ಹಳ್ಳೂರ ಗ್ರಾಮ ದೇವಿ ಜಾತ್ರೆ ಅಚ್ಚುಕಟ್ಟಾಗಿ ನೆರವೇರಲಿ

Mudalgi
ಹಳ್ಳೂರ ಗ್ರಾಮದಲ್ಲಿ ದ್ಯಾಮವ್ವದೇವಿ ಮಹಾಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಪ್ರಶಾಂತ ಚನ್ನಗೊಂಡ ಮಾತನಾಡಿದರು. ಶ್ರೀಶೈಲ ಬ್ಯಾಕೂಡ, ಎಚ್.ವೈ.ತಾಳಿಕೋಟಿ, ಗಿರೀಶ ಗೌಡಿಗೌಡರ, ಲಕ್ಷ್ಮಣ ಕತ್ತಿ ಇತರರಿದ್ದರು.
Published on

ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದ ದ್ಯಾಮವ್ವ ದೇವಿ ಹಾಗೂ ಮಹಾಲಕ್ಷ್ಮೀದೇವಿ ಜಾತ್ರೆ ಒಂಬತ್ತು ದಿನಗಳ ಕಾಲ ನಡೆಯುವ ಕಾರಣ ಭಕ್ತರಿಗೆ ತೊಂದರೆಯಾಗದಂತೆ ಸಕಲ ಸಿದ್ಧತೆ ಮಾಡಿಕೊಂಡು ಗ್ರಾಮ ಪಂಚಾಯಿತಿ ಮತ್ತು ಜಾತ್ರಾ ಕಮಿಟಿ ಅವರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಶ್ರಮಿಸಬೇಕು ಎಂದು ತಹಸೀಲ್ದಾರ್ ಪ್ರಶಾಂತ ಚನ್ನಗೊಂಡ ಹೇಳಿದರು.
ತಾಲೂಕಿನ ಹಳ್ಳೂರ, ಶಿವಾಪೂರ(ಹ) ಮತ್ತು ರಾಯಬಾಗ ತಾಲೂಕಿನ ಕಪಲಗುದ್ದಿ ಗ್ರಾಮಗಳ ಗ್ರಾಮದೇವತೆಯಾದ ದ್ಯಾಮವ್ವದೇವಿ ಹಾಗೂ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಹಳ್ಳೂರ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಹದಿನೇಳು ವರ್ಷದ ನಂತರ ಹಳ್ಳೂರ ಗ್ರಾಮದಲ್ಲಿ ನಡೆಯುತ್ತಿದೆ. ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಾತ್ರೆ ಸುಸೂತ್ರವಾಗಿ ನಡೆಯಲು ಎಲ್ಲರೂ ಜವಾಬ್ದಾರಿಯಿಂದ ಕೆಲಸ ಕಾರ್ಯ ಹಂಚಿಕೆ ಮಾಡಿಕೊಳ್ಳಬೇಕು. ಜನಸಮೂಹ ಹೆಚ್ಚಾಗಿ ಸೇರುವುದರಿಂದ ನೀರಿನ ಅಭಾವವಾಗದಂತೆ ಹಳ್ಳಕ್ಕೆ ನೀರು ಬಿಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸಿಪಿಐ ಶ್ರೀಶೈಲ ಬ್ಯಾಕೂಡ ಮಾತನಾಡಿ, ಹಳ್ಳೂರ, ಕಪ್ಪಲಗುದ್ದಿ, ಶಿವಾಪುರ(ಹ) ಮೂರೂ ಗ್ರಾಮದ ಜಾತ್ರೆ ನಡೆಯುವುದರಿಂದ ಹೆಚ್ಚು ಜನ ಸೇರುವ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಲಾಗುವುದು. ಜಾತ್ರೆಯು ಸುಗಮ ಮತ್ತು ಶಾಂತಿ ರೀತಿಯಿಂದ ನೆರವೇರಲು ಹಳ್ಳೂರ ಗ್ರಾಮದಲ್ಲಿ ಓರ್ವ ಸಿಪಿಐ, 9 ಜನ ಪಿಎಸ್‌ಐ, 150 ಪೊಲೀಸ್ ಸಿಬ್ಬಂದಿ, ಒಂದು ಕೆಎಸ್‌ಆರ್‌ಪಿ ಒಂದು ತುಕಡಿ ನಿಯೋಜಿಸಲಾಗುವುದು ಎಂದರು. ಗ್ರಾಮ ಪಂಚಾಯಿತಿ ಪಿಡಿಒ ಎಚ್.ವೈ.ತಾಳಿಕೋಟಿ ಮಾತನಾಡಿ, ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲ ಮೂಲಸೌಕರ್ಯ ಒದಗಿಸಲಾಗುವುದು ಎಂದರು.
ಗಿರೀಶ ಗೌಡಿಗೌಡರ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಭೀಮಶಿ ಮಗದುಮ, ಸುರೇಶ ಕತ್ತಿ, ಮುರಿಗೆಪ್ಪ ಮಾಲಗಾರ, ಮಲ್ಲಿಕಾರ್ಜುನ ಸಂತಿ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಿ ಜಾತ್ರೆಯನ್ನು ಅಚ್ಚುಕಟ್ಟಾಗಿ ನಡೆಯಲು ಶ್ರಮಿಸುತ್ತೇವೆ ಎಂದು ಹೇಳಿದರು.
ಜಾತ್ರಾ ಕಮಿಟಿ ಅಧ್ಯಕ್ಷ ಅಡಿವೆಪ್ಪ ಪಾಲಬಾಂವಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಕತ್ತಿ, ಕಂದಾಯ ಅಧಿಕಾರಿ ಸಂಗಣ್ಣ ಹೊಸಮನಿ, ಪಿಎಸ್‌ಐಗಳಾದ ಸೋಮೇಶ ಗೆಜ್ಜಿ, ಶಿವುಕುಮಾರ ಬಿರಾದಾರ, ಗ್ರಾಮಾಡಳಿತಾಧಿಕಾರಿ ಸಂಜು ಅಗ್ನೆಪ್ಪಗೊಳ, ಅರ್ಚಕ ಪುಂಡಲೀಕ ಪೂಜೇರಿ ಹಾಗೂ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮಸ್ಥರು ಇದ್ದರು.

