ಹಳ್ಳಿಗಳಲ್ಲಿ ಗಾಂಜಾ ಘಮಲು

28 HHR P 05 ganga
ಹೊಳೆಹೊನ್ನೂರು ಸಮೀಪದ ಅಡಕೆ ತೋಟವೊಂದರಲ್ಲಿ ಸುತ್ತಲು ಗರಿಕಟ್ಟಿ ಬೆಳೆಸಿದ ಗಾಂಜಾ ಗಿಡಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡರು.
Published on

ಹೊಳೆಹೊನ್ನೂರು: ಗ್ರಾಮೀಣ ಭಾಗದ ಕೆಲ ಹಳ್ಳಿಗಳಲ್ಲಿ ಗಾಂಜಾ ಮಾರಾಟ ಜೋರಾಗಿದೆ. ಹೊರ ರಾಜ್ಯದಿಂದಲೂ ಮತ್ತಿನಸೊಪ್ಪು ಸಲೀಸಾಗಿ ಸರಬರಾಜಾಗುತ್ತಿದ್ದು ಗ್ರಾಮಾಂತರದಲ್ಲಿ ಗಾಂಜಾ ಘಮಲು ಮೀತಿ ಮೀರುತ್ತಿದೆ.

ಹಳ್ಳಿಗಳಲ್ಲಿ ಗಾಂಜಾ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿದ್ದು ಕೆ.ಜಿ.ಗಟ್ಟಲೆ ಗಾಂಜಾ ಸೊಪ್ಪನ್ನು ಪೊಲೀಸರು ವಶಪಡಿಸಿಕೊಳ್ಳುತ್ತಿದ್ದಾರೆ. ಹಳ್ಳಿಗಳಲ್ಲಿ ಸಿದ್ದಿಕಟ್ಟೆ ಪೂಜೆ ಸೇರಿದಂತೆ ವಿಶೇಷ ಹಬ್ಬ ಹರಿದಿನಗಳಲ್ಲಿ ಸಿಗುತ್ತಿದ್ದ ಮತ್ತಿನಸೊಪ್ಪು ವ್ಯಸನಿಗಳ ಪಾಲಿಗೆ ನಿತ್ಯ ಬಳಕೆಯ ವಸ್ತುವಾಗುತ್ತಿದೆ. ಪಾಳು ಬಿದ್ದ ಸರ್ಕಾರಿ ಕಟ್ಟಡಗಳ ಒಳಾಂಗಣ ಸೇರಿದಂತೆ ಮಳೆಗಾಲದಲ್ಲಿ ಗುಡ್ಡಗಾಡುಗಳ ತಗ್ಗಿನಲ್ಲಿ ಗಾಂಜಾ ಬೀಜ ಚೆಲ್ಲಿ ಗಿಡ ಬೆಳೆಸುವ ಜಾಲಗಳು ಕೆಲವೆಡೆ ಸಕ್ರಿಯವಾಗಿವೆ. ಶಿವಮೊಗ್ಗ ಹೊರವಲಯ ಸೇರಿದಂತೆ ಹೊಳೆಹೊನ್ನೂರು, ಹೊಳಲೂರು, ಕುಂಸಿ ಭಾಗದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಗಾಂಜಾ ಸೇವನೆ ದಾಸರಾದವರಿಗೆ ಮದ್ಯಪಾನ ಕಿಕ್ ನೀಡುತ್ತಿಲ್ಲ. ಮದ್ಯಪಾನ ಮಾಡಿದರೆ ಕೆಲ ಹೊತ್ತು ಮಾತ್ರ ಕಿಕ್ ಇರುತ್ತದೆ. ಗಾಂಜಾ ಸೇವಿಸಿದರೆ ಬಹುಹೊತ್ತಿನವರೆಗೂ ನಶೆ ಇರುತ್ತದೆ. ಹೀಗಾಗಿ ಗಾಂಜಾ ಸೊಪ್ಪಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಣ ನೀಡಿದರೆ ಹಳ್ಳಿಗಳಲ್ಲಿ ಸಲೀಸಾಗಿ ಗಾಂಜಾ ಪೊಟ್ಟಣಗಳು ವ್ಯಸನಿಗಳ ಕೈ ಸೇರುತ್ತಿವೆ. ಕಾಲೇಜು ಯುವಕರು ಹಾಗೂ ಅಪ್ರಾಪ್ತರನ್ನು ಟಾರ್ಗೆಟ್ ಮಾಡುತ್ತಿರುವ ದಂಧೆಕೋರರು ಗ್ರಾಮೀಣ ಭಾಗದಲ್ಲಿ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದ್ದಾರೆ. ಮಿನಿ ಪೌಚ್ (ಸಣ್ಣ) ಹೆಸರಿನಲ್ಲಿ ಕಡಿಮೆ ಬೆಲೆಗೆ ಗಾಂಜಾ ಸಿಗುತ್ತಿರುವುರಿಂದ ಬಳಕೆದಾರರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸ್ಥಳೀಯ ಕೆಲ ಯುವಕರು ಗಾಂಜಾ ಮತ್ತಿನಲ್ಲಿ ತೇಲಿ ಅಪರಾಧ ಕೃತ್ಯಗಳಲ್ಲೂ ತೊಡಗಿಕೊಳ್ಳುತ್ತಿದ್ದಾರೆ.

ನೆರೆಯ ಆಂಧ್ರ ಭಾಗದಿಂದ ಗ್ರಾಮಾಂತರಕ್ಕೆ ಸಲಿಸಾಗಿ ಪೂರೈಕೆಯಾಗುವಷ್ಟು ದೊಡ್ಡ ಮಟ್ಟದಲ್ಲಿ ಗಾಂಜಾ ವಿಸ್ತರಿಸಿಕೊಂಡಿದೆ. ಭದ್ರಾವತಿ, ಚನ್ನಗಿರಿ ಭಾಗದಿಂದ ಹಳ್ಳಿಗಳಿಗೆ ಬರುತ್ತಿದ್ದ ಸಣ್ಣಪುಟ್ಟ ಗಾಂಜಾ ಮಾರಾಟಗಾರರ ಸಂಖ್ಯೆ ದುಪ್ಪಟಾಗಿದೆ. 400-550 ರೂ.ಗೆ ಸಿಗುತ್ತಿದ್ದ ಒಂದು ಪ್ಯಾಕೆಟ್ ಗಾಂಜಾವನ್ನು 3 ಭಾಗ ಮಾಡಿ 100-150 ರೂ.ಗೆ ಒಂದರಂತೆ ಮಾರಾಟ ಮಾಡುತ್ತಿದ್ದಾರೆ. ಶಾಲಾ ಕಾಲೇಜು ತೊರೆಯುವ ಅಪ್ರಾಪ್ತ ಯುವಕರೆ ಬಹುಪಾಲು ಗಾಂಜಾ ಸೇವನೆಗೆ ದಾಸರಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಗ್ರಾಮಾಂತರದಲ್ಲಿ ನಡೆಯುವ ವಾರದ ಸಂತೆಗಳಂದೇ ಹೆಚ್ಚಿನ ಪ್ರಮಾಣದ ಗಾಂಜಾ ಮಾರಾಟವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net