

| ಸ.ದಾ.ಜೋಶಿ ದೇವತ್ಕಲ್ (ಯಾದಗಿರಿ)
ಓ ಅಣ್ಣಾ ಬನ್ನಿ ಈ ಕಡೆ. ಓ ಅಮ್ಮಾ, ಬಾ ಅಮ್ಮಾ. ಏನಿದೆ ಹೇಳಿ? ನಿಮ್ಮ ಸಮಸ್ಯೆ ಕೇಳಿ ಪರಿಹಾರ ಮಾಡುವುದಕ್ಕಾಗಿಯೇ ನಾನಿಲ್ಲಿಗೆ ಬಂದಿದ್ದೇನೆ. ನಿಮಗೇನಾದರೂ ತೊಂದರೆ ಇದ್ದರೆ ನಿಸ್ಸಂಕೋಚವಾಗಿ ಹೇಳಿ. ದಿನವಿಡೀ ನಿಮ್ಮ ಜತೆಯಲ್ಲಿರುವೆ. ನಿಮ್ಮೂರ ಶಾಲೆಯಲ್ಲೇ ಮಲಗುವೆ. ಬೆಳಗ್ಗೆ ಎದ್ದು ದಲಿತರ ಕೇರಿಗೆ ಹೋಗಿ ಅವರೇ ಮಾಡಿದ ತಿಂಡಿ ತಿಂದು ಇಲ್ಲಿಂದ ಹೊರಡುವೆ. ಬಿಜೆಪಿ ಸರ್ಕಾರ ಅಂದರೆ ಜನರ, ಜನಪರ ಸರ್ಕಾರ. ಆಡಳಿತವನ್ನೇ ನಿಮ್ಮ ಮನೆ ಬಾಗಿಲಲ್ಲಿ ನಿಲ್ಲಿಸಿದ್ದೇವೆ. ಇದರ ಸದ್ಬಳಕೆ ಮಾಡಿಕೊಳ್ಳಿ, ನಮಗೂ ಆಶೀರ್ವದಿಸಿ...
ಕಂದಾಯ ಸಚಿವ ಆರ್.ಅಶೋಕ್ ಅವರ ಕಳಕಳಿ ಮನವಿಯ ಪರಿ ಇದು. ಶನಿವಾರ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪುಟ್ಟ ಹಳ್ಳಿ ದೇವತ್ಕಲ್ಗೆ ಗ್ರಾಮ ವಾಸ್ತವ್ಯಕ್ಕಾಗಿ ಆಗಮಿಸಿದ ಅವರು, ಸುದೀರ್ಘ ಅವಧಿ ಗ್ರಾಮಸ್ಥರೊಂದಿಗೆ ಬೆರೆತು ಖುಷಿಯಲ್ಲಿ ಮಿಂದೆದ್ದರು. ಸ್ಥಳೀಯರ ದೂರು ಆಲಿಸಿ, ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು. ಬಿಜೆಪಿ ಸರ್ಕಾರಗಳ ಸಾಧನೆ, ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಎಲ್ಲ ಜಾತಿ, ವರ್ಗದ ಹಿತದೃಷ್ಟಿಯಿಂದ ಬಿಜೆಪಿ ಸರ್ಕಾರದ ಅಗತ್ಯತೆ, ಅನಿವಾರ್ಯತೆ ಮನಮುಟ್ಟುವಂತೆ ತಿಳಿಸಿದರು.
