ಹಳ್ಳಿಗಳಲ್ಲಿ ಜಿಪಂ ಸಿಇಒ ಫೌಜಿಯಾ ತರನ್ನುಮ್ ಪರಿಶೀಲನೆ

15gbd3 (1)
Published on

ಗೌರಿಬಿದನೂರು: ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೌಜಿಯಾ ತರನ್ನುಮ್ ಪರಿಶೀಲಿಸಿದರು.

ವಿವಿಧ ಗ್ರಾಪಂಗಳಿಗೆ ಬುಧವಾರ ಅನಿರೀಕ್ಷಿತ ಭೇಟಿ ನೀಡಿದ ಸಿಇಒ ಸ್ಥಳೀಯ ಗ್ರಾಪಂ ಅಧಿಕಾರಿಗಳು ಹಾಗೂ ಗಾಮಸ್ಥರಿಂದ ಮಾಹಿತಿ ಸಂಗ್ರಹಿಸಿದರು.ತಾಲೂಕಿನ ಪುರ ಗ್ರಾಪಂಗೆ ಭೇಟಿ ನೀಡಿದಾಗ, ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲಾಗುತ್ತಿದೆ. ಪ್ರತಿದಿನ ಔಷಧ ಸಿಂಪಡಿಸಲಾಗುತ್ತಿದೆ. ಹಾಲಿನ ಡೇರಿ, ಪಡಿತರ ವಿತರಣಾ ಕೇಂದ್ರ, ದಿನಸಿ ಅಂಗಡಿಗಳ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಸೂಚಿಸಲಾಗುತ್ತಿದೆ ಎಂದು ಪಿಡಿಒ ಮೀನಾಕ್ಷಿ ಮಾಹಿತಿ ನೀಡಿದರು.

ಗ್ರಾಮದಲ್ಲಿ ಸ್ವಯಂ ಸೇವಕರು, ಪೊಲೀಸರ ಸಹಕಾರದೊಂದಿಗೆ ಗ್ರಾಮ ಪಡೆ ರಚನೆ ಮಾಡಲಾಗಿದೆ. ಆ ಮೂಲಕ ಗ್ರಾಮಸ್ಥರು ಯಾರೂ ಊರಿನಿಂದ ನಗರಕ್ಕೆ ಹೋಗದ ರೀತಿಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜನತೆಗೆ ಅರಿವು ಮೂಡಿಸಲಾಗುತ್ತಿದೆ. ಜನತೆ ಸಹ ಸಂಪೂರ್ಣವಾಗಿ ಸಹಕಾರ ನೀಡುತ್ತಿದ್ದಾರೆ ಎಂದರು.

ಕರೊನಾ ಸೋಂಕು ನಿಯಂತ್ರಣ ಸವಾಲಿನ ವಿಷಯವಾಗಿದೆ. ಇದಕ್ಕೆ ಸಮುದಾಯದ ಸಹಕಾರ ಅಗತ್ಯ. ಅಧಿಕಾರಿಗಳು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಜನ ಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಪಂ ಸಿಇಒ ಸಲಹೆ ನೀಡಿದರು.

ತಾಪಂ ಇಒ ಎನ್. ಮುನಿರಾಜು ಮಾತನಾಡಿ, ಸಾಂಕ್ರಾಮಿಕ ರೋಗವಾಗಿರುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಯಲು ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಜನರು ಹೋಗದಂತೆ ಹಾಗೂ ಬೇರೆ ಗ್ರಾಮ, ನಗರ, ಗಡಿಯಿಂದ ತಮ್ಮ ಗ್ರಾಮಗಳಿಗೆ ಬರದಂತೆ ಗ್ರಾಪಂ ಮಟ್ಟದಲ್ಲಿ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಹಗಲು-ರಾತ್ರಿ ಗಸ್ತು ತಿರುಗುವ ಮೂಲಕ ವಲಸೆ ಬರುವವರನ್ನು ನಿಯಂತ್ರಿಸಲಾಗುತ್ತಿದೆ. ಹೊರ ರಾಜ್ಯಗಳು ಮತ್ತು ಹೊರ ಜಿಲ್ಲೆಗಳಿಂದ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಗುರುತಿಸಿ ಅವರಿಗೆ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಲಾಗಿದೆ. ತಾಲೂಕಿನ ಕೆಲವು ಗ್ರಾಪಂಗಳಲ್ಲಿ ಹಸಿವಿನಿಂದ ಬಳಲುತ್ತಿರುವ ಸುಮಾರು 223 ಜನ ನಿರಾಶ್ರಿತರು, ಭಿಕ್ಷುಕರು, ವಲಸೆ ಕಾರ್ಮಿಕರನ್ನು ಪತ್ತೆ ಮಾಡಿ, ಗ್ರಾಪಂಗಳಿಂದ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.ಗ್ರಾಮೀಣ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮತ್ತು ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಸರಬರಾಜು ಮಾಡಲು ಕ್ರಮವಹಿಸಲಾಗಿದೆ ಎಂದು ಹೇಳಿದರು.

ಗಂಗಸಂದ್ರ ಗ್ರಾಪಂಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೂಪಾ, ಪಂಚಾಯಿತಿ ಅಧ್ಯಕ್ಷ ಪಟೇಲ್ ಅವರಿಂದ ಮಾಹಿತಿ ಪಡೆದುಕೊಂಡರು. ತಾಪಂ ಸಹಾಯಕ ನಿರ್ದೇಶಕ ಚಿನ್ನಪ್ಪಯ್ಯ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net