

ಹೂವಿನಹಡಗಲಿ: ಮಧ್ಯ ಹಾಗೂ ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ತಾಲೂಕುಗಳ ಕೃಷಿ ಹಾಗೂ ಕುಡಿಯುವ ನೀರಿನ ಆಸರೆಯಾಗಿರುವ ತುಂಗಭದ್ರಾ ನದಿ ದಿನೇ ದಿನೆ ಕಲುಷಿತಗೊಳ್ಳುತ್ತಿದೆ.
ಮಳೆಗಾಲದಲ್ಲಿ ತುಂಬಿ ಹರಿದ ತುಂಗಭದ್ರಾ, ಬೇಸಿಗೆ ಸಮೀಪಿಸುತ್ತಿದಂತೆ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದೆ. ತಾಲೂಕಿನ ಕೊಂಬಳಿ ಮದಲಗಟ್ಟಿ, ಕಂದಗಲ್ಲು, ಪುರ, ಸೋವೆನಹಳ್ಳಿ ಹಾಗೂ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ, ಗಂಗಾಪುರ, ಬೆಣ್ಣಿಹಳ್ಳಿ, ಹೆಸರೂರು, ಕಕ್ಕೂರು ಸೇರಿದಂತೆ ಇತರ ಭಾಗದಲ್ಲಿ ನೀರು ಹಸಿರಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ತಾಲೂಕಿನ ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರನ್ನು ತುಂಗಭದ್ರಾ ನದಿಯಿಂದಲೇ ಒದಗಿಸಲಾಗುತ್ತಿದೆ. ನದಿಯ ನೀರು ಹಸಿರು ಬಣ್ಣ ತಾಳಿರುವುದಿಂದ ಗ್ರಾಮೀಣ ಭಾಗದ ಜನರು ನದಿ ನೀರು ಕುಡಿಯಲು ಭಯಪಡುತ್ತಿದ್ದಾರೆ. ರೈತರು ಕೂಡ ಕೃಷಿ ಜಮೀನಿಗೆ ಹಸಿರು ಬಣ್ಣದ ನೀರು ಹರಿಸಲು ಹಿಂಜರಿಯುತ್ತಿದ್ದಾರೆ.
ಬೆಳೆಗಳಿಗೆ ಸಮರ್ಪಕವಾಗಿ ನೀರು ಹರಿಸದಿದ್ದರೆ ಬೆಳೆ ನಾಶವಾಗುವ ಭಯ ರೈತರಲ್ಲಿ ಆವರಿಸಿದೆ. ಕಳೆದೆರಡು ದಿನಗಳ ಹಿಂದೆ ಕೊರ್ಲಹಳ್ಳಿ ಬಳಿ ತುಂಗಭದ್ರಾ ಸೇತುವೆ ಕೆಳಭಾಗ ಹಾಗೂ ನದಿಯ ದಡದಲ್ಲಿ ಮಾತ್ರ ನೀರು ಹಸಿರಾಗಿತ್ತು. ಇದೀಗ ನದಿ ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದೆ. ನದಿ ಪಾತ್ರದಲ್ಲಿರುವ ಕೆಲವು ಕಾರ್ಖಾನೆಯವರು ತ್ಯಾಜ್ಯ ನೀರನ್ನು ನದಿಗೆ ಹರಿಸುತ್ತಿರುವುದರಿಂದ ನದಿಯಲ್ಲಿನ ನೀರು ಹಸಿರು ಬಣ್ಣಕ್ಕೆ ತಿರುಗಿದೆ ಎಂಬುದು ನದಿಪಾತ್ರದ ಗ್ರಾಮಸ್ಥರ ಆರೋಪವಾಗಿದೆ.