ದೇವತ್ಕಲ್ ಗ್ರಾಮಸ್ಥರ ಪಾಲಿಗೆ ಇಂದು ಅಶೋಕ್ ಅವರು ಸಂಪುಟದ ಪ್ರಭಾವಿ ಸಚಿವರಾಗಿರಲಿಲ್ಲ. ಬದಲಾಗಿ ತಮ್ಮೂರಿನವರೊಬ್ಬ ಕಾಮನ್ ಮ್ಯಾನ್ ಆಗಿದ್ದರು. ಯಾವುದೇ ಹಮ್ಮು-ಬಿಮ್ಮು ಇಲ್ಲದೆ ನಯ, ವಿನಯ, ಸೌಜನ್ಯತೆಯೊಂದಿಗೆ ಗ್ರಾಮಸ್ಥರ ಜತೆಗೆ ಬೆರೆತು ಸರಳ ವ್ಯಕ್ತಿತ್ವದ ಪರಿಚಯವನ್ನೇ ಮಾಡಿಕೊಟ್ಟರು. ತೆಲೆಗೊಂದು ರುಮಾಲು ಕಟ್ಟಿಕೊಂಡು ಪಕ್ಕಾ ರೈತನಂತೆ ಕಾಣುತ್ತಿದ್ದರು. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಟೀಮ್ೊಂದಿಗೆ ಗ್ರಾಮದ ವಿವಿಧೆಡೆ ಸುತ್ತಾಡಿದರು. ಕೈಮುಗಿದು ನಮಸ್ಕರಿಸಿ ಹೇಗಿದ್ದೀರಿ? ಎಂದು ಕುಶಲೋಪರಿ ವಿಚಾರಿಸಿದರು. ಹೋಟೆಲ್ಗೆ ತೆರಳಿ ಚಹಾ ಕುಡಿದು, ಚಾಯ್ ಪೇ ಚರ್ಚಾ ನಡೆಸಿದರು. ಚುಡುವಾ ಟೇಸ್ಟ್ ನೋಡಿದರು. ಜನರೊಂದಿಗೆ ಒಂದಿಷ್ಟು ಹರಟೆಯನ್ನೂ ಹೊಡೆದರು. ಸಿಎಂ ಬಸವರಾಜ ಬೊಮ್ಮಾಯಿ ಅವರು ಸುರಪುರ ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ 1060 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿದ ಬಳಿಕ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಚಟುವಟಿಕೆ ಆರಂಭವಾದವು. ಮಧ್ಯಾಹ್ನ 3ರಿಂದ ಅಶೋಕ್ ಊರಿನವರೊಂದಿಗೆ ಸಮಯ ಕಳೆದರು. ಸರ್ಕಾರಿ ಶಾಲೆಯ ಪ್ರಯೋಗಾಲಯಕ್ಕೆ ತೆರಳಿ ವಿದ್ಯಾರ್ಥಿಗಳೊಂದಿಗೆ ರ್ಚಚಿಸಿದರು. ಮಕ್ಕಳ ಪ್ರ್ಯಾಕ್ಟಿಕಲ್ ಪ್ರತಿಭೆ ಕಂಡು ಭೇಷ್ ಎಂದು ಬೆನ್ನು ತಟ್ಟಿದರು. ಕೆಲಕಾಲ ಮೇಷ್ಟ್ರು ಆಗಿ ಮಕ್ಕಳಿಗೆ ಸಾಧನೆ ಪಾಠ ಹೇಳಿದರು. ದೊಡ್ಡ ಗುರಿ ಹೊಂದಿ, ಶ್ರೇಷ್ಠ ಸಾಧಕರಾಗುವಂತೆ ಕನಸು ತುಂಬಿದರು. ತಡರಾತ್ರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಚಾಪೆ ಮೇಲೆ ನಿದ್ರೆಗೆ ಜಾರುವವರೆಗೂ ಶಾಸಕ ನರಸಿಂಹ ನಾಯಕ (ರಾಜುಗೌಡ), ಡಿಸಿ ಡಾ.ರಾಗ್ರಪ್ರಿಯ ಜತೆಗೂಡಿ ಸ್ಥಳೀಯರ ಜತೆಗೆ ಭಾರಿ ಉತ್ಸಾಹದಿಂದ ಸುತ್ತಾಡಿದರು. ಕಲ್ಯಾಣ ನಾಡಿನ ಗ್ರಾಮ ವಾಸ್ತವ್ಯ ಖುಷಿ ತಂದಿದೆ. ಇನ್ನಷ್ಟು ಕೆಲಸ ಮಾಡುವ ಶಕ್ತಿ ತುಂಬಿದೆ ಎಂದು ಅಶೋಕ್ ಹೇಳಿದರು.
