

ಕಾನಹೊಸಹಳ್ಳಿ: ಕಳೆದೊಂದು ತಿಂಗಳಿಂದ ಕಾನಹೊಸಹಳ್ಳಿ, ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿದ್ದು, ಮಳೆ ನೀರು ಸಂಗ್ರಹವಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಬಣವಿಕಲ್ಲು ಗ್ರಾಮದಿಂದ ಕೊಟ್ಟೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಗಳಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಕಸ್ತೂರ್ ಬಾ ಬಾಲಕಿಯರ ವಸತಿ ಶಾಲೆಗೆ ಹೋಗಲು ಪ್ರಯಸ ಪಡುವಂತಾಗಿದೆ. ಗುಡೇಕೊಟೆ ಗ್ರಾಮದಿಂದ ರಾಮಸಾಗರಹಟ್ಟಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು ಜನರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.
ಯಂಬಳಿವಡ್ಡರಹಟ್ಟಿಯಿಂದ ಕೆಂಚಮಲ್ಲನಹಳ್ಳಿ, ಹುರುಳಿಹಾಳ್‌ದಿಂದ ತಮ್ಮಯ್ಯನಗುಡ್ಡ ಸಂಪರ್ಕಿಸುವ ರಸ್ತೆ, ಶಾಂತನಹಳ್ಳಿಯಿಂದ ನಿಂಬಳಗೆರೆಗೆ ಹೋಗುವ ರಸ್ತೆ, ಬಯಲುತುಂಬರಗುದ್ದಿಯಿಂದ ರಂಗನಾಥನಹಳ್ಳಿ ನಡುವಿನ ರಸ್ತೆ, ಹುಲಿಕುಂಟೆಯಿಂದ ಅರ್ಜುನ ಚಿನ್ನಹಳ್ಳಿವರಿಗಿನ ರಸ್ತೆ ಹಾಗೂ ಅರ್ಜುನಚಿನ್ನಹಳ್ಳಿಯಿಂದ ಸಿಡೇಗಲ್ಲು ಮತ್ತು ಯರ‌್ರಯೋಬನಹಟ್ಟಿವರಿಗಿನ ರಸ್ತೆ ಸಂಪೂರ್ಣ ಹಾಳಾಗಿದೆ.
ಆರು ಕೋಟಿ ರೂ. ವೆಚ್ಚದ ಕಾನಹೊಸಹಳ್ಳಿಯಿಂದ ರಂಗನಾಥನಹಳ್ಳಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿ ಅರು ತಿಂಗಳು ಕಳೆದಿದ್ದು, ಈವರೆಗೂ ಪೂರ್ಣಗೊಂಡಿಲ್ಲ. ಕಳೆದೊಂದು ತಿಂಗಳಿಂದ ಕಾಮಗಾರಿ ನಡೆದಿಲ್ಲ.