ಹಳ್ಳಿಗಳಲ್ಲಿ ಹೆಚ್ಚಿದ ಹೆಮ್ಮಾರಿ, ಸಾವುಗಳಿಗೆ ಸಿಕ್ಕಿದೆ ಬಲವಾದ ಕಾರಣ, ಆರ್‌ಎಂಪಿ ವೈದ್ಯರ ಮೇಲೆ ಜಿಲ್ಲಾಡಳಿತ ಫೋಕಸ್ !

medical oxizen
Published on

ವಿಜಯಪುರ: ಗ್ರಾಮೀಣ ಭಾಗದಲ್ಲಿ ಕರೊನಾದಿಂದ ಹೆಚ್ಚಿನ ಸಾವು ಸಂಭವಿಸಲು ಬಲವಾದ ಕಾರಣವೊಂದು ಬಯಲಾಗಿದ್ದು, ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಫೋಕಸ್ ಮಾಡುತ್ತಿದೆ.

ಸೋಂಕು ಹೆಚ್ಚಳಗೊಂಡು ಸಾವಿನ ಪ್ರಮಾಣ ಅಧಿಕಗೊಳ್ಳಲು ಸ್ಥಳೀಯ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಆರ್‌ಎಂಪಿ ವೈದ್ಯರ ತಪ್ಪು ಮಾರ್ಗದರ್ಶನವೇ ಕಾರಣವಾಗಿದೆ. ಜಿಲ್ಲಾಡಳಿತ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆಯ ಕಾರ್ಯಾಚರಣೆ ವೇಳೆ ಇಂಥದ್ದೊಂದು ಅಂಶ ಬೆಳಕಿಗೆ ಬಂದಿದೆ.

ಆರ್‌ಎಂಪಿ ವೈದ್ಯರು ಸ್ಥಳೀಯ ಮಟ್ಟದಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕೆಮ್ಮು, ಜ್ವರ, ನೆಗಡಿ ಮತ್ತಿತರ ಸಣ್ಣ ಪುಟ್ಟ ಕಾಯಿಲೆಗಳಿಗೆ ಗ್ರಾಮೀಣರು ಆರ್‌ಎಂಪಿ ವೈದ್ಯರನ್ನೇ ನೆಚ್ಚಿಕೊಂಡಿದ್ದಾರೆ. ಇದೀಗ ಆ ಲಕ್ಷಣಗಳು ಕಾಣಸಿಗುತ್ತಿದ್ದಂತೆ ಕರೊನಾ ಪರೀಕ್ಷೆಗೆ ಒಳಗಾಗುವ ಬದಲು ಆರ್‌ಎಂಪಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಕೊಟ್ಟ ಮಾತ್ರೆಗಳನ್ನು ಪಡೆದು ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳುತ್ತಿದ್ದಾರೆ. ಯಾವಾಗ ಕಾಯಿಲೆ ತೀವ್ರಗೊಳ್ಳುವುದೋ ಆಗ ಜಿಲ್ಲಾಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಅಷ್ಟರಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ.

ಗ್ರಾಮೀಣ ಭಾಗದ ಜನ ಕರೊನಾ ಬಂದರೂ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಕರೊನಾ ಕಾಳಜಿ ಕೇಂದ್ರಕ್ಕೆ ಕರೆದೊಯ್ಯಲು ಬಂದರೆ ನಿರಾಕರಿಸುತ್ತಿದ್ದಾರೆ. ಅದಾಗ್ಯೂ ಗ್ರಾಮ ಮಟ್ಟದ ಕಾರ್ಯಪಡೆ ಸದಸ್ಯರು ಅವರ ಮನವೊಲಿಸಿ ಕರೊನಾ ಕಾಳಜಿ ಕೇಂದ್ರಕ್ಕೆ ದಾಖಲಿಸುತ್ತಿದ್ದಾರೆ. ಇದರಲ್ಲಿ ಆರ್‌ಎಂಪಿ ವೈದ್ಯರ ತಪ್ಪು ಮಾರ್ಗದರ್ಶನವೂ ಕಾರಣವಾಗಿದೆ. ಹೀಗಾಗಿ ಕರೊನಾದಂಥ ಯಾವುದೇ ಲಕ್ಷಣಗಳು ಕಂಡು ಬಂದರೆ ಅಂಥ ರೋಗಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಳುಹಿಸಲು ಸೂಚಿಸಲಾಗಿದೆ. ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net