ಆಡಳಿತದಲ್ಲಿ ಪಾರದರ್ಶಕತೆ ತರುವ ಜತೆಗೆ ಜನರಿಗೆ ಸರ್ಕಾರದ ಸಹಾಯ, ಸೌಲಭ್ಯ ಸರಳ ಕಲ್ಪಿಸಬೇಕೆಂಬುದು ನಮ್ಮ ಧ್ಯೇಯ. ಗ್ರಾಮ ವಾಸ್ತವ್ಯದ ಮೂಲಕ ವಾಸ್ತವ ತಿಳಿದು ಅದಕ್ಕೆ ಸ್ಪಂದಿಸಲಾಗುತ್ತಿದೆ. ಮನೆ ಬಾಗಿಲಿಗೆ ಕಂದಾಯ ಇಲಾಖೆ ಸೇವೆ ಒಯ್ದಿರುವುದು ಚಾರಿತ್ರಿಕ ಕೆಲಸ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ದೇಶದಲ್ಲಿ ದೊಡ್ಡ ಪರಿವರ್ತನೆ ಕಾಣಲಾಗುತ್ತಿದೆ. ರಾಜ್ಯದಲ್ಲೂ ಕಂದಾಯ ಇಲಾಖೆಯಲ್ಲಿನ ಕ್ರಾಂತಿಕಾರಕ ಬದಲಾವಣೆಗೆ ಸಿಎಂ ಬಸವರಾಜ ಬೊಮ್ಮಾಯಿ ಕಾರಣ. | ಆರ್.ಅಶೋಕ್ ಕಂದಾಯ ಸಚಿವ
ಮಕ್ಕಳೊಂದಿಗೆ ಹೆಜ್ಜೆ ಹಾಕಿದರು: ಆರ್. ಅಶೋಕ್ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಮಕ್ಕಳೊಂದಿಗೆ ಹೆಜ್ಜೆ ಹಾಕಿ ಅವರಿಗೆ ಪ್ರೋತ್ಸಾಹಿಸಿದರು. ಬಂಜಾರಾ ನೃತ್ಯ ನಡೆಯುತ್ತಿದ್ದ ವೇಳೆ ಸಚಿವರು ಮಸ್ತ್ ಸ್ಟೆಪ್ ಹಾಕಿದರು. ಶಾಸಕ ನರಸಿಂಹ ನಾಯಕ ಆರಂಭದಲ್ಲಿ ಸ್ವತಃ ಡೊಳ್ಳು ಬಾರಿಸಿ ಗಮನ ಸೆಳೆದರು. ಹತ್ತಾರು ಕಲಾ ತಂಡಗಳು ಮೂರು ಗಂಟೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಜನರನ್ನು ರಂಜಿಸಿದವು. ಪೂಜಾ ಕುಣಿತ, ಕರಡಿ ಮಜಲು, ಡೊಳ್ಳು ಕುಣಿತ, ತಮಟೆ ವಾದನ ಹೀಗೆ ಹತ್ತಾರು ಪ್ರಕಾರಗಳನ್ನು ಪ್ರದರ್ಶಿಸಲಾಯಿತು. ಸಚಿವರು ಎಲ್ಲವನ್ನೂ ವೀಕ್ಷಣೆ ಮಾಡಿದರು. ಗುರುರಾಜ ಹೊಸಕೋಟೆ ಅವರ ಜಾನಪದ ಗಾಯನ ಸಂಗೀತ ಲೋಕದಲ್ಲಿ ತೇಲಾಡಿಸಿತು. ನಾನು ನಿಮ್ಮ ಸೇವಕ: ಅಶೋಕ್ ಅವರ ಸರಳತೆ ಕಂಡು ಜನತೆ ಫಿದಾ ಆದರು. ನಮ್ಮೂರಿಗೆ ಸಚಿವರೊಬ್ಬರು ಬಂದು ಇಷ್ಟು ಸರಳವಾಗಿ ನಮ್ಮ ಜತೆ ಬೆರೆತಿರುವುದು ಇದೇ ಮೊದಲು. ಈ ದಿನ ನಿಜಕ್ಕೂ ನಮ್ಮೂರ ಪಾಲಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು ಎಂದು ಸ್ಥಳೀಯರಾದ ಶಿವರಾಮ,ನಾಗಮ್ಮ, ಭೀಮಪ್ಪ ಉದ್ಗರಿಸಿದರು. ಇದಕ್ಕೆ ಪ್ರತಿಯಾಗಿ ಅಶೋಕ್ ಊರವರ ಪ್ರೀತಿ, ಪ್ರೇಮ, ಅಭಿಮಾನಕ್ಕೆ ಮಾರು ಹೋದರು. ಇಲ್ಲಿ ಸಿಕ್ಕ ಆತಿಥ್ಯ ಜೀವನಪರ್ಯಂತ ಮರೆಯಲಾರೆ. ನಾನು ಮಂತ್ರಿ ಅಲ್ಲ, ನಿಮ್ಮ ಸೇವಕ. ನಿಮ್ಮ ಕೆಲಸಕ್ಕೆ ಸದಾ ಸಿದ್ಧನಿರುವೆ. ಬೆಂಗಳೂರಿಗೆ ಬಂದಾಗ ನೇರ ನನ್ನನ್ನು ಸಂರ್ಪಸಿ. ನಿಮ್ಮ ಸಮಸ್ಯೆ ಏನಿದ್ದರೂ ಪರಿಹರಿಸುವೆ ಎಂದು ಅಭಯ ನೀಡಿದರು. ಜನತೆ ಅಲೆದಾಡದೆ, ಇರಲೆಂದು ಕಂದಾಯ ದಾಖಲೆಗಳನ್ನು ನಿಮ್ಮ ಮನೆ ಬಾಗಿಲಿಗೆ ತಂದುಕೊಡುತ್ತಿದ್ದೇನೆ. ಇದು ನಿಮ್ಮ ಸರ್ಕಾರ ನೀವು ಬಯಸಿದಂತೆ ನಡೆಯುವ ಸರ್ಕಾರ. ನಿಮ್ಮ ಸರ್ಕಾರಕ್ಕೆ ನಿಮ್ಮ ಶ್ರೀರಕ್ಷೆ, ಆಶೀರ್ವಾದ ಇರಲಿ ಎಂದು ಕೋರಿದರು.
