

ದೊಡ್ಡಬಳ್ಳಾಪುರ: ಬೆಂಗಳೂರಿನ ವಾರ್ಡ್‌ಗಳ ಕಸವನ್ನು ಅಲ್ಲಿಯೇ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಅವಕಾಶವಿದ್ದರೂ, ಗ್ರಾಮಾಂತರ ಪ್ರದೇಶಕ್ಕೆ ಬಿಬಿಎಂಪಿ ಕಸ ಸುರಿಯುವ ಮೂಲಕ ದೊಡ್ಡ ಮಾಫಿಯಾವನ್ನಾಗಿ ಮಾರ್ಪಾಡು ಮಾಡಿಕೊಂಡಿದೆ ಎಂದು ಕುಣಿಗಲ್ ತಾಲೂಕಿನ ಕಿತ್ನಾಮಂಗಲ-ಕಾಡುಮತ್ತಿಕೆರೆ ಅರೆಶಂಕರ ಮಠದ ಶ್ರೀ ಸಿದ್ಧರಾಮ ಚೈತನ್ಯ ಸ್ವಾಮೀಜಿ ಆರೋಪಿಸಿದರು.
ಚಿಗರನೇಹಳ್ಳಿ ಎಂಎಸ್‌ಜಿಪಿ ಘನತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧದ 5ನೇ ದಿನದ ಪ್ರತಿಭಟನೆ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಬೆಂಬಲ ಘೋಷಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಬಿಬಿಎಂಪಿ ಕಸ ಸುರಿಯುತ್ತಿರುವುದರಿಂದ ಪರಿಸರ, ಅಂತರ್ಜಲಕ್ಕೆ ಸೇರುತ್ತಿರುವ ವಿಷದ ಪರಿಣಾಮ ದಶಕಗಳು ಕಳೆದರೂ ಹೋಗುವುದಿಲ್ಲ. ಹೋರಾಟ ಹತ್ತಿಕ್ಕುವ ಹುನ್ನಾರಗಳು ನಡೆಯಬಹುದು. ಈ ಹಂತದಲ್ಲಿ ಎದುರಾಗಬಲ್ಲ ಆರೋಪಗಳನ್ನು ಮೆಟ್ಟಿನಿಂತು ಹೋರಾಟ ಗಟ್ಟಿಗೊಳಿಸಿಕೊಳ್ಳಿ ಎಂದರು.
ವಾರ್ಡ್‌ಗಳಲ್ಲೇ ಕಸ ವಿಲೇವಾರಿಗೆ ಅವಕಾಶ ಇರುವಾಗ ಕೃಷಿ ಭೂಮಿ ಏಕೆ ಹಾಳು ಮಾಡುತ್ತೀರ.
ಮಾಫಿಯಾಗಳಿಗೆ ಗ್ರಾಮಾಂತರ ಪ್ರದೇಶದ ಸ್ವಚ್ಚಂದ ಪರಿಸರ ಹಾಳು ಮಾಡುವ ಮೂಲಕ ಇಲ್ಲಿನ ರೈತರ ಬದುಕು ಮತ್ತು ಕೃಷಿಯನ್ನು ಬಲಿ ತೆಗೆದುಕೊಳ್ಳಬೇಡಿ ಎಂದರು.
ಪ್ರತಿಭಟನೆಯ ನೇತೃತ್ವ ವಹಿಸಿದ ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ ಸಾರಥಿ ಸತ್ಯಪ್ರಕಾಶ್, ಭಕ್ತರಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಆರ್.ಸಿದ್ದಲಿಂಗಯ್ಯ ಮಾತನಾಡಿ, 2015ರಿಂದಲೇ ಕಸ ವಿಲೇವಾರಿಯನ್ನು ವಿರೋಧಿಸುತ್ತಲೇ ಬಂದಿದ್ದೇವೆ. ದಿನಕ್ಕೆ 400 ಮೆಟ್ರಿಕ್ ಟನ್ ಕಸ ವಿಲೇವಾರಿ ಮಾಡುವುದಾಗಿ ತಿಳಿಸಿ. ಈಗ ಘಟಕದ ಕಸ ವಿಲೇವಾರಿ ಸಾಮರ್ಥ್ಯ ಮೀರಿ ದಿನಕ್ಕೆ 4500 ಸಾವಿರ ಮೆಟ್ರಿಕ್ ಟನ್ ತ್ಯಾಜ್ಯವನ್ನು ಇಲ್ಲಿ ಸುರಿಯುತ್ತಿದ್ದಾರೆ. ಎಂಎಸ್‌ಜಿಪಿ ಘಟಕ ತೆರವುಗೊಳಿಸಿ ಜನರ ಬದುಕು ಉಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನವ ಬೆಂಗಳೂರು ಹೋರಾಟ ಸಮಿತಿ ಅಧ್ಯಕ್ಷ ಜಿ.ಎನ್.ಪ್ರದೀಪ್, ರೈತ ಮುಖಂಡ ಅಶ್ವತ್ಥನಾರಾಯಣ, ತಾಪಂ ಮಾಜಿ ಅಧ್ಯಕ್ಷೆ ದೇವರಾಜಮ್ಮ, ಗ್ರಾಪಂ ಸದಸ್ಯರಾದ ಶ್ರೀಲತಾ, ಪ್ರಸನ್ನ ಮತ್ತಿತರರಿದ್ದರು.