ಹಳ್ಳಿಗಳ ಸಮಸ್ಯೆ ಏನೆಂದು ಗೊತ್ತು, ಸಚಿವ ಎಂಟಿಬಿ ನಾಗರಾಜ್ ಸಂಧಾನ ಯತ್ನ, ಮುಂದುವರಿದ ಎಂಎಸ್‌ಜಿಪಿ ವಿರುದ್ಧದ ಹೋರಾಟ

30dbp2
Published on

ದೊಡ್ಡಬಳ್ಳಾಪುರ: ಇಲ್ಲಿನ ಕೆಟ್ಟ ವಾತಾವರಣ, ಕಷ್ಟದ ಬದುಕಿನ ಬಗ್ಗೆ ಅರಿವಿದೆ. ಕಸದ ವೈಜ್ಞಾನಿಕ ವಿಲೇವಾರಿ ಮಾಡದ ಮಾಲೀಕನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮುಂದೆ ಯಾವುದೇ ಲೋಪ ಬರದಂತೆ ನೋಡಿಕೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಹಾಗೂ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಎಂಎಸ್‌ಜಿಪಿ ಕಸ ಘಟಕ ತೆರವುಗೊಳಿಸುವಂತೆ ಗುಂಡ್ಲಹಳ್ಳಿ ಕ್ರಾಸ್ ಬಳಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಮಂಗಳವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಮಾತನಾಡಿದರು.

ಇಲ್ಲಿನ ಕಸ ಸಮಸ್ಯೆ ಬಗ್ಗೆ ಸಿಎಂ ಗಮನಕ್ಕೆ ತಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಖುದ್ದು ಚರ್ಚಿಸಿ ಶಾಶ್ವತ ಪರಿಹಾರಕ್ಕೆ ಶ್ರಮಿಸಲಾಗುವುದು, ಸದ್ಯದ ಪರಿಸ್ಥಿತಿಯಲ್ಲಿ ಕಸದ ಲಾರಿಗಳಿಗೆ ಅನುವು ಮಾಡಿಕೊಡಿ, ಎಂಎಸ್‌ಜಿಪಿ ಘಟಕದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಲಿಖಿತ ಭರವಸೆ ಬೇಕು: ಶಾಶ್ವತ ಪರಿಹಾರದ ಬಗ್ಗೆ ಮೌಖಿಕ ಭರವಸೆ ಬೇಡ. ಲಿಖಿತವಾಗಿ ಭರವಸೆ ಕೊಡಿ ಎಂಬ ಆಗ್ರಹ ವ್ಯಕ್ತವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಎಂಟಿಬಿ, ಲಿಖಿತ ಭರವಸೆ ನಾನೊಬ್ಬನೇ ಕೊಡಲು ಬರುವುದಿಲ್ಲ. ಸರ್ಕಾರದ ಜತೆ ಚರ್ಚಿಸಿ ನೀಡಬೇಕಾಗುತ್ತದೆ. ಶೀಘ್ರ ಸಿಎಂ, ಸಚಿವರ ಜತೆ ಮಾತನಾಡುತ್ತೇನೆ ಎಂದರು.

ಆಯುಕ್ತರಿಂದ ತನಿಖೆ: ಬಿಬಿಎಂಪಿ ವಿಶೇಷ ಆಯುಕ್ತ ಗೌರವಗುಪ್ತ ಮಾತನಾಡಿ, ಘಟಕದ ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ನಗರದಲ್ಲಿ ಪ್ರತಿನಿತ್ಯ 4 ಸಾವಿರ ಟನ್ ಕಸ ಉತ್ಪತ್ತಿಯಾಗುತ್ತದೆ. ಇಲ್ಲಿಗೆ ಕೇವಲ 500 ಟನ್ ಬರುತ್ತಿದೆ. ಕೈಗಾರಿಕೆಗಳ ಕಸ ಮತ್ತು ಮೆಡಿಕಲ್ ತ್ಯಾಜ್ಯ ಬರುತ್ತಿಲ್ಲ. ಪ್ರತಿಭಟನಾಕಾರರು ತಿಳಿಸಿರುವ ಪ್ರತಿ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು, ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ತೆಗೆದುಕೊಳ್ಳಲಾಗುವುದು, ಮುಂದೆ ನಿಯಮ ಮೀರಿದರೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವುದು ಎಂದು ಭರವಸೆ ನೀಡಿದರು.