ನನಗೆ ಈ ವೃದ್ಧಾಪ್ಯದಲ್ಲಿ ಆಸರೆಗಾಗಿ ಕೈಗೋಲು ನೀಡಿದ್ದಾರೆ. ಇದರಿಂದ ಸಾಕಷ್ಟು ಅನುಕೂಲವಾಗಿದೆ. ಇನ್ನೊಬ್ಬರ ಆಸರೆ ಇಲ್ಲದೆ ಈ ಕೋಲಿನ ಸಹಾಯದಿಂದ ಹೊರಗೆ ಹೋಗಬಹುದಾಗಿದೆ. ಸಚಿವ ಅಶೋಕ್, ಶಾಸಕ ರಾಜುಗೌಡ ಊರಿಗೆ ಬಂದು ಈ ಸೌಲಭ್ಯ ಕೊಟ್ಟಿದ್ದು ಎಲ್ಲಿಲ್ಲದ ಖುಷಿ ತಂದಿದೆ. ದೇವರು ಇವರಿಗೆ ಒಳ್ಳೆಯದು ಮಾಡಲಿ. | ಮಹಾದೇವಿ ದೇವತ್ಕಲ್ ಫಲಾನುಭವಿ
ಇದು ದೇವರ ಊರು: ದೇವತ್ಕಲ್ ದೇವರ ಊರಾಗಿದೆ ಎಂದು ಆರ್.ಅಶೋಕ್ ಬಣ್ಣಿಸಿ ಊರವರ ಹೆಮ್ಮ, ಅಭಿಮಾನಕ್ಕೆ ಪಾತ್ರರಾದರು. ಕೃಷ್ಣಾ ಹಾಗೂ ಭೀಮಾ ನದಿಗಳ ಮಧ್ಯೆ ಈ ಊರಿದೆ. ಇದು ದೇವತೆಗಳು ವಾಸಿಸಿದ ಪುಣ್ಯ ಸ್ಥಾನ. ಅದಕ್ಕಾಗಿಯೇ ಇದಕ್ಕೆ ದೇವತ್ಕಲ್ ಹೆಸರು ಬಂದಿದೆ. ಈ ಗ್ರಾಮದ ಜನರ ದರ್ಶನಕ್ಕೆ ನಾನು ಹಾಗೂ ಮುಖ್ಯಮಂತ್ರಿ ಬಂದಿದ್ದೇವೆ ಎಂದು ಹೇಳಿದರು. ನಮ್ಮೂರಿಗೆ ದೇವರೂರು ಎಂದಿದ್ದು ಸ್ಥಳೀಯರ ಖುಷಿ ಇಮ್ಮಡಿಗೊಳಿಸಿತು.
