ಹಸಿರು ಕ್ರಾಂತಿ ಹರಿಕಾರ ಬಾಬೂಜಿ: ಜಿಲ್ಲಾಧಿಕಾರಿ ಲತಾ ಬಣ್ಣನೆ

05CBP03
Published on

ಚಿಕ್ಕಬಳ್ಳಾಪುರ : ಶೋಷಿತರ ಹಕ್ಕಿಗಾಗಿ ಹೋರಾಟದ ಜತೆಗೆ ರೈತರಿಗೆ ಅಭಿವೃದ್ಧಿಗೆ ಪಣತೊಟ್ಟಿದ್ದವರು ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್‌ರಾಮ್, ಇಂತಹ ಮಹನೀಯರ ಜೀವನ, ಆದರ್ಶಗಳು ಯುವ ಪೀಳಿಗೆಗೆ ಮಾದರಿಯಾಗಿವೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ್‌ರಾಮ್ ಅವರ 114ನೇ ಜನ್ಮ ದಿನದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸ ಮಾತನಾಡಿದರು.

ಉಪಪ್ರಧಾನಿಯಾಗಿದ್ದಾಗ ಬಾಬೂಜಿ ಕೈಗೊಂಡ ಜನಪ್ರಿಯ ಹಸಿರು ಕ್ರಾಂತಿ ಯೋಜನೆಗಳು ರೈತರಿಗೆ ಸಹಾಯವಾಗಿವೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರು, ಶೋಷಿತರು ಅಭಿವೃದ್ಧಿಗೆ ನೆರವಾದರು ಎಂದರು.

ಶೋಷಿತರ ಹಕ್ಕಿಗಾಗಿ ಹೋರಾಡಿದ ಜಗಜೀವನ ರಾಮ್, ಕೃಷಿ ಸಚಿವರಾಗಿದ್ದಾಗ ದೇಶದ ಕೃಷಿ ಕ್ಷೇತ್ರವನ್ನು ಬಲಪಡಿಸಿದರು. ದೇಶದ ಪ್ರತಿಯೊಬ್ಬರಿಗೂ ಆಹಾರ ಧಾನ್ಯಗಳು ತಲುಪುವ ನಿಟ್ಟಿನಲ್ಲಿ ವಿನೂತನ ಕಾಯ್ದೆಗಳನ್ನು ಜಾರಿಗೊಳಿಸಿದರು. ರಕ್ಷಣಾ ಸಚಿವರಾಗಿ ಸಲ್ಲಿಸದ ಸೇವೆ ಅವಿಸ್ಮರಣೀಯವಾಗಿದ್ದು, ಅವರ ಜೀವನ ಚರಿತ್ರೆ ಯುವ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು ಎಂದು ಆಶಿಸಿದರು.

ಶೋಷಿತ ಸಮುದಾಯಗಳ ಅಭಿವೃದ್ಧಿ ಜತೆಗೆ ದೇಶದ ಪ್ರಗತಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಪ್ರತಿಪಾದಿಸಿದವರು ಜಗಜೀವನ್‌ರಾಮ್, ಹಳ್ಳಿಯ ಜನರನ್ನು ಕೇಂದ್ರವಾಗಿರಿಸಿಕೊಂಡು ಅವರ ವಿದ್ಯಾಭ್ಯಾಸಕ್ಕಾಗಿ ಕೈಗೊಂಡ ಕ್ರಮಗಳು ಬಹುಮುಖ್ಯವಾಗಿವೆ, ಕೃಷಿ ಚಟುವಟಿಕೆಗೆ ನೀಡಿದ್ದರಿಂದ ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯುತ್ತಾರೆ ಎಂದು ಭಾಷಣಕಾರರಾದ ನಾರಾಯಣಸ್ವಾಮಿ ತಿಳಿಸಿದರು.

ಅಂಬೇಡ್ಕರ್ ಕಲಾತಂಡ ಕ್ರಾಂತಿಗೀತೆಗಳನ್ನು ಪ್ರಸ್ತುತ ಪಡಿಸಿತು. ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಪಂ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಪಂ ಕೃಷಿ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ. ರಾಜಾಕಾಂತ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ತೇಜ್ ಆನಂದರೆಡ್ಡಿ, ಸಹಾಯಕ ನಿರ್ದೇಶಕ ಶೇಷಾದ್ರಿ, ಸಂಘಟನೆಗಳ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net