ಎಂಎಸ್‌ಜಿಪಿ ಘಟಕ ಸ್ಲೋ ಪಾಯಿಸನ್ ರೀತಿ ನಮ್ಮನ್ನು ದಿನೇದಿನೆ ಸಾಯಿಸುತ್ತಿದೆ. ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಘಟಕವನ್ನು ಮುಚ್ಚಲೇಬೇಕು. ಇಲ್ಲವಾದಲ್ಲಿ ಶಾಂತಿಯುತವಾಗಿ ಧರಣಿ ಮುಂದುವರಿಸಲಾಗುವುದು. ಸಾರಥಿ ಸತ್ಯಪ್ರಕಾಶ್, ಗೌರವಾಧ್ಯಕ್ಷ ನವ ಬೆಂಗಳೂರು ಹೋರಾಟ ಸಮಿತಿ ಚುನಾವಣೆ ಸಮಯದಲ್ಲಿ ಮತ ಕೇಳಲು ಹೋದಾಗ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರೂ ಎಂಎಸ್‌ಜಿಪಿ ಘಟಕ ಮುಚ್ಚುವಂತೆ ಕೇಳಿಕೊಂಡಿದ್ದರು. ಅವರಿಗೆ ನಾವು ಭರವಸೆ ನೀಡಿದ್ದೆವು. ಅದರಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದ್ದೆವು, ಆದರೆ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಅನಿರ್ದಿಷ್ಟಾವಧಿ ಹೋರಾಟ ಶುರು ಮಾಡಿದ್ದೇವೆ. ಸಿದ್ದಲಿಂಗಯ್ಯ, ಅಧ್ಯಕ್ಷ ಭಕ್ತರಹಳ್ಳಿ ಗ್ರಾಪಂ

ತಾರಕ್ಕೇರಿದ ಹೋರಾಟ: ಗುಂಡ್ಲಹಳ್ಳಿ ಕ್ರಾಸ್‌ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ, ಪ್ರತಿನಿತ್ಯ ಬಿಬಿಎಂಪಿ ಅಧಿಕಾರಿಗಳು, ಜಿಲ್ಲಾಧಿಕಾರಿ ಸೇರಿ ಸಂಬಂಧಪಟ್ಟ ಅನೇಕ ಅಧಿಕಾರಿಗಳು ಹೋರಾಟಗಾರರ ಮನವೊಲಿಸುವ ಪ್ರಯತ್ನಕ್ಕೆ ಲ ಸಿಗುತ್ತಿಲ್ಲ. ಮಂಗಳವಾರ ಖುದ್ದು ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಬಿಬಿಎಂಪಿ ವಿಶೇಷ ಆಯಕ್ತ ಗೌರವಗುಪ್ತ, ಜಂಟಿ ಆಯುಕ್ತ ಸರ್ಪರಾಜ್ ಮತ್ತಿತರ ಅಧಿಕಾರಿಗಳ ದಂಡೇ ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸ ನಡೆಸಿತು. ಆದರೆ ಘಟಕ ತೆರವುಗೊಳಿಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಸಂಧಾನ ಯತ್ನ ವಿಲವಾಗಿದ್ದು, ಹೋರಾಟ ಮತ್ತಷ್ಟು ತಾರಕ್ಕೇರುತ್ತಿದೆ.

ಚುನಾವಣೆ ಬಹಿಷ್ಕಾರ ಎಚ್ಚರಿಕೆ: ಘಟಕ ತೆರವುಗೊಳಿಸದಿದ್ದರೆ ಈ ಬಾರಿಯ ಎಂಎಲ್‌ಸಿ ಚುನಾವಣೆ ಬಹಿಷ್ಕರಿಸುವುದಾಗಿ 4 ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ನಿರ್ಧರಿಸಿರುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net