

ಮಾರ್ಥಂಡ ಜೋಶಿ ಹಾರಕೂಡ
ಜಿಲ್ಲೆಯ ಅನೇಕ ಗ್ರಾಮಗಳ ಮೂಲ ಹೆಸರು ಬದಲಾಗಿದ್ದು, ಪುನಃ ಅವುಗಳ ಮೂಲ ಹೆಸರಿಗೆ ಬದಲಾವಣೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ, ಜಿಲ್ಲಾಡಳಿತಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಮ್ಮೇಳನ ಸವರ್ಾಧ್ಯಕ್ಷ ಎಸ್.ಎಂ. ಜನವಾಡಕರ್ ಒತ್ತಾಯಿಸಿದರು.
ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಮಠದ ಪರಿಸರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೀಯ ಭಾಷಣ ಮಾಡಿದ ಅವರು, ಪ್ರತಿಯೊಂದು ಸ್ಥಳದ ಹೆಸರು ಅಲ್ಲಿನ ಪ್ರಕೃತಿ, ಐತಿಹಾಸಿಕ ಹಾಗೂ ಚಾರಿತ್ರಿಕ ಘಟನೆಯಿಂದಲೋ ಅಥವಾ ಅಲ್ಲಿ ನೆಲೆಸಿದ ಇತಿಹಾಸ, ಪುರಾಣ ವ್ಯಕ್ತಿಗಳಿಂದಲೋ ಅಂಕಿತವಾಗಿರುತ್ತದೆ. ಹೀಗಾಗಿ ಜಿಲ್ಲೆಯ ಪ್ರತಿ ಊರು, ನಗರಕ್ಕೆ ಒಂದೊಂದು ಇತಿಹಾಸವಿದೆ. ಕಾಲಕ್ರಮೇಣ ಬಹುತೇಕ ಊರುಗಳಿಗೆ ಬೇರೆ ಹೆಸರು ಉತ್ಪತ್ತಿಯಾಗಿವೆ. ಹೀಗಾಗಿ ಆಯಾ ಗ್ರಾಮ, ನಗರಗಳಿಗೆ ಮೂಲ ಹೆಸರನ್ನೇ ನಾಮಕರಣ ಮಾಡಬೇಕು ಎಂದರು.
ಹಳ್ಳಿಖೇಡ(ಬಿ) ಗ್ರಾಮವನ್ನು ದೊಡ್ಡ ಹಳ್ಳಿಖೇಡ, ಹಳ್ಳಿಖೇಡ(ಕೆ) ಗ್ರಾಮವನ್ನು ಸಣ್ಣ ಹಳ್ಳಿಖೇಡ, ಹುಮನಾಬಾದ್ ವಿಜಯಸಿಂಹ ನಗರ, ಖಾನಾಪುರ ಅನ್ನು ಮೈಲಾರ ಹೀಗೆ ಜಿಲ್ಲೆಯ ಇತರ ಗ್ರಾಮ, ನಗರಗಳನ್ನು ಮೂಲ ಹೆಸರಿನಲ್ಲಿ ಮರು ನಾಮಕರಣ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಕರ್ಾರ, ಜಿಲ್ಲಾಡಳಿತದ ಮೇಲೆ ಕಸಾಪ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ಝರಿಗಳ ನಾಡು ಬೀದರ್. ಜಿಲ್ಲೆಯ ಸಣ್ಣ ಹಳ್ಳಿಖೇಡ, ಏಣಕೂರ, ಬೋರಾಳಗಳಲ್ಲಿ ಸ್ವಯಂ ಕಾರಂಜಿ ಕೊಳವೆ ಬಾವಿಗಳಿವೆ. ನರಸಿಂಹ ಝರಿ, ಪಾಪನಾಶ, ಗುರುನಾನಕ, ಶುಕ್ಲತೀರ್ಥ, ಮೈಲಾರ, ಸಾಧುಘಾಟ, ಬಸವತೀರ್ಥ, ಸಂಗಮೇಶ್ವರ, ಚಂಡಿಕಾಪುರ ಝರಿ, ಕೊಳ್ಳಗಳಂಥ ಅನೇಕ ಝರಿಗಳು ಇಲ್ಲಿವೆ. ಬೀದರ್ನಲ್ಲಿ ಪುರಾತನ ಕರೇಜ್ ವ್ಯವಸ್ಥೆ ಇದೆ. ಈ ಎಲ್ಲ ಜಲಮೂಲಗಳ ಯೋಜನಾಬದ್ಧ ರೀತಿಯಲ್ಲಿ ಬಳಕೆಗೆ ಸೌಕರ್ಯ ಕಲ್ಪಿಸಿದರೆ ನೀರಿನ ಬರ ಬರೋದೇ ಇಲ್ಲ ಎಂದು ಹೇಳಿದರು.
