

- ಎ.ಆರ್. ವೆಂಕಟೇಶ್ ಹಾಸನ
ಹಾಸನ: ಪ್ರತಿವರ್ಷ ಮೆರವಣಿಗೆ ಸಂದರ್ಭದಲ್ಲಿ ಮಾತ್ರ ಸದ್ದು ಮಾಡುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಾಂಚಜನ್ಯ ಗಣಪತಿ ಈ ಬಾರಿ ಪ್ರತಿಷ್ಠಾಪನೆ ಆದ ದಿನದಿಂದಲೇ ದೊಡ್ಡ ಸುದ್ದಿ ಆಗುತ್ತಿದೆ. ಇದಕ್ಕೆ ಕಾರಣ ಈ ಬಾರಿ ಸರ್ಕಾರ ಆಸ್ತಿ ಆಗಿರುವ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಪಾಂಚಜನ್ಯ ಗಣಪತಿಯನ್ನು ಪ್ರತಿಷ್ಠಾಪಿಸಿರುವುದು.
ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ಪಾಂಚಜನ್ಯದಲ್ಲಿ ಪ್ರತಿವರ್ಷ ಗಣಪತಿ ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ಪೂಜೆ ನರವೇರಿಸಿ ಐದನೇ ದಿನ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ಮತ್ತು ಶೋಭಾಯಾತ್ರೆಯೊಂದಿಗೆ ವಿಸರ್ಜನೆ ಮಾಡಲಾಗುತ್ತಿತ್ತು. ಹಿಂದೆ ಈ ಮೆರವಣಿಗೆಯ ಸಾಗುವ ಸಂದರ್ಭದಲ್ಲಿ ಕಿಡಿಗೇಡಿಗಳಿಂದ ಮೆರವಣಿಗೆ ಮೇಲೆ ಕಲ್ಲು ತೂರಾಟ, ನಂತರ ಸೃಷ್ಟಿಯಾಗುತ್ತಿದ್ದ ಎರಡು ಕೋಮುಗಳ ನಡುವಿನ ಸಂಘರ್ಷದ ಕಾರಣಕ್ಕಾಗಿ ಪಾಂಚಜನ್ಯ ಗಣಪತಿ ಸುದ್ದಿ ಆಗುತ್ತಿತ್ತು.
ಇತ್ತೀಚಿನ ವರ್ಷಗಳಲ್ಲಿ ಕೋಮು ಸಂಘರ್ಷ ಇಲ್ಲದಿದ್ದರೂ ಪಾಂಚಜನ್ಯ ಗಣಪತಿ ಮೆರವಣಿಗೆ ಎಂದರೆ ಪೊಲೀಸ್ ಇಲಾಖೆ ವಿಶೇಷ ಕಟ್ಟೆಚ್ಚರ ವಹಿಸುತ್ತದೆ. ಈ ಬಾರಿ ಸಹ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಮೆರಣಿಗೆಯನ್ನು ಡ್ರೋಣ್ ಕ್ಯಾಮರಾಗಳ ಮೂಲಕ ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಪಾಂಚಜನ್ಯ ಗಣಪತಿಯ ಪಂಚ ಕಾರ್ಯಕ್ರಮಗಳು:
ಈ ಬಾರಿ ಪಾಂಚಜನ್ಯ ಗಣಪತಿಯನ್ನು ಪಾಂಚಜನ್ಯ ಹಿಂದೂ ಗಣಪತಿ ಸಮಿತಿ ವತಿಯಿಂದ ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಐದು ದಿನಗಳ ಕಾಲ ವಿವಿಧ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆ.31 ರಂದು ಗಣೇಶ ಚತುರ್ಥಿ ದಿನ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಕಲಾಕ್ಷೇತ್ರದ ಆವಣದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಪೌರ ಕಾರ್ಮಿಕರ ಪಾದ ತೊಳೆದು ಗೌರವಾರ್ಪಣೆ ಮಾಡಲಾಗಿದೆ. ಸಂಜೆ ವೇದ ಭಾರತಿ ತಂಡದಿಂದ ‘ಅಗ್ನಿಹೋತ್ರ’ ನಡೆಸಲಾಗಿದೆ.
ಸೆ.1 ರಂದು ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾಸ್ಪರ್ಧೆ, ಕವನ ರಚನಾ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ಸಾರ್ವಜನಿಕರಿಗೆ ಭಜನಾ ಸ್ಪರ್ಧೆ ಮತ್ತು ಸಂಜೆ ಹರಿಕಥಾ ವಿದುಷಿ ನಾಗಲಕ್ಷ್ಮೀ ಶಿವರಾಂ ಅವರಿದ ಹರಿಕಥೆ ಕಾರ್ಯಕ್ರಮ ನಡೆದಿದೆ. ಸೆ.2 ಶಾಲಾ ಮಕ್ಕಳಿಗೆ ಸಂಗೀತ ಸ್ಪರ್ಧೆ, ಚರ್ಚಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ ಆಯೋಜನೆಗೊಂಡಿದೆ. ಮಹಿಳೆಯರಿಗೆ ಗಂಗೋಲಿ ಸ್ಪರ್ಧೆ ಸಹ ನಡೆಯಲಿದೆ. ಸಂಜೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರಿಂದ ‘ಸಾವರ್ಕರ್- ಒಂದು ಧ್ಯೇಯ ಜೀವನ’ ಎಂಬ ವಿಷಯ ಕುರಿತು ಉಪನ್ಯಾಸ ಇದೆ.
