ಚಾಮರಾಜನಗರ : ಶ್ರೀಮಲೆ ಮಹದೇಶ್ವರ ಬೆಟ್ಟದಲ್ಲಿ ತಿಂಗಳ ಅಮಾವಾಸ್ಯೆ ಕಾರ್ಯಕ್ರಮಗಳಲ್ಲಿ ಕರೋಕೆ ಹಾವಳಿ ತಪ್ಪಿಸಿ, ವೃತ್ತಿ ಹಾಗೂ ಹವ್ಯಾಸಿ ಕಲಾವಿದರಿಗೆ ಅವಕಾಶ ನೀಡಬೇಕು ಎಂದು ಜನಪದ ಕಲಾವಿದರು ಬುಧವಾರ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಿದರು. ಜಗತ್ತಿಗೆ ಎರಡನೇ ಮಹಾಕಾವ್ಯವೆಂದು ಪ್ರಸಿದ್ಧಿ ಹೊಂದಿದ ಮಲೆ ಮಹದೇಶ್ವರ ಕಾವ್ಯವನ್ನು ಗುಡ್ಡರು, ಕಂಸಾಳೆ ಕಲಾವಿದರು, ನೀಲಗಾರರು ಎಂಬ ವೃತ್ತಿ ಗಾಯಕರು ಹಾಡುತ್ತಾರೆ. ಇವರೆಲ್ಲ ಕಲೆಯನ್ನೇ ಅವಲಂಬಿಸಿಯೇ ಜೀವನ ನಡೆಸುತ್ತಿದ್ದಾರೆ. ಈ ಹಾಡುಗಾರರ ಪರಿಶ್ರಮದಿಂದ ಈ ದೈವ ಕ್ಷೇತ್ರಗಳು ಹೆಚ್ಚು ಪ್ರಸಿದ್ಧಿಯನ್ನು ಹೊಂದಿ ಆರ್ಥಿಕ ಅಭಿವೃದ್ಧಿ ಪಥದತ್ತ ಸಾಗಿದೆ ಅಲ್ಲದೆ ಶ್ರೀ ಮಲೆ ಮಹದೇಶ್ವರನ ಪವಾಡಗಳನ್ನು ರಾಜ್ಯದ ಮೂಲೆ ಮೂಲೆಗಳಿಗೂ ತಲುಪಿಸಲು ಜನಪದ ಕಲಾವಿದರೇ ಕಾರಣರಾಗಿದ್ದಾರೆ ಎಂದರು.
ಇತ್ತೀಚಿಗೆ ಕರೋಕೆ ಹಾಡುವ ಕಲಾವಿದರಿಗೆ ಹೆಚ್ಚು ಹೆಚ್ಚು ಅವಕಾಶ ನೀಡುತ್ತಿದ್ದು, ಇದರಿಂದಾಗಿ ನಿಜವಾದ ವೃತ್ತಿ ಜಾನಪದ ಕಲಾವಿದರಿಗೆ ಮಾಡುವ ಅವಮಾನವಾಗಿದೆ. ಪ್ರತಿ ಅಮಾವಾಸ್ಯೆ ಮತ್ತು ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ವೃತ್ತಿ ಹಾಗೂ ಹವ್ಯಾಸಿ ಜಾನಪದ ಕಲಾವಿದರಿಗೆ ಪ್ರತ್ಯೇಕ ಅವಕಾಶ ನೀಡಿ ಮಲೆ ಮಹದೇಶ್ವರ ಸ್ವಾಮಿಯ ಸಮಗ್ರ ಕಾವ್ಯ ಕಲೆಯ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂಬ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷರು ಸಿ.ಎಂ.ನರಸಿಂಹಮೂರ್ತಿ, ಜಾನಪದಶ್ರೀ ಪ್ರಶಸ್ತಿ ಪುರಸ್ಕೃತ ದೊಡ್ಡ ಗವಿ ಬಸಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿಂಗಶೆಟ್ಟಿ, ತಂಬೂರಿ ಕಲಾವಿದ ಎಂ.ಕೈಲಾಸ ಮೂರ್ತಿ, ಗೌರಿಶಂಕರ, ಆಲ್ಕೆರೆ ಶಿವಕುಮಾರ್, ಶಿವಕುಮಾರ್ ಕುಮಾರನಪುರ, ಮಹೇಶ್ ನಂಜರಾಜಪುರ ಹಾಜರಿದ್ದರು.