ಬೀದರ್ಗೆ ಈ ಹಿಂದೆ ವಿಧೂರನಗರ, ಬಿದಿರೂರು, ಬಿದಿರೂರುಪುರಾ, ಕೋಟೆ ಎಂಬ ನಾನಾ ಹೆಸರುಗಳಿಂದ ಕರೆಯಲಾಗುತ್ತಿತ್ತು. ಇದು ಜಗತ್ತಿನ ಅತಿ ಪುರಾತನ ನಗರ. ವಿವಿಧ ಉಲ್ಲೇಖ ಮತ್ತು ಶಾಸನಗಳನ್ನು ಗಮನಿಸಿದಾಗ ಬೀದರ್ ಜಿಲ್ಲೆ ಐತಿಹಾಸಿಕ, ಪುರಾತನ ಮತ್ತು ಪರಂಪರೆ ಹೊಂದಿದ್ದು, ವಿಶ್ವದಲ್ಲೇ ಐತಿಹಾಸಿಕವಾಗಿ ಗುರುತಿಸಿಕೊಂಡ ಜಿಲ್ಲೆಯಾಗಿದೆ ಎಂದರು.
ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯದಲ್ಲಿ ಹಿರಿಯ ಸಾಹಿತಿ ಬೆಂಗಳೂರಿನ ಸುಕನ್ಯಾ ಮಾರುತಿ ಉದ್ಘಾಟಿಸಿದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ಭಗವಂತ ಖೂಬಾ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಶಾಸಕ ರಾಜಶೇಖರ ಪಾಟೀಲ್ ಪುಸ್ತಕ ಮಳಿಗೆ ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಸೋಮನಾಥ ಯಾಳವಾರ ಪರಿಷತ್ ಧ್ವಜ ಹಸ್ತಾಂತರಿಸಿದರು.
ಕೆಎಸ್ಐಐಡಿಎಸ್ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಕಲಬುರಗಿ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ತಹಸೀಲ್ದಾರ್ ಸಾವಿತ್ರಿ ಸಲಗರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಾಜಕುಮಾರ ಸಿರಗಾಪುರ, ಪರಿಷತ್ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ, ಪ್ರಮುಖರಾದ ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಆಡೆ, ಬಾಬು ಹೊನ್ನಾನಾಯಕ, ಡಾ.ರಜನೀಶ್ ವಾಲಿ, ಪ್ರೊ.ಸಿದ್ರಾಮಪ್ಪ ಮಾಸಿಮಾಡೆ, ರಾಜೇಂದ್ರಕುಮಾರ ಗಂದಗೆ, ರಮೇಶ ಉಮ್ಮಾಪುರ, ರವೀಂದ್ರರಡ್ಡಿ ಮಾಲಿಪಾಟೀಲ್, ಮಲ್ಲಿನಾಥ ಹಿರೇಮಠ, ಚಂದ್ರಶೇಖರ ಬಿರಾದಾರ ಇತರರಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದಶರ್ಿ ಶಿವಕುಮಾರ ಕಟ್ಟೆ ಸ್ವಾಗತಿಸಿದರು. ರೇಣುಕಾ ಮಳ್ಳಿ ನಿರೂಪಣೆ ಮಾಡಿದರು.