ಅಂಗಾಂಗ ವೈಫಲ್ಯದಿಂದ ಜೀವನ ಮುಗಿಯಿತೆಂದು ನಿತ್ಯ ಕಣ್ಣೀರು ಸುರಿಸುತ್ತಿದ್ದ ಕುಟುಂಬದಲ್ಲಿ ಹೊಸ ಆಶಾಕಿರಣ ಮೂಡಿಸಿತು. ದೃಷ್ಠಿ, ಶ್ರವಣ ದೋಷ, ಅಂಗವೈಕಲ್ಯ ಇದ್ದವರಿಗೆ ಸಲಕರಣೆ ವಿತರಿಸಿ ಸ್ವಾಭಿಮಾನದಿಂದ ಜೀವನ ಸಾಗಿಸಿ ಎಂದು ಸಚಿವರು ಧೈರ್ಯ ಹೇಳಿದರು. ನಾವು ನಿಮ್ಮೊಂದಿಗಿದ್ದೇವೆ ಎಂದು ನೈತಿಕ ಬಲ ತುಂಬಿದಾಗ ಫಲಾನುಭವಿಗಳ ಕಣ್ಣಲ್ಲಿ ನೀರು ಜಿನುಗಿತು. ಈ ದೃಶ್ಯಕ್ಕೆ ಸಾಕ್ಷೀಕರಿಸಿದ್ದು ದೇವತ್ಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣ. ಆರ್.ಅಶೋಕ್ ಕ್ಷಣ ಕ್ಷಣದ ಸಮಯವನ್ನು ಕಿಂಚಿತ್ತೂ ವ್ಯರ್ಥ ಮಾಡದೆ ಜನರಿಗಾಗಿ ಮೀಸಲಿಟ್ಟರು. ವಿವಿಧ ಇಲಾಖೆ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಆದೇಶ ಪತ್ರಗಳ ವಿತರಣೆ ನಡೆಯಿತು. ಈ ವೇಳೆ ಜನರ ಸಮಸ್ಯೆಗಳಿಗೆ ಕಿವಿಯಾದರು. ಫಲಾನುಭವಿಗಳಿಗೆ ಆದೇಶ ಪತ್ರ, ಸಲಕರಣೆ ವಿತರಣೆ ಜತೆಗೆ ಅವರಿಗೆ ಸ್ವಾಭಿಮಾನಿ ಜೀವನ ಸಾಗಿಸುವಂತೆ ಕಿವಿಮಾತು ಹೇಳಿದರು. ಅಪಘಾತದಲ್ಲಿ ಕಾಲು ಕಳೆದುಕೊಂಡ ವ್ಯಕ್ತಿಗೆ ಕೃತಕ ಕಾಲು ಜೋಡಣೆಯ ಸಂದರ್ಭದಲ್ಲಿ ಅಶೋಕ್ ಹಾಗೂ ರಾಜುಗೌಡ ಆತನಿಗೆ ಹೆಗಲು ಕೊಟ್ಟು ಇನ್ಮುಂದೆ ನೀನು ಆರಾಮ ಓಡಾಡಬಹುದು. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಸಂಸಾರದ ಬಂಡಿ ಎಳೆಯುವಂತೆ ಸ್ಥೈರ್ಯ ತುಂಬಿದರು. ನಾನಾ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ, ಚೆಕ್ ವಿತರಣೆ ನಡೆಯಿತು.
ದೇವತ್ಕಲ್ ಗ್ರಾಮದಲ್ಲಿ ಅರ್ಜಿದಾರರು ಮನವಿ ಮಾಡಿದ 10 ನಿಮಿಷದಲ್ಲೇ ಸಚಿವ ಅಶೋಕ್ ಜಾತಿ-ಆದಾಯ ಪ್ರಮಾಣ ಪತ್ರ ವಿತರಿಸಿದರು. ಅರ್ಜಿದಾರರ ಸಮಸ್ಯೆ ಆಲಿಸಿ, ಸ್ಥಳದಲ್ಲಿದ್ದ ಡಿಸಿ ಡಾ.ರಾಗಪ್ರಿಯ ಅವರಿಗೆ ಸೂಚಿಸಿದ ಸಚಿವರು ಕ್ಷಣಾರ್ಧದಲ್ಲಿಯೇ ದಾಖಲೆ ಪರಿಶೀಲಿಸಿ ಸ್ಥಳದಲ್ಲೇ ಪ್ರಮಾಣಪತ್ರ ಹಸ್ತಾಂತರಿಸಿದರು. ಸಚಿವರು 627 ಅರ್ಜಿಗಳನ್ನು ಸ್ವೀಕರಿಸಿದ್ದು, ಆಯಾ ಇಲಾಖೆಗಳಿಗೆ ವಿಲೇವಾರಿ ಮಾಡುವಂತೆ ಸೂಚನೆ ನೀಡಿದರು. ಕಂದಾಯ ಇಲಾಖೆ 207, ಪಂಚಾಯತ್ರಾಜ್ ಇಲಾಖೆ 166 ಹಾಗೂ ವಿಕಲಚೇತನರ ಇಲಾಖೆಗೆ ಸಂಬಂಧಿಸಿದ 38 ಅರ್ಜಿ ಬಂದವು. ಶೀಘ್ರ ಇವೆಲ್ಲವನ್ನೂ ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿದರು. ನಮ್ಮ ಸರ್ಕಾರ ಕೊಟ್ಟ ಭರವಸೆಯಂತೆ ನಡೆದುಕೊಳ್ಳುತ್ತಿದೆ. ದೇವತ್ಕಲ್ ಗ್ರಾಮದ ಹಲವು ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.