ಇಂದಿನಿಂದ ವಿವಿಧ ಕಾರ್ಯಕ್ರಮ
ಹಳ್ಳೂರ ಗ್ರಾಮದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಹಮ್ಮಿಕೊಳ್ಳುವ ಮಹಾಲಕ್ಷ್ಮೀದೇವಿ ಹಾಗೂ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಮೇ 22ರಿಂದ 29ರ ವರೆಗೆ ಜರುಗಲಿದೆ ಎಂದು ದೇವಸ್ಥಾನದ ಕಮಿಟಿ ಪ್ರಕಟಣೆ ತಿಳಿಸಿದೆ. 22 ರಂದು ಹೋಮ ಹವನದೊಂದಿಗೆ ದೇವತೆಗಳ ಮೂರ್ತಿ ಪ್ರತಿಸ್ಥಾಪನೆ, 23 ರಂದು ಸಂಜೆ 6ಕ್ಕೆ ದ್ಯಾಮವ್ವ ದೇವಿ ರಥೋತ್ಸವ ಜರುಗಲಿದೆ. ಮೇ 24ರಂದು ಸಂಜೆ 4ಕ್ಕೆ ಗ್ರಾಮದೇವತೆ ಮೆರವಣಿಗೆ ಮುಗಿದ ನಂತರ ಕಣಕಿನ ಕೋನದ ವಿಸರ್ಜನೆ ಕಾರ್ಯಕ್ರಮ ಜರುಗುವುದು ಹಾಗೂ 29ರ ವರೆಗೆ ವಿವಿಧ ಕಾರ್ಯಕ್ರಮ ಜರುಗಲಿವೆ.

ಹಳ್ಳೂರ ಗ್ರಾಮದಲ್ಲಿ ದ್ಯಾಮವ್ವದೇವಿ ಮಹಾಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಪ್ರಶಾಂತ ಚನ್ನಗೊಂಡ ಮಾತನಾಡಿದರು. ಶ್ರೀಶೈಲ ಬ್ಯಾಕೂಡ, ಎಚ್.ವೈ.ತಾಳಿಕೋಟಿ, ಗಿರೀಶ ಗೌಡಿಗೌಡರ, ಲಕ್ಷ್ಮಣ ಕತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net