

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣ, ದಟ್ಟವಾದ ಮಂಜು, ಜಡಿ ಮಳೆಯಿಂದಾಗಿ ನಿರ್ಮಾಣವಾಗಿರುವ ಹವಾಮಾನ ವೈಪರೀತ್ಯಕ್ಕೆ ಜನರು ಹೈರಾಣರಾಗಿದ್ದಾರೆ.
‘ಮಾಂಡೌಸ್’ ಚಂಡಮಾರುತದ ಅಬ್ಬರ ತಣ್ಣಗಾಗಿದೆ ಎಂದು ಕೊಳ್ಳುವಷ್ಟರಲ್ಲಿ ನೈರುತ್ಯ ಬಂಗಾಳಕೊಲ್ಲಿಯಲ್ಲಿ ಮತ್ತೆ ಪ್ರಬಲ ವಾಯುಭಾರ ಕುಸಿತ ಕಂಡು ಬಂದಿದೆ. ಇದರಿಂದ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಉಷ್ಣಾಂಶ ಕುಸಿದಿದೆ. ಇದರ ನಡುವೆ ಜಿಲ್ಲೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಜಡಿ ಮಳೆ ಸುರಿದಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು ಹಾಗೂ ರಾಮನಗರ ಸೇರಿದಂತೆ ನಾಲ್ಕು ದಿನ ಮಳೆ ಸುರಿಯುವುದರ ಬಗ್ಗೆ ಹವಾಮಾನ ಇಲಾಖೆಯು ತಿಳಿಸಿದೆ. ಇದರಿಂದ ಚಳಿಚಳಿಗೆ ಮೈ ಮುದುರಬೇಕಾದ ಪರಿಸ್ಥಿತಿಯು ಮುಂದುವರೆಯಲಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಗರಿಷ್ಠ 21 ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದೆ. ಭಾನುವಾರ ವಿವಿಧ ಭಾಗಗಳಲ್ಲಿ ಸೋನೆ ಮಳೆ ಬಿದ್ದಿದೆ. ಇನ್ನು ಸೋಮವಾರ ಮಳೆ ಬೀಳುವ ಸಾಧ್ಯತೆ ಶೇ.30ರಷ್ಟು ಇದೆ. ಮಂಗಳವಾರ ಮೋಡ ಮುಸುಕಿದ ವಾತಾವರಣ ಇರಲಿದೆ ಎಂಬುದು ತಿಳಿದು ಬಂದಿದೆ.
ಮಂಜು, ಮಳೆಗೆ ತತ್ತರ: ಮುಂಜಾವ ಮತ್ತು ರಾತ್ರಿ ವೇಳೆ ದಟ್ಟವಾದ ಮಂಜು, ಬೆಳಗ್ಗೆಯಿಂದ ಸಂಜೆಯವರೆಗೆ ಜಡಿ ಮಳೆ ಕಾಡುತ್ತಿದ್ದು, ನಿರಂತರ ಹವಾಮಾನ ವೈಪರೀತ್ಯಕ್ಕೆ ಜನರು ವಿಷಮಶೀತ ಜ್ವರ ಸೇರಿ ನಾನಾ ಅನಾರೋಗ್ಯ ಸಮಸ್ಯೆಗಳಿಗೆ ತತ್ತರಿಸುವಂತಾಗಿದೆ. ಜನರು ಈಗಾಗಲೇ ಚಳಿಗೆ ಬೆಚ್ಚಗೆ ಇರಲು ಟೋಪಿ, ಸ್ವೆಟರ್ ಮೊರೆ ಹೋಗಿದ್ದಾರೆ. ಹೊರಗಡೆ ಬರಲು ಹೆಚ್ಚಿಗೆ ಒಲವು ತೋರುತ್ತಿಲ್ಲ. ವೃದ್ಧರು, ಮಕ್ಕಳು ಮನೆಯಲ್ಲಿ ಬಂಧಿಯಾಗಿದ್ದಾರೆ. ಮತ್ತೊಂದೆಡೆ ಶೀತಕ್ಕೆ ನೆಗಡಿ, ತಲೆ ನೋವು, ಕೈಕಾಲು ನೋವು, ಕೆಮ್ಮು, ಕಣ್ಣು ಉರಿ ಸೇರಿ ನಾನಾ ಸಮಸ್ಯೆಗಳು ಕಾಡುತ್ತಿವೆ. ಇದರಿಂದ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿದೇಶಗಳಲ್ಲಿ ಕರೊನಾ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಅಲಾರ್ಟ್ ಘೋಷಿಸಲಾಗಿದೆ. ಮಾಸ್ಕ್ ಬಳಕೆ ಕಡ್ಡಾಯಗೊಳಿಸಿ, ಮಾರ್ಗಸೂಚಿ ಹೊರಡಿಸಲಾಗಿದೆ. ಇದರ ನಡುವೆ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದರೂ ಇತ್ತೀಚಿಗಿನ ಬೆಳವಣಿಗೆಗೆಳಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಶೀತ ಸಮಸ್ಯೆಗೆ ಕರೊನಾ ಲಕ್ಷಣಗಳನ್ನು ಹೋಲಿಸಿಕೊಂಡು, ಚಿಕಿತ್ಸೆ ಪಡೆಯಲು ಹೆಚ್ಚಿನ ಜನರು ಮುಂದಾಗುತ್ತಿದ್ದಾರೆ. ಇದೇ ವೇಳೆ ಮಕ್ಕಳಲ್ಲಿ ನ್ಯೂಮೋನಿಯಾ, ವಿಷಮಶೀತ ಜ್ವರ, ನೆಗಡಿ ಮತ್ತು ಕೆಮ್ಮು ಸಮಸ್ಯೆ ಕಂಡು ಬರುತ್ತಿದ್ದು ವಾರ ಕಳೆದರೂ ಆರೋಗ್ಯದಲ್ಲಿ ಚೇತರಿಕೆ ಕಾಣದಿದ್ದಲ್ಲಿ ವೈದ್ಯರು ರೋಗಿಯನ್ನು ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ.
ಇದರ ನಡುವೆ ಶೀತ ವಾತಾವರಣವಿರುವಾಗ ಆರೋಗ್ಯದಲ್ಲಿ ಏರುಪೇರು ಸಾಮಾನ್ಯ. ಇದಕ್ಕೆ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ಅನಾರೋಗ್ಯ ಉಂಟಾದಾಗ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆಯಬೇಕು ಎಂಬುದಾಗಿ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಇತ್ತೀಚೆಗೆ ದಟ್ಟವಾದ ಮಂಜು, ಜಡಿ ಮಳೆ ಮತ್ತು ಮೋಡ ಮುಸುಕಿದ ವಾತಾವರಣದಲ್ಲಿ ಶೀತ ಸಮಸ್ಯೆ ಹೆಚ್ಚಾಗಿದೆ.
ರಾಜು ಸ್ಥಳೀಯ ನಿವಾಸಿ, ಚಿಕ್ಕಬಳ್ಳಾಪುರ