ಹಳ್ಳಿ ಸಮರ ತಯಾರಿ ಚುರುಕು

gp election meeting
Published on

ಬೀದರ್: ಗ್ರಾಮ ಪಂಚಾಯಿತಿ ಚುನಾವಣೆಗೆ ಆಯೋಗ ಮುಹೂರ್ತ ಫಿಕ್ಸ್ ಮಾಡುತ್ತಿದ್ದಂತೆ, ಜಿಲ್ಲಾಡಳಿತ ಹಳ್ಳಿ ಸಮರ ತಯಾರಿ ಕಾರ್ಯ ಚುರುಕುಗೊಳಿಸಿದೆ. ಚುನಾವಣೆ ಘೋಷಣೆ ಬೆನ್ನಲ್ಲೇ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.

ಎಲ್ಲ ಅಧಿಕಾರಿಗಳು ತುರ್ತಾಗಿ ಚುನಾವಣೆ ಸಿದ್ಧತೆ ಮಾಡಿಕೊಳ್ಳಬೇಕು. ಚುನಾವಣೆ ಕಾನೂನುಬದ್ಧವಾಗಿ ನಡೆಸುವ, ಅಧಿಕಾರಿಗಳಿಗೆ ವಿವಿಧ ಕಾರ್ಯಹಂಚಿಕೆ ಕೆಲಸ ಬೇಗ ನಡೆಯಬೇಕು. ರಾಜ್ಯ ಚುನಾವಣಾ ಆಯೋಗ ಹೊರಡಿಸಿದ ನಿಯಮಾನುಸಾರ ಚುನಾವಣೆಯು ಮುಕ್ತ, ನ್ಯಾಯಸಮ್ಮತ, ಶಾಂತಿಯುತ ನಡೆಸಲು ನೋಡಿಕೊಳ್ಳಬೇಕು. ಈ ವಿಷಯದಲ್ಲಿ ಉದಾಸೀನತೆ, ನಿರ್ಲಕ್ಷೃತೆ ಸಹಿಸಲಾಗುವುದಿಲ್ಲ ಎಂದರು.

ಚುನಾವಣೆಗೆ ಸಂಬಂಧಪಟ್ಟಂತೆ ವಿವಿಧ ಸಮಿತಿಗಳ ರಚನೆ ಮತ್ತು ನೋಡಲ್ ಅಧಿಕಾರಿಗಳ ನೇಮಕ ತಕ್ಷಣ ಆಗಬೇಕು. ಚುನಾವಣೆ ಸಂಪೂರ್ಣ ಮೇಲುಸ್ತುವಾರಿ ಸಮರ್ಪಕ ನೋಡಿಕೊಳ್ಳುವುದು ಮತ್ತು ಇದಕ್ಕೆ ಸಕಾಲಕ್ಕೆ ಸಹಕರಿಸುವಂತೆ ಸಂಬಂಧಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಸಬೇಕು. ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳಿಗೆ ಡಿ.4ರಂದು ತರಬೇತಿಗೆ ಮತ್ತು ಪೊಲೀಂಗ್ ಆಫೀಸರ್ ಗಳಿಗೂ ಮಾಸ್ಟರ್ ಟ್ರೇನರ್ ತರಬೇತಿ ಕೂಡಲೆ ಒಂದು ಹಂತದಲ್ಲಿ ನೀಡಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರು.

ಬೇರೆಡೆ ವರ್ಗಾವಣೆಯಾದ ಮತ್ತು ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲ ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ, ತಾಲ್ಲೂಕಾ ಮಟ್ಟದ ನೋಡೆಲ್ ಅಧಿಕಾರಿಗಳ ಬದಲಾವಣೆ ಪ್ರಕ್ರಿಯೆ ಕೂಡಲೇ ನಡೆಸುವಂತೆ ತಿಳಿಸಿದರು.

ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಅವರು ನೀತಿ ಸಂಹಿತೆ ಕಟ್ಟುನಿಟ್ಟಿನ ಪಾಲನೆ ಕುರಿತು ಅಧಿಕಾರಿಗಳಿಗೆ ನಿರ್ದೇಶನಗಳು ನೀಡಿದರು. ಹೆಚ್ಚುವರಿ ಎಸ್ಪಿ ಡಾ.ಗೋಪಾಲ ಬ್ಯಾಕೋಡ್, ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ್, ಭುವನೇಶ ಪಾಟೀಲ್, ತಹಸೀಲ್ದಾರ್ ಗಂಗಾದೇವಿ ಮಾಸ್ಟರ್ ಟ್ರೇನರ್ ಡಾ. ಗೌತಮ ಅರಳಿ ಇತರರಿದ್ದರು.

ಮೊದಲ ಹಂತದಲ್ಲಿ ಬಸವಕಲ್ಯಾಣ, ಹುಲಸೂರ, ಹುಮನಾಬಾದ್, ಚಿಟಗುಪ್ಪ, ಭಾಲ್ಕಿ ಮತ್ತು ಎರಡನೇ ಹಂತದಲ್ಲಿ ಬೀದರ್, ಔರಾದ್ ಹಾಗೂ ಕಮಲನಗರ ತಾಲೂಕುಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಮುಕ್ತ, ನ್ಯಾಯಸಮ್ಮತದ ಜತೆಗೆ ಕರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಬೇಕು.| ರಾಮಚಂದ್ರನ್, ಡಿಸಿ ಮತ್ತು ಜಿಲ್ಲಾ ಚುನಾವಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net