

ಹೊಳೆಹೊನ್ನೂರು: ಶಿಕ್ಷಕರು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ಗ್ರಾಮದ ಮುಖಂಡ ಎಚ್.ಜಿ.ಮಲ್ಲಯ್ಯ ಹೇಳಿದರು.
ಗುಡುಮಗಟ್ಟೆಯಲ್ಲಿ ಶನಿವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಡಿ.ಆರ್.ಮಲ್ಲಿಕಾರ್ಜುನಪ್ಪ ವಯೋನಿವೃತ್ತಿ ಪ್ರಯುಕ್ತ ಗ್ರಾಮಸ್ಥರು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಹಳ್ಳಿಗಾಡಿನ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುವುದು ಪುಣ್ಯದ ಕೆಲಸ. ಪ್ರತಿಯೊಬ್ಬ ಶಿಕ್ಷಕ ವೃತ್ತಿಯನ್ನು ಗೌರವದಿಂದ ಕಾಣುವುದನ್ನು ಮರೆಯಬಾರದು. ಸರ್ಕಾರಿ ಶಾಲಾ ಶಿಕ್ಷಕರಾಗಿ ಜವಾಬ್ದಾರಿ ನಿಭಾಯಿಸುವುದು ಸುಲಭದ ಮಾತಲ್ಲ ಎಂದರು.
ಗುಡುಮಗಟ್ಟೆ ಗ್ರಾಮಸ್ಥರು ತಮ್ಮ ನೆಚ್ಚಿನ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನಪ್ಪ ಅವರಿಗೆ ಬಂಗಾರದ ಉಂಗುರ ಉಡುಗೊರೆ ನೀಡಿ ದಂಪತಿಗೆ ಸನ್ಮಾನಿಸಿದರು. ಶಾಲಾ ಸಮಿತಿ ಅಧ್ಯಕ್ಷ ಡಿ.ವಿ.ಬಸವರಾಜಪ್ಪ, ಗ್ರಾಮಾಭಿವೃದ್ಧಿ ಅಕಾರಿ ಶಿವಾಜಿರಾವ್ ಡಿಸಿಲೆ, ಎಸ್.ಪಿ. ರಾಜು, ಎಸ್.ಸಿದ್ದಲಿಂಗಪ್ಪ, ಮಹೇಶ್ವರಪ್ಪಗೌಡ, ಎಂ.ಕುಬೇಂದ್ರಪ್ಪ, ಮಲ್ಲಿಕಾರ್ಜುನ್, ಪುಟ್ಟಪ್ಪ, ಪ್ರಮಿಳಾ ಸೇರಾವೊ, ಪೂಜಾರ್ ರಮೇಶ್, ಮಂಜುನಾಥ್ ಸುತ್ತಕೋಟೆ, ದಯಾನಂದ, ಜಯಪ್ಪ, ಈಶ್ವರಪ್ಪ, ಓಂಕಾರಪ್ಪ ಇತರರಿದ್ದರು.