

ಭಟ್ಕಳ: ಕರೊನಾ ಲಾಕ್ಡೌನ್ನಿಂದ ಎಲ್ಲ ಶಾಲಾ- ಕಾಲೇಜ್ಗಳು ಮತ್ತು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಯಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಗ್ರಾಮೀಣ್ ಶಿಕ್ಷಣ ಸಾಫ್ಟ್ವೇರ್ ಅಭಿವೃದ್ಧಿ ಪಡಿಸಲಾಗಿದೆ ಎಂದು ಭಟ್ಕಳ ಎಜುಕೇಷನ್ ಟ್ರಸ್ಟ್ ವ್ಯವಸ್ಥಾಪಕ ರಾಜೇಶ ನಾಯಕ ಹೇಳಿದರು.
ತಾಲೂಕಿನ ಕೋಣಾರದಲ್ಲಿ ಸೋಮವಾರ ಗ್ರಾಮೀಣ್ ಶಿಕ್ಷಣ ಸಾಫ್ಟ್ವೇರ್ ಆಧಾರಿತ ಕಲಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕರೊನಾ ವೈರಸ್ ಹಾವಳಿಯಿಂದಾಗಿ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಆನ್ಲೈನ್, ಆಫ್ಲೈನ್ ತರಗತಿ ಆರಂಭಿಸಲಾಗಿತ್ತು. ಆದರೆ, ಗ್ರಾಮೀಣ ಭಾಗದಲ್ಲಿ ಮೊಬೈಲ್ ನೆಟ್ವರ್ಕ್, ಇಂಟರ್ನೆಟ್ ಸಮಸ್ಯೆಯಿಂದ ಶಿಕ್ಷಣ ಪಡೆಯುವುದು ಕಷ್ಟವಾಗಿತ್ತು. ಹೀಗಾಗಿ ತಾಲೂಕಿನ ಸುತ್ತಮುತ್ತಲ ಹಳ್ಳಿಗಳ ಕೇಂದ್ರ ಸ್ಥಾನದಲ್ಲಿ ಡಿಜಿಟಲ್ ಶಿಕ್ಷಣ ನೀಡುವ ವಿನೂತನ ಪರಿಕಲ್ಪನೆಗೆ ಎಸ್ಜಿಎಸ್ ಕಾಲೇಜ್ ಮುಂದಾಗಿದೆ ಎಂದರು. ಇದನ್ನು ಕಾರ್ಯಗತಗೊಳಿಸಲು ವಿದ್ಯಾರ್ಥಿ- ಉಪನ್ಯಾಸಕರ ತಂಡಗಳನ್ನು ರಚಿಸಲಾಗಿದೆ. ಅವರ ಅವಿರತ ಪರಿಶ್ರಮ ಹಾಗೂ ಪಾಲಕರ, ಊರ ನಾಗರಿಕರ ಸಹಕಾರದಿಂದ ಪ್ರಥಮ ಹಂತದಲ್ಲಿ ಮಾರುಕೇರಿ, ಕೋಣಾರ, ಹಾಡುವಳ್ಳಿಗಳಲ್ಲಿ ಗ್ರಾಮೀಣ್- ಶಿಕ್ಷಣ ಪ್ರಾರಂಭಿಸಲಾಗಿದೆ ಎಂದರು.
ಮಾರುಕೇರಿ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಶ್ರೀಕಂಠ ಹೆಬ್ಬಾರ ಮಾತನಾಡಿ, ಭಟ್ಕಳ ಎಜುಕೇಷನ್ ಟ್ರಸ್ಟ್ನ ಗ್ರಾಮೀಣ್- ಶಿಕ್ಷಣ ಪರಿಕಲ್ಪನೆಯು ನಾಡಿನಲ್ಲಿಯೇ ಪ್ರಥಮ ಪ್ರಯತ್ನವಾಗಿದೆ. ಈ ಪ್ರಯತ್ನ ಯಶಸ್ವಿಯಾಗಲಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬಾಳು ಬೆಳಗಲಿ ಎಂದರು. ಪಿಯು ಕಾಲೇಜ್ ಪ್ರಾಂಶುಪಾಲ ವೀರೇಂದ್ರ ಶಾನಭಾಗ, ಪದವಿ ಕಾಲೇಜ್ ಪ್ರಾಂಶುಪಾಲ ಶ್ರೀನಾಥ ಪೈ, ಉಪಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು, ಪಾಲಕರು ಇದ್ದರು.