

ಔರಾದ್: ಕಂದಾಯ ಇಲಾಖೆ ನಡೆ ಹಳ್ಳಿಗಳ ಕಡೆ ಗ್ರಾಮ ವಾಸ್ತವ್ಯ ಶನಿವಾರ ತಾಲೂಕಿನ ವಡಗಾಂವ (ದೇ) ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಎಲ್ಲ ಇಲಾಖೆಗಳ ತಾಲೂಕು ಅಧಿಕಾರಿಗಳ ಸಮ್ಮುಖ ತಹಸೀಲ್ದಾರ್ ಚಂದ್ರಶೇಖರರಾವ್ ಅವರು ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಹಲವು ದೂರುಗಳಿಗೆ ಸ್ಥಳದಲ್ಲೇ ಸ್ಪಂದಿಸಿದರು.
ಗ್ರಾಮದ ವಿವಿಧೆಡೆ ಸಂಚರಿಸಿ ಸ್ಥಿತಿಗತಿ ಖುದ್ದು ಅವಲೋಕಿಸಿದ ಅಧಿಕಾರಿಗಳು, ಕೆಲ ಸಮಸ್ಯೆಗಳಿಗೆ ಆಗಿಂದಾಗ್ಗೆ ಪರಿಹಾರ ನೀಡಿದರು. ವಡಗಾಂವದಲ್ಲಿ ಸರ್ಕಾರಿ ಪಿಯು ಕಾಲೇಜು ಸ್ಥಾಪನೆ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚುವರಿ ಆರೋಗ್ಯ ಅಧಿಕಾರಿಗಳ ನೇಮಕ, ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸ್ಥಳೀಯರು ಮಂಡಿಸಿದರು.
ಸ್ಥಳೀಯರಿಂದ ಅರ್ಜಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಚಂದ್ರಶೇಖರರಾವ್, ಪ್ರತಿ ಇಲಾಖೆಗಳ ಅಧಿಕಾರಿಗಳು ತಾವಿರುವ ಗ್ರಾಮದಲ್ಲಿಗೆ ಬಂದು ಸಮಸ್ಯೆ ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಶಿಕ್ಷಣ ಚಿಂತಕ ಮಲ್ಲಪ್ಪ ನೇಳಗೆ ಮಾತನಾಡಿ, ಹೋಬಳಿ ಮಟ್ಟದಲ್ಲಿ ಅಧಿಕಾರಿಗಳು ವಾಸ್ತವ್ಯ ಮಾಡಿ, ಸ್ಥಳೀಯರ ಸಮಸ್ಯೆಗಳು ಆಲಿಸಿ ಸ್ಥಳದಲ್ಲೇ ಪರಿಹಾರ ನೀಡುತ್ತಿರುವುದು ಉತ್ತಮ ಕಾರ್ಯ. ಜನರಿಗೆ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಮತ್ತು ಅಧಿಕಾರಿಗಳ ಜತೆಯಲ್ಲಿ ಸ್ನೇಹಜೀವಿಯಾಗಿ ಕೆಲಸ ಮಾಡಲು ಸರ್ಕಾರದ ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದರು.
ಗ್ರೇಡ್ 2 ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಉಪ ತಹಸೀಲ್ದಾರ್ ರಮೇಶ ಪಾಂಚಾಳ, ಕಂದಾಯ ನಿರೀಕ್ಷಕ ಬಾಲಾಜಿ ನಾಯಕವಾಡೆ, ತಾಪಂ ಇಒ ಮಾಣಿಕರಾವ ಪಾಟೀಲ್, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಆರ್ ಎಫ್ ಒ ಪ್ರೇಮಶೇಕರ, ಉಪವಲಯ ಅರಣ್ಯಾಧಿಕಾರಿ ರಾಜಶೇಖರ, ಸಿಪಿಐ ರವೀಂದ್ರ, ಪಿಎಸ್ಐ ಪ್ರಭಾಕರ ಪಾಟೀಲ್, ಟಿಎಚ್ಒ ಡಾ.ಶರಣಯ್ಯ ಸ್ವಾಮಿ, ಡಾ.ಸಿದ್ದರೆಡ್ಡಿ, ಜೆಸ್ಕಾಂ ಎಇಇ ರವಿಕುಮಾರ ಕಾರಬಾರಿ, ಎಪಿಎಂಸಿ ಕಾರ್ಯದರ್ಶಿ ಮರಿಬಸಪ್ಪ, ಮಲ್ಲಪ್ಪ ನೇಳಗೆ, ರಾಜಕುಮಾರ ಹೇಡೆ, ಗ್ರಾಪಂ ಅಧ್ಯಕ್ಷೆ ತ್ರಿಶೂಲಾಬಾಯಿ, ಉಪಾಧ್ಯಕ್ಷ ಶಿವರಾಜ ಡೆಂಪೆ, ಶಿಕ್ಷಣ ಇಲಾಖೆಯ ಜಗದೀಶ, ಅರ್ಷದ್, ಪಿಡಿಒ ಅನೀಲಕುಮಾರ, ಹಮೀದ್ ಅಲಿ, ಶಿಲ್ಪಾ, ನಕುಶಾ, ವಿಮಲಾ, ಬಾಲಿಕಾ, ಯುವರಾಜ, ಸಂಗಮೇಶ, ವಿಶ್ವನಾಥ ಇತರರಿದ್ದರು.
ಅಧಿಕಾರಿಗಳ ತಂಡ ಹಾಜರ್
ಕಾರ್ಯಕ್ರಮದಲ್ಲಿ ಪಹಣಿ ತಿದ್ದುಪಡಿ, ವಿವಿಧ ಯೋಜನೆಗಳ ಪಿಂಚಣಿ ಮಂಜೂರಿ ಆದೇಶ ಪತ್ರ, ಚುನಾವಣಾ ಗುರುತಿನ ಚೀಟಿ, ಪೌತಿ ಖಾತೆ ವಿಲೇವಾರಿಗೊಳಿಸಲಾಯಿತು. ಹಲವು ಫಲಾನುಭವಿಗಳಿಗೆ ಪಿಂಚಣಿ ಮಂಜೂರಿ ಪತ್ರಗಳನ್ನು ಸಹ ವಿತರಿಸಲಾಯಿತು. ಗ್ರಾಮ ವಾಸ್ತವ್ಯದಲ್ಲಿ ಅರಣ್ಯ, ಆರೋಗ್ಯ, ಪೊಲೀಸ್, ಅಗ್ನಿಶಾಮಕ ಮತ್ತು ಅಬಕಾರಿ, ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಕೃಷಿ, ತೋಟಗಾರಿಕೆ, ಕಂದಾಯ, ಪಂಚಾಯತ್ ರಾಜ್, ಜೆಸ್ಕಾಂ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಈ ವೇಳೆ ಹಾಜರಿದ್ದು, ಜನರ ಅಹವಾಲುಸ್ವೀಕರಿಸಿದರು.