

ಹಾಸನ : ಗ್ರಾಮೀಣ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸಮರ್ಪಕವಾಗಿ ಬಳಸುವುದರ ಮೂಲಕ ಹಳ್ಳಿಗಳ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಂತರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ನಡೆದ ಗ್ರಾಮ ಪಂಚಾಯಿತಿ ದೂರ ದೃಷ್ಠಿ ಯೋಜನೆಯ ಕುರಿತ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವು ಜನರಿಗೆ ಸಮರ್ಪಕವಾಗಿ ತಲುಪಿವೆಯೇ ಎಂಬುದನ್ನು ತಿಳಿಯಬೇಕಾದದ್ದು ಪ್ರಮುಖ ಅಂಶ ಎಂದರು.
ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಗಮನದಲ್ಲಿಟ್ಟಕೊಂಡು ಮುಂದಿನ ದಿನಗಳಲ್ಲಿ ಸಾಧಿಸಬೇಕಾಗಿರುವ ಗುರಿಗಳನ್ನು ನಿಗದಿಪಡಿಸಿ, ಅವುಗಳನ್ನು ಸಮುದಾಯದ ಭಾಗವಹಿಸುವಿಕೆಯೊಂದಿಗೆ ಕಾರ್ಯ ರೂಪಕ್ಕೆ ತರುವ ಯೋಜನೆಯೆ ದೂರ ದೃಷ್ಠಿ ಯೋಜನೆ ಎಂದರು.
ಇದೊಂದು 5 ವರ್ಷಗಳಿಗೆ ಯೋಜನೆ ರೂಪಿಸುವ ಘಟಕವಾಗಿದ್ದು, ಹಲವಾರು ಇಲಾಖೆಗಳಿಂದ ಬರುವ ಯೋಜನೆಗಳನ್ನು ದೂರ ದೃಷ್ಠಿ ಯೋಜನೆಯಲ್ಲಿ ಕಾಣಬಹುದು. ದೂರ ದೃಷ್ಠಿ ಚಿಂತನೆ ಹಾಗೂ ಆದ್ಯತೆಗಳಿಗೆ ಹೆಚ್ಚು ಒತ್ತು ನೀಡಿ ಉತ್ತಮವಾದ ಯೋಜನೆಯನ್ನು ರೂಪಿಸಿ ಸಮಾಜದ ಏಳಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಡತನ ಮುಕ್ತ, ಆರೋಗ್ಯಯುತ, ಮಕ್ಕಳ ಸ್ನೇಹಿ, ಜಲ ಸಮೃದ್ಧಿ, ಹೀಗೆ ಒಟ್ಟು 17 ಸುಸ್ಥಿರ ಅಭಿವೃದ್ಧಿಗೆ ಗುರಿಗಳನ್ನು ಈ ಯೋಜನೆ ಹೊಂದಿದ್ದು, ಯೋಜನೆಗಳನ್ನು ರೂಪಿಸುವುದು ,ಅನುಷ್ಠಾನಗೊಳಿಸುವುದು, ಮೇಲ್ವಿಚಾರಣೆ ಹಾಗೂ ಮೂಲ್ಯಮಾಪನ ಮಾಡುವುದನ್ನು ಗ್ರಾಮ ಸಭೆಗೆ ನೀಡಲಾಗಿದೆ ಎಂದು ತಿಳಿಸಿದರು.
ಡಾ. ಗಣೇಶ್, ಡಾ. ಸಿ.ಹೆಚ್ ವಸುಂದರಾ ದೇವಿ, ದೀಪ ಎನ್, ರವರಿಂದ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಯೋಜನೆಯ ಉದ್ದೇಶ, ಯೋಜನೆಯ ತಯಾರಿಕೆಯ ಪ್ರಕ್ರಿಯೆ, ಯೋಜನೆಯ ಸಿದ್ಧಪಡಿಸುವ ಹಂತಗಳ ಕುರಿತು ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ನಿರ್ದೇಶಕ ಪರಪ್ಪಸ್ವಾಮಿ ಇತರರು ಇದ್ದರು.