ಜೀವನ ಸಾರ್ಥಕಕ್ಕೆ ಬೇಕು ಕನ್ನಡ ಸಂಸ್ಕೃತಿ
ಪ್ರತಿಯೊಬ್ಬರಲ್ಲಿ ಮಾತೃಭಾಷೆ ಕನ್ನಡದ ಸಂಸ್ಕೃತಿ, ಸಂಸ್ಕಾರ ಬಂದಾಗಲೇ ಜೀವನ ಸಾರ್ಥಕವಾಗುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಹೇಳಿದರು. ಸಾನ್ನಿಧ್ಯ ವಹಿಸಿದ್ದ ಅವರು, ಗೌರವ ಭಾವನೆಯನ್ನು ಕನ್ನಡ ಕಲಿಸಿಕೊಡುತ್ತದೆ. ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಂಡು ಜೀವನ ಸಾಗಿಸಬೇಕು. ವಿದೇಶಿಗರು ದೇವರಿಗಿಂತ ದೇಹವನ್ನು ಪ್ರೀತಿಸುತ್ತಾರೆ. ಆದರೆ ಭಾರತೀಯರು ದೇಹಕ್ಕಿಂತ ದೇವರು, ಧರ್ಮ, ಸಂಸ್ಕೃತಿಯನ್ನು ಪ್ರೀತಿಸುತ್ತಾರೆ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಜಗತ್ತಿನಲ್ಲಿಯೇ ಭಾರತೀಯ ಸಂಸ್ಕೃತಿ ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿದೆ. ಜೀವನದ ಪಾಠ, ಸನ್ಮಾರ್ಗದಲ್ಲಿ ನಡೆಯುವುದು ಹೇಗೆ ಎಂಬುದನ್ನು ನಮ್ಮ ಸಂಸ್ಕೃತಿ ತಿಳಿಸಿಕೊಡುತ್ತದೆ ಎಂದರು. 2003ರಲ್ಲಿ ಹಾರಕೂಡದಲ್ಲಿ ಜಿಲ್ಲಾ ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಆಗ ಇಲ್ಲಿಗೆ ಬರಲು ಸರಿಯಾದ ರಸ್ತೆ ಇರಲಿಲ್ಲ. 19 ವರ್ಷ ನಂತರ 19ನೇ ಸಮ್ಮೇಳನ ಶ್ರೀಮಠದಲ್ಲಿ ಆಯೋಜಿಸಿದ್ದು ಸಂತಸ ತಂದಿದೆ. ಅಧ್ಯಾತ್ಮ ಮತ್ತು ಸಾಹಿತ್ಯ ಸಮ್ಮೇಳನಗಳು ನಿತ್ಯ-ನಿರಂತರ ನಡೆಯಲಿ ಎಂದು ಆಶಿಸಿದರು. ಹಾರಕೂಡ ಮಠದ ಹಿರಿಯ ಪೂಜ್ಯ ಲಿಂ.ಚನ್ನಬಸವ ಶಿವಯೋಗಿಗಳು ಪೂಜೆ, ಜಪ-ತಪ ಮಾಡಿಕೊಂಡು ಮಠಕ್ಕೆ ಅಂಟಿಕೊಂಡಿರಲಿಲ್ಲ. ಧಾಮರ್ಿಕ ಜತೆಗೆ ಸಾಮಾಜಿಕ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಈ ಭಾಗದ ಜನರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಿದ್ದರು. ಅನೇಕ ಕವಿ, ಕಲಾವಿದರನ್ನು ಮಠಕ್ಕೆ ಬರಮಾಡಿಕೊಂಡು ಎಲೆಮರೆ ಕಾಯಿಯಂತೆ ಇದ್ದವರನ್ನು ಸಮಾಜಕ್ಕೆ ಪರಿಚಯಿಸಿದ ಖ್ಯಾತಿ ಪೂಜ್ಯರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.