ಸೆ.3 ರಂದು ಸಂಜೆ 4 ಗಂಟೆಗೆ ಹಿಂದೂ ಧರ್ಮ ಜಾಗೃತಿಗಾಗಿ ಬೃಹತ್ ಬೈಕ್ ರ‌್ಯಾಲಿ ಮತ್ತು ಸಂಜೆ ಸನಾತನ ನಾಟ್ಯಾಲಯ ಕಲಾವಿದರಿಂದ ‘ಪುಣ್ಯಭೂಮಿ ಭಾರತ’ ಎಂಬ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ. ಸೆ.4 ರಂದು ಬೆಳಗ್ಗೆ ಸಹಸ್ರ ಮೋದಕ ಗಣಹೋಮ ಮತ್ತು ಪೂರ್ಣಾಹುತಿ ಹಾಗೂ ಸಂಜೆ ವಿವಿಧ ಸಮಾಜದ ಅರ್ಚಕರಿಂದ ಗಣಪತಿಗೆ ಸಾಮರಸ್ಯ ಪೂಜೆ ನಡೆಯಲಿದೆ. ಸೆ.5 ರಂದು ಮಧ್ಯಾಹ್ನ ವಿವಿಧ ಮಠಾಧೀಶರ ನೇತೃತ್ವದಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಗಣಪತಿ ವಿಸರ್ಜನಾ ಮರವಣಿಗೆ ಮತ್ತು ಶೋಭಾಯಾತ್ರೆ ನಡೆಯಲಿದೆ.
ವಿವಾದ ಏಕೆ?
ರಂಗ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭೆ ಮತ್ತು ಸಮಾರಂಭಗಳಿಗೆ ಸೀಮಿತವಾಗಿರುವ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತಕ್ಕೆ ಒಳಪಡುವ ಹಾಸನಾಂಬ ಕಲಾಕ್ಷೇತ್ರದಲ್ಲಿ ಆರ್‌ಎಸ್‌ಎಸ್‌ನ ‘ಪಾಂಚಜನ್ಯ ಹಿಂದೂ ಗಣಪತಿ’ ಪ್ರತಿಷ್ಠಾಪಿಸಲು ಮತ್ತು ಅಲ್ಲಿಯೇ ಯಜ್ಞಕುಂಡ ಹಾಕಿ ಹೋಮ-ಹವನಗಳನ್ನು ನಡೆಸಲು ಅವಕಾಶ ನೀಡಿರುವ ಸರಿಯಲ್ಲ. ಇದು ಸಂವಿಧಾನದ ಮೂಲಭೂತ ತತ್ವಗಳಲ್ಲೊಂದಾದ ಮತಧರ್ಮ ನಿರಪೇಕ್ಷ ತತ್ವದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬುದು ದಲಿತ ಮತ್ತು ಜನಪರ ಸಂಘಟನೆಗಳ ಆಕ್ಷೇಪವಾಗಿದೆ. ಹಾಸನಾಂಬ ಕಲಾಕ್ಷೇತ್ರದಲ್ಲಿ ‘ಹಿಂದೂ ಗಣಪತಿ’ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಿರುವ ಇಲಾಖೆಯ ಅಧಿಕಾರಿಗಳ ವಿರುದ್ಧ ಹಾಗೂ ಸರ್ಕಾರದ ಜಾಗದಲ್ಲಿ ನಿಯಮ ಬಾಹಿರವಾಗಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ನಿರ್ದಿಷ್ಟ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿರುವ ಆರ್‌ಎಸ್‌ಎಸ್‌ನ ಪಾಂಚಜನ್ಯ ಹಿಂದೂ ಗಣಪತಿ ಸಮಿತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಹ ಆಗ್ರಹಿಸಲಾಗಿದೆ.
