ಹಳ್ಳಿ ಫೈಟ್​ಗೆ ಸಿದ್ಧತೆ ಶುರು

election
Published on

ರೋಣ: ಕರೊನಾ ಹಿನ್ನ್ನೆಲೆಯಲ್ಲಿ ಕಳೆದ ಐದಾರು ತಿಂಗಳಿನಿಂದ ಮಂಕು ಆವರಿಸಿದ್ದ ಗ್ರಾಮೀಣ ಭಾಗದಲ್ಲಿ ಈಗ ಗ್ರಾಮ ಪಂಚಾಯಿತಿ ಚುನಾವಣೆಯ ರಂಗು ಕಾಣತೊಡಗಿದೆ.

ಈಗಾಗಲೇ ರಾಜ್ಯ ಚುನಾವಣಾ ಆಯೋಗವು ವಾರ್ಡ್​ಗಳ ಮೀಸಲಾತಿ, ಮತದಾರರ ಪಟ್ಟಿಗಳ ಪರಿಷ್ಕರಣೆ ಪ್ರಕಟಿಸಿ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಮತದಾನದ ದಿನಾಂಕ ಯಾವುದೇ ಕ್ಷಣದಲ್ಲಿ ಘೊಷಣೆಯಾಗುವ ನಿರೀಕ್ಷೆಯಿದೆ.

ಐದಾರು ತಿಂಗಳುಗಳಿಂದ ಹಳ್ಳಿಗಳಲ್ಲಿನ ಹರಟೆ ಕಟ್ಟೆಯಲ್ಲಿ ಕರೊನಾ ಸೋಂಕಿನದೇ ಮಾತು ಕೇಳಿ ಬರುತ್ತಿತ್ತು. ಆದರೀಗ ಎಲ್ಲ 27 ಗ್ರಾ.ಪಂ.ಗಳಲ್ಲಿ ಚುನಾವಣೆಯದ್ದೇ ಮಾತು. ಯಾವ ವಾರ್ಡಿಗೆ ಯಾರು ನಿಲ್ಲಬಹುದು? ಯಾವ ವಾರ್ಡಿನಲ್ಲಿ ಯಾವ ಜಾತಿಯ ಮತಗಳೆಷ್ಟು? ಬಿಜೆಪಿ- ಕಾಂಗ್ರೆಸ್ ಮುಖಂಡರು ಯಾರಿಗೆ ಮಣೆ ಹಾಕಬಹುದು? ಎಂಬಿತ್ಯಾದಿ ವಿಷಯಗಳ ಚರ್ಚೆ ನಡೆಯುತ್ತಿದೆ.

ಉದ್ಯೋಗ ಖಾತ್ರಿ ಸೇರಿ ವಿವಿಧ ಯೋಜನೆಗಳಲ್ಲಿ ತಾಪಂಗಿಂತ ಹೆಚ್ಚಿನ ಅನುದಾನ ಗ್ರಾಪಂಗೆ ಬರುತ್ತಿದೆ. ಇದರಿಂದಾಗಿ, ತಾಲೂಕು ಪಂಚಾಯಿತಿ ಮಟ್ಟದಲ್ಲಿ ರಾಜಕಾರಣ ಮಾಡಬೇಕಿದ್ದವರೂ ಈಗ ಗ್ರಾಪಂ ಅಧ್ಯಕ್ಷರಾದರೆ ಸಾಕು ಎನ್ನತೊಡಗಿದ್ದಾರೆ.

ಓಲೈಕೆ ಜೋರು

ಚುನಾವಣೆ ಅಕಾಂಕ್ಷಿಗಳು ಈಗಾಗಲೇ ತಮ್ಮ ತಮ್ಮ ವಾರ್ಡಿನ ಜನರ ಓಲೈಕೆಯಲ್ಲಿ ತೊಡಗಿದ್ದಾರೆ. ಓಣಿಯಲ್ಲಿ ಹಿರಿಯರಾದವರು ಹೊರಟರೇ ತಕ್ಷಣ ಎದ್ದು ನಿಲ್ಲುವುದು, ಕೈಮುಗಿದು ನಮಸ್ಕರಿಸುವುದು ಎಲ್ಲೆಡೆ ಜೋರಾಗಿದೆ. ವಯೋವೃದ್ಧರು ಕೆಮ್ಮಿದರೆ ಸಾಕು ಅವರನ್ನು ಕರೆದುಕೊಂಡು ಹೋಗಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿರುವ ಕರೊನಾ ಟೆಸ್ಟ್ ಮಾಡಿಸುವುದು, ಶಾಲಾ ಮಕ್ಕಳಿಗೆ ನೋಟ್​ಬುಕ್, ಕ್ರೀಡಾಪಟುಗಳಿಗೆ ಕ್ರೀಡಾ ಸಾಮಗ್ರಿಗಳ ವಿತರಣೆ, ದೇವಸ್ಥಾನಗಳಲ್ಲಿ ಪ್ರಸಾದ ವ್ಯವಸ್ಥೆ, ಯಾವುದೇ ಕಾರ್ಯಕ್ರಮಗಳಾಗಿರಲಿ ಉದಾರವಾಗಿ ದೇಣಿಗೆ ನೀಡುವ ಕೆಲಸಕ್ಕೆ ಆಕಾಂಕ್ಷಿಗಳು ಮುಂದಾಗಿದ್ದಾರೆ. ಆಕಾಂಕ್ಷಿಗಳು ತಮ್ಮ ವಾರ್ಡಿನ ಕೆಲ ಹಿರಿಯರನ್ನು ಕರೆದುಕೊಂಡು ಬಿಜೆಪಿಯ ಹಾಲಿ ಶಾಸಕ ಕಳಕಪ್ಪ ಬಂಡಿ ಹಾಗೂ ಕಾಂಗ್ರೆಸ್​ನ ಮಾಜಿ ಶಾಸಕ ಜಿ.ಎಸ್. ಪಾಟೀಲರ ಮನೆಗೆ ಪರೇಡ್ ಕೂಡ ನಡೆಸಿದ್ದಾರೆ.

ಚಹಾದಂಗಡಿಗಳಿಗೆ ಶುಕ್ರದೆಸೆ

ಕರೊನಾ ಹಿನ್ನೆಲೆಯಲ್ಲಿ ಕಳೆದ ಐದಾರು ತಿಂಗಳಿನಿಂದ ವ್ಯವಹಾರವಿಲ್ಲದೆ ಬಿಕೋ ಎನ್ನುತ್ತಿದ್ದ ಚಹಾದಂಗಡಿಗಳಿಗೆ ಈಗ ಶುಕ್ರದಸೆ ಶುರುವಾಗಿದೆ. ‘ರೀ ಶಟ್ರ್ ಅಲ್ಲಿ ಕಟ್ಟಿಮ್ಯಾಲ್ ಕುಳಿತಾರ ನೋಡ್ರೀ ಅವರೆಲ್ಲರಿಗೂ ಸಕ್ಕರಿ ಮುಂದ ಮಾಡಿ ಒಳ್ಳೆಯ ಕೇಟಿ ಸೋಸಿ ಕೋಡ್ರಿ. ಇನ್ನು ಮುಂದೆ ನನ್ನ ಹೆಸರು ಹೇಳಿ ಯಾರೇ ಬಂದ್ರೂ ಚಹಾ ಫ್ರೀಯಾಗಿ ಕೋಡ್ರಿ’ ಎಂದು ಚುನಾವಣೆ ಆಕಾಂಕ್ಷಿಗಳು ಚಹಾದಂಗಡಿಯವರಿಗೆ ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net