ಹಳ್ಳಿಗಳ ಅಭಿವೃದ್ಧಿಗೆ ಆದ್ಯತೆ, ನಾರಾಯಣಪುರದಲ್ಲಿ ಎಂಎಲ್ಸಿ ಎಸ್.ರವಿ ಅಭಿಮತ, ಶಾಲಾ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ

30-vij-3a-gra pam upa kendra
Published on

ವಿಜಯಪುರ: ಗ್ರಾಮ ಪಂಚಾಯಿತಿಗಳಿಗೆ ಶಕ್ತಿ ತುಂಬಿ, ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಎಸ್.ರವಿ ಹೇಳಿದರು.

ಹೋಬಳಿಯ ನಾರಾಯಣಪುರದಲ್ಲಿ ಭಾನುವಾರ ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನ ಸಿಎಸ್‌ಆರ್ ನಿಧಿಯಲ್ಲಿ ಸರ್ಕಾರಿ ಶಾಲೆ ಕಟ್ಟಡ ಹಾಗೂ ಗ್ರಾಪಂ ಉಪಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ತಾಲೂಕಿನ ಕೆಲ ಪಂಚಾಯಿತಿಗಳು ಸದೃಢವಾಗಿವೆ. ಉಳಿದ ಪಂಚಾಯಿತಿಗಳಿಗೆ ಅನುದಾನದ ಮೂಲಗಳಿಲ್ಲದೆ ಸರ್ಕಾರದ ಅನುದಾನಗಳ ಮೇಲೆ ಅವಲಂಬಿತವಾಗಿದ್ದು, ಕೂಡಲೇ ಗ್ರಾಪಂಗಳಿಗೆ ಸ್ಟಾಂಪ್ ಡ್ಯೂಟಿ ಕೊಡಬೇಕು ಎಂದರು.

ಮನೆಗಳು ವಿತರಿಸಿಲ್ಲ: ಬಿಜೆಪಿ ಸರ್ಕಾರದಲ್ಲಿ ಬಡವರಿಗೆ ಮನೆಗಳು, ನಿವೇಶನ ಹಂಚಿಕೆ ಮಾಡುವ ಕಾರ್ಯಕ್ರಮಗಳೇ ಇಲ್ಲವಾಗದೆ. ಸರ್ಕಾರ ಅಸಂವಿಧಾನಿಕವಾಗಿ ಅಸ್ತಿತ್ವಕ್ಕೆ ಬಂದಾಗಿನಿಂದ ಒಂದು ಮನೆಯನ್ನೂ ಕೊಟ್ಟಿಲ್ಲ. ಕರೊನಾ ನೆಪದಲ್ಲಿ ಜನಪರವಾದ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಲಕ್ಷಾಂತರ ಮನೆ ಕೊಟ್ಟಿದ್ದೇವೆ. ಹಳ್ಳಿಗಳಲ್ಲಿ ಮನೆಗಳ ನಿರ್ಮಾಣಕ್ಕೆ ಹೆಚ್ಚಿನ ಬೇಡಿಕೆಯಿದ್ದರೂ ಕೂಡಾ ಕೇವಲ 20-30 ಮನೆಗಳನ್ನಷ್ಟೇ ಕೊಡುತ್ತಿದ್ದಾರೆ. ಈ ಮನೆಗಳನ್ನು ಕ್ಯಾಟಗೇರಿಯಂತೆ ವಿತರಣೆ ಮಾಡಬೇಕಾಗಿರುವುದರಿಂದ ಸಾಕಷ್ಟು ಮಂದಿ ಫಲಾನುಭವಿಗಳು ಸರ್ಕಾರದ ಸೌಲಭ್ಯ ಪಡೆಯುವಲ್ಲಿ ವಂಚಿತರಾಗಿದ್ದಾರೆ ಎಂದು ರವಿ ತಿಳಿಸಿದರು.

ರಾಜ್ಯದ ಬಡ ಜನರಿಗೆ ಹೆಚ್ಚು ಮನೆಗಳನ್ನು ಮಂಜೂರು ಮಾಡಬೇಕೆಂಬುದು ಸಚಿವ ವಿ.ಸೋಮಣ್ಣ ಅವರಿಗೆ ಮನಸ್ಸಿದ್ದರೂ ಅವರ ವೇಗಕ್ಕೆ ತಕ್ಕಂತೆ ಸರ್ಕಾರದಲ್ಲಿ ಬೆಂಬಲ ಸಿಗುತ್ತಿಲ್ಲ. ಈಗ ಕೊಟ್ಟಿರುವ ಮನೆಗಳಿಗೆ ಅನುದಾನ ಬಿಡುಗಡೆಯಾಗುತ್ತೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕು ಎಂದರು.

2023ಕ್ಕೆ ಕಾಂಗ್ರೆಸ್ ಅಧಿಕಾರ: ಬಿಜೆಪಿ ಶೇ.40 ಸರ್ಕಾರ ಎನ್ನುವುದು ಜಗಜ್ಜಾಹೀರಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು, ನಗರ ಸಂಸ್ಥೆಗಳ ಚುನಾವಣೆಗಳ ಫಲಿತಾಂಶ ನೋಡಿದಾಗ ಬಿಜೆಪಿ ಕ್ಷೀಣಿಸುತ್ತಿರುವುದು ಕಂಡು ಬರುತ್ತಿದೆ. 2023ಕ್ಕೆ ಖಚಿತವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಿಂದ ವಲಸೆ ಬರುವುದು ಸಹಜವಾಗುತ್ತದೆ. ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಬರುವವರಿಗೆ ಪಕ್ಷದ ನಾಯಕರು ಸದಾ ಬಾಗಿಲು ತೆರೆದಿದ್ದಾರೆ ಎಂದು ರವಿ ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಸದಸ್ಯ ಚಿನ್ನಪ್ಪ, ಬಿ.ಚೇತನ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ, ಪ್ರಸನ್ನಕುಮಾರ್, ಉಪಾಧ್ಯಕ್ಷ ಶಾಂತಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್, ಜಿಪಂ ಮಾಜಿ ಅಧ್ಯಕ್ಷ ಚನ್ನಹಳ್ಳಿ ರಾಜಣ್ಣ, ಸದಸ್ಯರಾದ ಜಿ.ಲಕ್ಷ್ಮೀನಾರಾಯಣಪ್ಪ, ಕೆ.ಸಿ.ಮಂಜುನಾಥ್, ಎಸ್.ಆರ್.ರವಿಕುಮಾರ್, ಚೈತ್ರಾ ವೀರೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net