ಧಾರ್ಮಿಕ ಕಾರ್ಯಕ್ರಮಗಳು ಹೊಸದಲ್ಲ: ಹಾಸನಾಂಬ ಕಲಾಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದು ಹೊಸದೇನಲ್ಲ. ಹಿಂದಿನಿಂದಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಕಲಾಕ್ಷೇತ್ರವನ್ನು ಬಾಡಿಗೆಗೆ ನೀಡಲಾಗಿದೆ. ಎಲ್ಲಾ ಧರ್ಮದವರಿಗೂ ಬಾಡಿಗೆಗೆ ಕೊಡಲಾಗಿದೆ. ಹಿಂದೆ ಚನ್ನರಾಯಪಟ್ಟಣದ ಮಠವೊಂದಕ್ಕೆ ಧಾರ್ಮಿಕ ಕಾರ್ಯಕ್ರಮ ನಡೆಸಲು ಮತ್ತು ಮುಸ್ಲಿಂ ಸಂಘಟನೆಯೊಂದಕ್ಕೆ ಕುರಾನ್ ಪ್ರವಚನಕ್ಕೂ ಕಲಾಕ್ಷೇತ್ರವನ್ನು ಬಾಡಿಗೆ ನೀಡಲಾಗಿದೆ ಎಂಬುದು ಹಾಸನಾಂಬ ಕಲಾಕ್ಷೇತ್ರ ನಿರ್ವಹಣಾ ಸಮಿತಿ ಸದಸ್ಯ ಕಾರ್ಯದರ್ಶಿ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಂ.ಡಿ.ಸುದರ್ಶನ ಅವರ ಸಮಜಾಯಿಷಿ ಆಗಿದೆ. ಹಾಸನಾಂಬ ಕಲಾಕ್ಷೇತ್ರ ನಿರ್ವಹಣಾ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನಗರಸಭೆ ಆಯುಕ್ತ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್, ಅಲ್ಲದೆ ಇಬ್ಬರು ಸಾರ್ವಜನಿಕ ಪ್ರತಿನಿಧಿಗಳ ಸದಸ್ಯರಾಗಿರುತ್ತಾರೆ.
ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ನಮ್ಮ ವಿರೋಧ ಇಲ್ಲ: ‘‘ಹಾಸನಾಂಬ ಕಲಾಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಲು ನಮ್ಮ ವಿರೋಧ ಇಲ್ಲ. ಮುಸ್ಲಿಂ ಸಂಘಟನೆ ಕುರಾನ್ ಪ್ರವಚನ ನಡೆಸಿದಂತೆ ಆರ್‌ಎಸ್‌ಎಸ್‌ನವರು ಬೇಕಾದರೆ ಭಗದ್ಗೀತೆ ಪ್ರವಚನ ಏರ್ಪಡಿಸಲಿ. ಆದರೆ ಸರ್ಕಾರದ ಆಸ್ತಿಯಲ್ಲಿ ಹೋಮ ಕುಂಡ ನಿರ್ಮಿಸಿ, ಯಗ್ನ ನಡೆಸುವುದಕ್ಕೆ ನಮ್ಮ ತಕರಾರು ಇದೆ. ಸರ್ಕಾರಿ ಕಚೇರಿ ಮತ್ತು ಕಟ್ಟಡಗಳನ್ನು ಯಾವುದೇ ನಿರ್ದಿಷ್ಟ ಧಾರ್ಮಿಕ ಆಚರಣೆಗೆ ಬಳಸುವುದು ಸಂವಿಧಾನದ ಮೂಲತತ್ವದ ಉಲ್ಲಂಘನೆ ಆಗುತ್ತದೆ.’’ - ಧರ್ಮೇಶ್, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡ. ನಿಯಮಾನುಸಾರವೇ ಬಾಡಿಗೆ ನೀಡಲಾಗಿದೆ: ‘‘ನಿಯಮಗಳ ಅನುಸಾರವೇ ಆರ್‌ಎಸ್‌ಎಸ್‌ನವರಿಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಪಾಂಚಜನ್ಯ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ. ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಡಿಮೆ ಬಾಡಿಗೆ ವಿಧಿಸಲಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಬಾಡಿಗೆ ಹೆಚ್ಚು. ಪಾಂಚಜನ್ಯ ಗಣಪತಿ ಪ್ರತಿಷ್ಠಾಪನೆ ಮತ್ತು ಐದು ದಿನಗಳ ಕಾರ್ಯಕ್ರಮಗಳಿಗೆ ಒಟ್ಟು 1.40 ಲಕ್ಷ ರೂ. ಬಾಡಿಗೆ ಕಟ್ಟಿಸಿಕೊಳ್ಳಲಾಗಿದೆ. ಕಲಾಕ್ಷೇತ್ರದ ಮೂಲ ವಿನ್ಯಾಸಕ್ಕೆ ಧಕ್ಕೆ ಆಗದಂತೆ, ಯಥಾಸ್ಥಿತಿಯಲ್ಲಿ ತೆರವುಗೊಳಿಸಿಕೊಡಬೇಕು ಎಂಬುದು ಸೇರಿದಂತೆ ಒಟ್ಟು 24 ಷರತ್ತುಗಳನ್ನು ವಿಧಿಸಿ ಬಾಡಿಗೆ ನೀಡಲಾಗುತ್ತದೆ. ಆದ್ದರಿಂದ ನಿಯಮಗಳ ಉಲ್ಲಂಘನೆ ಆಗಿಲ್ಲ.’’ - ಡಾ. ಎಂ.ಡಿ.ಸುದರ್ಶನ್, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.