

ಕೆ.ಆರ್.ನಗರ: ಎಲ್ಲ ವಿಚಾರಕ್ಕೂ ರಾಜಕೀಯ ಬೆರೆಸುತ್ತಿರುವುದರಿಂದ ಹಳ್ಳಿಯ ಜನರಲ್ಲೂ ಶಾಂತಿ, ಸೌಹಾರ್ದತೆ ಇಲ್ಲದಂತಾಗಿದ್ದು, ರಾಜಕಾರಣ ಅವರ ಬದುಕನ್ನೇ ಹಾಳು ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆಯ ಡಾ.ರಾಜ್ ಸಾಂಸ್ಕೃತಿಕ ಬಾನಂಗಳದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನಾಗರಿಕ ವೇದಿಕೆಯಿಂದ ಭಾನುವಾರ ಏರ್ಪಡಿಸಿದ್ದ ಅಡಗೂರು ಹುಚ್ಚೇಗೌಡ ಮತ್ತು ರಾಮಮ್ಮ ದಂಪತಿ ದತ್ತಿ ಉಪನ್ಯಾಸ ಕಾರ್ಯಕ್ರಮ, ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜಕೀಯ ಕಾರಣಕ್ಕಾಗಿ ಹೊಂದಾಣಿಕೆ ಇಲ್ಲದ ಗ್ರಾಮೀಣ ಜನತೆ ಬೇಸಿಗೆ ಸಮಯದಲ್ಲಿ ಕಲಿಯುತ್ತಿದ್ದ ಪೌರಾಣಿಕ ನಾಟಕಗಳಿಗೂ ತಿಲಾಂಜಲಿ ಹೇಳಿದ್ದಾರೆ. ರಾಜಕೀಯ ಗ್ರಾಮೀಣ ಜನರ ನಡುವೆ ಬಿರುಕು ಮೂಡಿಸಿದೆ ಎಂದು ಹೇಳಿದರು.
ಈ ಹಿಂದೆ ಪುರಸಭೆ ವತಿಯಿಂದ ನಡೆಸುತ್ತಿದ್ದ ಇಲ್ಲಿನ ಪ್ರಥಮ ದರ್ಜೆ ಕಾಲೇಜನ್ನು ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ಕಾರಕ್ಕೆ ಸೇರಿಸಲಾಯಿತು. ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರದಲ್ಲಿ ಬಿಸಿಯೂಟ ಯೋಜನೆ ಜಾರಿಗೆ ತಂದಿದ್ದರಿಂದ ರಾಜ್ಯದಲ್ಲಿ ಸುಮಾರು 84 ಲಕ್ಷ ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇಂತಹ ನಾಯಕರನ್ನು ಜನತೆ ಸದಾ ಸ್ಮರಿಸಬೇಕು ಎಂದರು.
ರಾಜ್ಯ ಸರ್ಕಾರ 2.25 ಲಕ್ಷ ಕೋಟಿ ಬಜೆಟ್ ಮಂಡಿಸಲು ಎಸ್.ಎಂ.ಕೃಷ್ಣ ಅವರು ರಾಜ್ಯಕ್ಕೆ ಐಟಿಬಿಟಿ ತಂದಿದ್ದೇ ಕಾರಣವಾಗಿದ್ದರೂ ಇದನ್ನು ಅರಿಯದೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಸಿಎಂ ಬಸವರಾಜಬೊಮ್ಮಾಯಿ ಸೇರಿದಂತೆ ಈವರೆಗೆ ಬಜೆಟ್ ಮಂಡಿಸಿದವರು ತಮ್ಮದೇ ಹೆಚ್ಚು ಎಂದು ಹೇಳಿಕೊಳ್ಳುತ್ತಾರೆ ಹೊರತು ಕಾರಣರಾದವರನ್ನು ನೆನೆಯುವುದಿಲ್ಲ. ಇದಕ್ಕೆ ಕಲುಷಿತಗೊಂಡ ರಾಜಕಾರಣವೇ ಕಾರಣ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಟಿ.ಕೆ.ಚಿನ್ನಸ್ವಾಮಿ, ಬಿ.ಎಸ್.ತೋಂಟದಾರ್ಯ, ಪುರಸಭೆ ಅಧ್ಯಕ್ಷ ಸೈಯದ್‌ಸಿದ್ದಿಕ್, ಮಾಜಿ ಉಪಾಧ್ಯಕ್ಷ ಇಬ್ರತ್, ವಕೀಲ ಬಿ.ಕೆ.ಕೃಷ್ಣ ಅರಸ್, ವೈದ್ಯ ಡಾ.ಪಿ.ಮೋಹನ್‌ದಾಸ್‌ಭಟ್, ನಿವೃತ್ತ ಶಿಕ್ಷಕ ಎಚ್.ವೀರಪ್ಪ ಅವರನ್ನು ಸನ್ಮಾನಿಸಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಗೆರೆ ಗೋಪಾಲ್, ತಾಲೂಕು ಅಧ್ಯಕ್ಷ ಡಿಂಡಿಮಶಂಕರ್, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷರಾದ ವೈ.ಡಿ.ರಾಜಣ್ಣ, ಎಂ.ಚಂದ್ರಶೇಖರ್, ನವ ನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಪುರಸಭೆ ಸದಸ್ಯ ಕೆ.ಪಿ.ಪ್ರಭುಶಂಕರ್, ಮಾಜಿ ಸದಸ್ಯ ಸುಬ್ರಮಣ್ಯ, ಕಸಾಪ ಪದಾಧಿಕಾರಿಗಳಾದ ಉದಯಕುಮಾರ್, ಕೃಷ್ಣ, ಬಿ.ಎಲ್.ಮಹದೇವ್, ವೈ.ಎಸ್.ಕುಮಾರ್, ಭಾಸ್ಕರ್, ಮಧುವನಹಳ್ಳಿ ರಾಜು, ಸಿ.ವಿ.ಮೋಹನ್‌ಕುಮಾರ್, ಶಶಿಭೂಷಣ್ ಹಾಜರಿದ್ದರು.