ ಇಲ್ಲ. ಸ್ಲೋ ಪಾಯಿಸನ್ ರೀತಿ ಅಂತರ್ಜಲಕ್ಕೆ ವಿಷವುಣಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಭೂಮಿಯಲ್ಲಿ ಬೆಳೆದ ಬೆಳೆ ಸೇವಿಸಿದರೂ ನಾನಾ ರೋಗಕ್ಕೆ ಬಲಿಯಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂಬುದು ಈ ಭಾಗದಲ್ಲಿ ಕಸ ಘಟಕ ತೆರವುಗೊಳಿಸುವಂತೆ ಹೋರಾಡುತ್ತಿರುವ ಹಳ್ಳಿಗರ ನೋವು.
ಇಲ್ಲಿನ ಪ್ರದೇಶದ ಈಗಾಗಲೇ ಮುಂದಿನ 20 ವರ್ಷಕ್ಕಾಗುವಷ್ಟು ಹಾಳಾಗಿದೆ, ಇಲ್ಲಿನ ಕೃಷಿ ಚಟುವಟಿಕೆಗಳಿಗೂ ಹೊಡೆತ ಬಿದ್ದಿದೆ, ಜಾನುವಾರುಗಳಿಗೆ ಇಲ್ಲಿನ ಕೆರೆ-ಕುಂಟೆಗಳಲ್ಲಿ ನೀರು ಕುಡಿಯಲೂ ಯೋಗ್ಯವಾಗಿಲ್ಲ. ಘಟಕ ಮುಚ್ಚಿ ಕಸ ವಿಲೇವಾರಿ ಮಾಡದ ಹೊರತು ಪರ್ಯಾಯ ಮಾರ್ಗವಿಲ್ಲ. ಜಗದೀಶ್, ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ವಕೀಲ